More

    ಅಂತರಗಂಗೆ ಜೀವವೈವಿಧ್ಯ ಪಾರಂಪರಿಕ ತಾಣ

    ವಿಜಯವಾಣಿ ಸುದ್ದಿಜಾಲ ಕೋಲಾರ
    ಕೋಲಾರದ ಅಂತರಗಂಗೆ ಬೆಟ್ಟ ಜೀವವೈವಿಧ್ಯ ಪಾರಂಪರಿಕ ತಾಣವಾಗಿ ಘೋಷಣೆಯಾಗಲಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಸಹಾಯಕ ಸಂಶೋಧಕ (ಪ್ರಾಣಿಶಾಸ್ತ್ರ) ಪ್ರೀತಂ ಹೇಳಿದರು.
    ತಾಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಾಮಾಜಿಕ ಅರಣ್ಯ ವಿಭಾಗದಿಂದ ಬುಧವಾರ ಆಯೋಜಿಸಿದ್ದ ಜೀವವೈವಿಧ್ಯ ಸಂರಕ್ಷಣೆ ಜಾಗೃತಿ ಅಭಿಯಾನದಲ್ಲಿ ಮಾತನಾಡಿ, ಅಂತರಗಂಗೆ ಬೆಟ್ಟ ಅನೇಕ ಜೀವವೈವಿಧ್ಯತೆ ಹೊಂದಿದೆ. ಪಾರಂಪರಿಕ ತಾಣವಾಗಿ ಘೋಷಿಸುವುದರಿಂದ ಅತಿಕ್ರಮಣ ತಡೆಯುವ ಜತೆಗೆ ಸಂಪನ್ಮೂಲ ರಕ್ಷಿಸಿ ಮುಂದಿನ ಪೀಳಿಗೆಗೆ ದೊರೆಯುವಂತೆ ಮಾಡಲು ಸಾಧ್ಯವಾಗಲಿದೆ ಎಂದರು.
    ಮುಳಬಾಗಿನ ಹನುಮನಹಳ್ಳಿಯಲ್ಲಿ ಜಗತ್ತಿನಲ್ಲೇ ಎಲ್ಲೂ ಕಂಡುಬರದ ಎಲೆ ಮೂತಿಯ ಬಾವಲಿಗಳು ಕಂಡುಬಂದಿದ್ದು, ಅರಣ್ಯ ಇಲಾಖೆ ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ. ಸ್ಥಳೀಯ ಗ್ರಾಪಂ ಹಾಗೂ ತಾಪಂ ಮೂಲಕ ಜೀವ ವೈವಿಧ್ಯ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಜೀವವೈವಿಧ್ಯ ಪಾರಂಪರಿಕ ತಾಣವಾಗಿ ಘೋಷಣೆಯಾಗಲಿದೆ ಎಂದರು.
    ರಾಜ್ಯದ ಎಲ್ಲ 6022 ಗ್ರಾಪಂಗಳಲ್ಲೂ ಪಂಚಾಯಿತಿ ಮಟ್ಟದಲ್ಲಿ ಜನತಾ ಜೀವವೈವಿಧ್ಯ ರಿಜಿಸ್ಟರ್ (ಪಿಬಿಆರ್) ರಚಿಸಲು ಸೂಚಿಸಲಾಗಿತ್ತು. ಜಿಲ್ಲೆಯ 156 ಗ್ರಾಪಂಗಳಿಂದ ಶೀಘ್ರ ಮಂಡಳಿಗೆ ಪಿಬಿಆರ್ ಸಲ್ಲಿಸಬೇಕು. ರಿಜಿಸ್ಟರ್‌ನಿಂದ ಸ್ಥಳೀಯ ಜೀವವೈವಿಧ್ಯತೆ ಹಾಗೂ ಇನ್ನಿತರ ವಿಶೇಷತೆಗಳ ಹಕ್ಕು ಪಂಚಾಯಿತಿಯದ್ದಾಗುತ್ತದೆ. ಭೌತಿಕ ಆಸ್ತಿ ಕಳವು ತಡೆಯಬಹುದು, ಪಂಚಾಯಿತಿಗೆ ವರಮಾನವೂ ಸಿಗುತ್ತದೆ ಎಂದರು.
    ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮುಂದೆ ಪಿಟಿಷನ್ ಸಲ್ಲಿಕೆಯಾಗಿದ್ದು, ಪಿಬಿಆರ್ ಸಿದ್ಧಪಡಿಸುವಲ್ಲಿನ ವಿಳಂಬಕ್ಕೆ ಪ್ರತಿ ತಿಂಗಳು 10 ಲಕ್ಷ ರೂ. ದಂಡ ನಿಗದಿಪಡಿಸಿದೆ. ದಂಡದ ಮೊತ್ತ ಗ್ರಾಪಂ, ಅರಣ್ಯ ಇಲಾಖೆ ಅಥವಾ ಯಾವ ಅಧಿಕಾರಿ ಭರಿಸಬೇಕೆಂಬು ಇಷ್ಟರಲ್ಲೇ ನಿರ್ಧಾರವಾಗಲಿರುವುದರಿಂದ ಆದಷ್ಟು ಬೇಗ ಪಿಬಿಆರ್ ಸಿದ್ಧಪಡಿಸಿ ಸಲ್ಲಿಸಬೇಕು ಎಂದರು.
    ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ್ ಮಾತನಾಡಿ, ಕೋಲಾರ ತಾಲೂಕಿನ 8 ಗ್ರಾಪಂಗಳ ಪಿಬಿಆರ್ ಸಿದ್ಧವಾಗಿದೆ. 3ತಿಂಗಳೊಳಗೆ ಜಿಲ್ಲೆಯ ಎಲ್ಲ ಗ್ರಾಪಂಗಳ ರಿಜಿಸ್ಟರ್ ಸಿದ್ದಪಡಿಸಿ ಸಲ್ಲಿಸಲಾಗುವುದು ಎಂದರು.
    ಪರಿಸರಪ್ರೇಮಿ ತ್ಯಾಗರಾಜ್ ಮಾತನಾಡಿ, ಕೆಜಿಎಫ್‌ನಲ್ಲಿ ಅಪರೂಪದ ಕೃಷ್ಣಮೃಗಗಳಿದ್ದು, ಅವುಗಳ ಸಂರಕ್ಷಣೆಗೆ ಕ್ರಮ ವಹಿಸಬೇಕು. ಸರ್ಕಾರದ ಆದೇಶದಂತೆ ನೀಲಗಿರಿ ತೆರವುಗೊಳಿಸಲಾಗುತ್ತಿದ್ದು, ಕಾಡುಹಂದಿಗಳು ಬೆಳೆ ಹಾನಿ ಮಾಡುತ್ತಿವೆ. ರಸ್ತೆ ಬದಿ ಮರ ತೆರವುಗೊಳಿಸಿದ ನಂತರ ಪರ‌್ಯಾಯವಾಗಿ ಸಸ ನೆಡುವ ಕಾರ್ಯ ಆಗುತ್ತಿಲ್ಲ ಎಂದರು.
    ತಾಪಂ ಉಪಾಧ್ಯಕ್ಷೆ ಸಿ. ಲಕ್ಷ್ಮೀ, ಜೀವ ವೈವಿಧ್ಯ ತಾಲೂಕು ಸಮಿತಿ ಅಧ್ಯಕ್ಷ ಸಾ.ಮಾ. ಪ್ರಸನ್ನ, ಸದಸ್ಯರಾದ ಮುದ್ದುಮಣಿ, ಗೋವಿಂದಪ್ಪ, ಮಂಡಳಿ ತಾಂತ್ರಿಕ ಅಧಿಕಾರಿ ನಿಖಿಲ್, ಆರ್‌ಎಫ್‌ಒ ಬಿಂದು, ಎಆರ್‌ಎಫ್‌ಒ ಮನೋಹರ್, ತಾಪಂ ವ್ಯವಸ್ಥಾಪಕ ಲಕ್ಷ್ಮೀಶ ಕಾಮತ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts