More

    ಬೂದಿಗುಂಡಿಯಲ್ಲಿ ಉತ್ಖನನ ಶೀಘ್ರ : ಸಹಾಯಕ ಪುರಾತತ್ವ ತ್ವಜ್ಞ ಡಾ. ಆರ್.ಎನ್. ಕುಮಾರನ್ ಮಾಹಿತಿ

    ತ್ಯಾಮಗೊಂಡ್ಲು : ರಾಜ್ಯ ಪುರಾತತ್ವ ಇಲಾಖೆ ಗುರುತಿಸಿರುವ ಬೂದಿಗುಂಡಿಯಲ್ಲಿ ಶೀಘ್ರವೇ ಉತ್ಖನನ ಕಾರ್ಯ ಆರಂಭವಾಗಲಿವೆ. ಈ ಸಂಬಂಧ ಗ್ರಾಪಂನಿಂದ ನಿರಾಕ್ಷೇಪಣಾ ಪತ್ರವೂ ದೊರೆತಿದೆ ಎಂದು ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಹಾಯಕ ಪುರಾತತ್ವ ತಜ್ಞ ಡಾ. ಆರ್‌ನ.ಎನ್. ಕುಮಾರನ್ ತಿಳಿಸಿದರು.

    ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಿಶ್ವ ಪರಂಪರಾ ಸಪ್ತಾಹದ ಅಂಗವಾಗಿ ಶನಿವಾರ ಆಯೋಜಿಸಿದ್ದ ವಿಶ್ವ ಪರಂಪರಾ ನಡಿಗೆ ನಂತರ ಏರ್ಪಡಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಣ್ಣೆ ಗ್ರಾಮದಲ್ಲಿ ಗಂಗರ ಕಾಲದ ಸ್ಮಾರಕಗಳ ರಕ್ಷಣೆ ಹಾಗೂ ಅದಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಸರ್ವೇಕ್ಷಣೆ ಕಾರ್ಯ ಆರಂಭವಾಗಿದೆ. ಈ ದೇವಾಲಯಗಳ ಸಂರಕ್ಷಣೆ ಜತೆಗೆ ಬೂದಿಗುಂಡಿಯಲ್ಲಿ ಉತ್ಖನನವನ್ನೂ ಕೈಗೊಳ್ಳಲಾಗುವುದು ಎಂದರು.

    ಇತಿಹಾಸ ತಜ್ಞ ಡಾ. ಎಚ್.ಎಸ್. ಗೋಪಾಲರಾವ್ ಮಾತನಾಡಿ, 9ರಿಂದ 12ನೇ ಶತಮಾನಗಳ ಅವಧಿಯಲ್ಲಿ ರಾಜ್ಯವನ್ನು ಆಳಿದ ಅನೇಕ ಪ್ರಬಲ ರಾಜವಂಶಗಳಲ್ಲಿ ಗಂಗರು ಒಬ್ಬರು. ಮೊದಲು ಕೋಲಾರ ಇವರ ರಾಜಧಾನಿಯಾಗಿತ್ತು. ನಂತರ ಅದನ್ನು ಮಾನ್ಯಪುರಕ್ಕೆ (ಮಣ್ಣೆ) ಬದಲಿಸಿದರು. ಅಂತಿಮವಾಗಿ ತಲಕಾಡುಗೆ ಸ್ಥಳಾಂತರಗೊಂಡರು ಎಂದು ವಿವರಿಸಿದರು.

    ಗಂಗರ ರಾಜಧಾನಿ ಮಣ್ಣೆ (ಮಾನ್ಯಪುರ) ಇಂದು ನಿರ್ಲಕ್ಷ್ಯದ ಅವಶೇಷಗಳಾಗಿವೆ. ಗಂಗರ ತಲಕಾಡು ಮತ್ತು ಕೋಲಾರದ ಇತಿಹಾಸದ ಮಾಹಿತಿ ಕಲೆ ಹಾಕಿದಂತೆ ಮಣ್ಣೆಯ ಇತಿಹಾಸ ಪರಿಪೂರ್ಣವಾಗಿ ಪತ್ತೆ ಮಾಡಲು ಅನೇಕ ತಜ್ಞರು ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಆದರೂ ಪ್ರಯತ್ನಗಳು ನಿಂತಿಲ್ಲ ಎಂದು ಹೇಳಿದರು.

    ಅಧಿಕಾರಿಗಳಷ್ಟೆ ಅಲ್ಲದೆ ಗ್ರಾಮಸ್ಥರು ಮುತುವರ್ಜಿ ವಹಿಸಿದರೆ ಮಾತ್ರ ಗಂಗ ಸಾಮ್ರಾಜ್ಯದ ಇತಿಹಾಸದ ಪಳೆಯುಳಿಕೆ ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಲು ಸಾದ್ಯ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಹಿರಿಯ ವಕೀಲ ಎಚ್.ವೆಂಕಟೇಶ್ ದೊಡ್ಡೇರಿ ಹೇಳಿದರು.
    ಇದಕ್ಕೂ ಮುನ್ನ ಸೋಮೇಶ್ವರ ದೇವಾಲಯದಿಂದ ಆರಂಭವಾದ ವಿಶ್ವ ಪರಂಪರಾ ನಡಿಗೆಕೆರೆ ಬದಿಯ ಸಪ್ತ ಮಾತೃಕೆಯರ ವಿಗ್ರಹವಿರುವ ಸ್ಥಳ, ಕಪಿಲೇಶ್ವರ ದೇವಾಲಯ, ಅಕ್ಕ ತಂಗಿಯರ ಗುಡಿ, ಜಿನಾಲಯ ಹಾದು ಅವಶೇಷಗಳನ್ನು ರಕ್ಷಿಸಿಟ್ಟಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಪನ್ನಗೊಂಡಿತು.

    ಸಹಾಯಕ ಪುರಾತತ್ವ ತಜ್ಞೆ ಡಾ. ಎಂ. ಶರಣ್ಯಾ, ಸರ್ವೇಯರ್‌ಗಳಾದ ಎಂ. ಮುರಳಿ ಮೋಹನ್, ಪಿ. ಚಂದನ್ ಪ್ರಕಾಶ್, ವಾಸ್ತುಶಿಲ್ಪಿ ಯಶಸ್ವಿನಿ ಶರ್ಮ, ಪಿಡಿಒ ಎನ್. ಸಿದ್ದರಾಜಯ್ಯ, ಗ್ರಾಪಂ ಮಾಜಿ ಸದಸ್ಯ ಎಂ. ಕರಿಗಿರಿಯಪ್ಪ, ಮುಖಂಡ ಪಣಮದಲಿ ರಾಮಣ್ಣ, ಯಜಮಾನ್ ಕರಿಗಿರಿಯಪ್ಪ, ಎಂ.ಮಾಸ್ತಯ್ಯ, ಎಂ. ವೆಂಕಟೇಶ್, ವೀರಭದ್ರಯ್ಯ, ಎಂ.ಗೋವಿಂದರಾಜು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts