More

    ಇಲ್ಲಿದ್ದಾರೆ ನೋಡಿ ಭಾರತದ ಭವಿಷ್ಯದ ಬಾಕ್ಸಿಂಗ್ ಸ್ಟಾರ್ಸ್!

    ಒಂದೆಡೆ ಭಾರತ ಕರೊನಾ ಸಂಕಷ್ಟಕ್ಕೆ ಸಿಲುಕಿದ್ದರೆ ಇನ್ನೊಂದೆಡೆ ಭಾರತದ ಕೆಲವು ಕ್ರೀಡಾಪಟುಗಳು ಭಾರತಕ್ಕೆ ಇನ್ನೊಂದಿಷ್ಟು ಹಿರಿಮೆಯ ಗರಿ ಅಂಟಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಬೆಂಬಿಡದೆ ಕಾಡುತ್ತಿರುವ ಸೋಂಕಿನ ನಡುವೆಯೂ ಬಾಕ್ಸಿಂಗ್ ಅಭ್ಯಾಸವನ್ನು ಕೈಬಿಡದೆ, ವಿಶ್ವ ಯುವ ಬಾಕ್ಸಿಂಗ್ ಚಾಂಪಿಯನ್​ಷಿಪ್​ನಲ್ಲಿ ಭಾರತದ ಹೆಸರನ್ನು ಅಗ್ರಸ್ಥಾನಕ್ಕೇರಿಸಿ ಬಂದಿದ್ದಾರೆ ನಮ್ಮ ಯುವ ಬಾಕ್ಸರ್​ಗಳು.

    ರಘುನಾಥ್ .ಡಿ.ಪಿ

    ವಿಶ್ವ ಬಾಕ್ಸಿಂಗ್ ಕ್ಷೇತ್ರದಲ್ಲಿ ಭಾರತಕ್ಕೆ ಅಂಥ ದೊಡ್ಡ ಮಟ್ಟದ ಹೆಸರು ಇಲ್ಲದಿದ್ದರೂ ತಕ್ಕಮಟ್ಟಿಗೆ ತನ್ನದೇ ಛಾಪು ಮೂಡಿಸಿದೆ. ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಬಾಕ್ಸರ್​ಗಳಿಗೇನೂ ಭಾರತದಲ್ಲಿ ಕೊರತೆ ಇಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಬಾಕ್ಸರ್​ಗಳೂ ನಮ್ಮ ದೇಶದಲ್ಲಿದ್ದಾರೆ. ವಿಶ್ವ ಚಾಂಪಿಯನ್​ಷಿಪ್, ಒಲಿಂಪಿಕ್ಸ್ ಹೀಗೆ ವಿಶ್ವಮಟ್ಟದ ಪ್ರತಿಷ್ಠಿತ ಬಾಕ್ಸಿಂಗ್ ಟೂರ್ನಿಗಳಲ್ಲಿ ಪದಕ ಜಯಿಸಿದ ಬಾಕ್ಸರ್​ಗಳಿದ್ದಾರೆ. ಸರಿತಾ ದೇವಿ, ಪಿಂಕಿ ಜಾಂಗ್ರಾ, ದೇವೇಂದ್ರ ಸಿಂಗ್, ಅಖಿಲ್ ಕುಮಾರ್, ವಿಕಾಸ್ ಯಾದವ್, ಶಿವ ಥಾಪಾ.. ಹೀಗೆ ಬಾಕ್ಸರ್​ಗಳ ಪಟ್ಟಿ ಬೆಳೆಯುತ್ತದೆ. ಅದರಲ್ಲೂ ಭಾರತದಲ್ಲಿ ಬಾಕ್ಸಿಂಗ್ ಎಂದ ತಕ್ಷಣ ಮೊದಲಿಗೆ ನೆನಪಾಗುವುದೇ ಮೇರಿ ಕೋಮ್ ಪುರುಷರ ವಿಭಾಗದಲ್ಲಿ ವಿಜೇಂದರ್ ಸಿಂಗ್. ಮೇರಿ ಕೋಮ್ 6 ಬಾರಿ ವಿಶ್ವಚಾಂಪಿಯನ್ ಆಗಿದ್ದರೆ, ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್​ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಆದರೆ, ಇವರ ವೃತ್ತಿಜೀವನ ಬಹುತೇಕ ಸಂಧ್ಯಾಕಾಲಕ್ಕೆ ಬಂದು ತಲುಪಿದೆ. ಇವರಾದ ಮೇಲೆ ಭವಿಷ್ಯದ ಬಾಕ್ಸಿಂಗ್​ನಲ್ಲಿ ನೊಗ ಹೊರುವವರು ಯಾರು ಎಂಬ ಪ್ರಶ್ನೆ ಕೇಳಿ ಬರುತ್ತಲೇ ಇತ್ತು. ಇದಕ್ಕೆ ಇತ್ತೀಚೆಗೆ ಪೋಲೆಂಡ್​ನಲ್ಲಿ ನಡೆದ ಎಐಬಿಎ ಯೂತ್ ಪುರುಷರ ಹಾಗೂ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್​ಷಿಪ್​ನಲ್ಲಿ ಉತ್ತರ ಸಿಕ್ಕಿದೆ.

    ಭಾರತದ ಬಾಕ್ಸರ್​ಗಳು 8 ಸ್ವರ್ಣ ಪದಕ ಜಯಿಸುವ ಮೂಲಕ ಭವಿಷ್ಯದ ಭರವಸೆಯಾಗಿ ಮೂಡಿ ಬಂದಿದ್ದಾರೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳೇ ಪದಕ ಜಯಿಸಿರುವುದು ಹೆಮ್ಮೆಯ ಸಂಗತಿ. ಕೂಟದ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಪಡೆಯುವ ಮೂಲಕ ಎಲ್ಲರ ಗಮನ ಸೆಳೆಯಿತು. 52 ದೇಶಗಳಿಂದ ಸುಮಾರು 414 ಬಾಕ್ಸರ್​ಗಳು ಸ್ಪರ್ಧಿಸಿದ್ದ ಈ ಕೂಟದಲ್ಲಿ ವಿವಿಧ ತೂಕದ ವಿಭಾಗದಲ್ಲಿ ಭಾರತೀಯರೇ ಗಮನಾರ್ಹ ಪ್ರದರ್ಶನ ತೋರಿದರು. ಅಲ್ಲದೆ, ಭವಿಷ್ಯದಲ್ಲಿ ಒಲಿಂಪಿಕ್ಸ್, ವಿಶ್ವ ಚಾಂಪಿಯನ್​ಷಿಪ್​ನಂಥ ಪ್ರತಿಷ್ಠಿತ ಕೂಟಗಳಲ್ಲಿ ಪದಕದ ಭರವಸೆ ಮೂಡಿಸಿದ್ದಾರೆ. ಕೂಟದಲ್ಲಿ ಸ್ಪರ್ಧಿಸಿದ್ದ 20 ಸದಸ್ಯರ ಭಾರತ ತಂಡ, 8 ಸ್ವರ್ಣ, 3 ಕಂಚು ಸೇರಿದಂತೆ 11 ಪದಕ ಜಯಿಸಿ ಇತಿಹಾಸ ನಿರ್ವಿುಸಿದೆ. 2018ರಲ್ಲಿ 10 ಪದಕ ಜಯಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ರಷ್ಯಾ, ಉಜ್ಬೆಕಿಸ್ತಾನ, ಕಜಕಸ್ಥಾನ, ಉಕ್ರೇನ್, ಜಪಾನ್​ನಂಥ ತಂಡಗಳ ಮುಂದೆ ಭಾರತದ ಬಾಕ್ಸರ್​ಗಳು ಮೇಲುಗೈ ಸಾಧಿಸಿದ್ದು ವಿಶೇಷ.

    ಭಾರಿ ಅಂತರದ ಗೆಲುವು

    ಭಾರತೀಯ ಬಾಕ್ಸರ್​ಗಳು ವಿಶ್ವ ಯುವ ಬಾಕ್ಸಿಂಗ್ ಚಾಂಪಿಯನ್​ಷಿಪ್​ನಲ್ಲಿ ಭಾರಿ ಅಂತರದೊಂದಿಗೆ ಗೆಲುವಿನ ಪೀಠ ಅಲಂಕರಿಸಿದ್ದಾರೆ. 75 ಕೆಜಿ ವಿಭಾಗದಲ್ಲಿ ಮೇರಿ ಕೋಮ್ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಸನಾಮಚಾ ಕಜಕಿಸ್ತಾನದ ಡಾನಾ ಡಿಡೇ ಅವರಿಗೆ ಎದುರಾಗಿದ್ದರು. ಈ ಪಂದ್ಯದಲ್ಲಿ 5-0 ಅಂತರದಿಂದ ಭಾರತ ಜಯಭೇರಿ ಬಾರಿಸಿದೆ. ಅದೇ ರೀತಿ ಮಹಾರಾಷ್ಟ್ರದ ಅಲ್ಪಿಯಾ ಕೂಡ ಯುರೋಪ್​ನ ಡೇರಿಯಾ ವಿರುದ್ಧ 5-0 ಅಂತರದಲ್ಲಿ ಗೆದ್ದು ಬೀಗಿದರು. ಎರಡು ಬಾರಿ ಯುರೋಪಿಯನ್ ಚಾಂಪಿಯನ್ ಆಗಿದ್ದ ಇಟಲಿಯ ಎರಿಕಾ ಪ್ರಿಸ್ಕಿಯಾಂಡಾರೊಳನ್ನು ಹರಿಯಾಣದ ಗೀತಿಕಾ 5-0 ಅಂತರದಿಂದ ಸೋಲಿಸಿದರು. ಹಾಗೆಯೇ ಏಷ್ಯನ್ ಯೂತ್ ಚಾಂಪಿಯನ್ ಆಗಿರುವ ಬಾಬಿ ರೊಜಿಸಾನಾ (51 ಕೆಜಿ) ಮತ್ತು ಪೂನಂ (57 ಕೆಜಿ) ಕೂಡ 5-0 ಅಂತರದೊಂದಿಗೆ ಜಯ ಗಳಿಸಿ ಭಾರತದ ಚಿನ್ನದ ಪದಕಗಳನ್ನು ಹೆಚ್ಚಿಸಿದರು.

    ಪದಕ ಜಯಿಸಿದವರು

    ಗೀತಿಕಾ – 48 ಕೆಜಿ, ನೊರೆಮ್ ಚಾನು -51 ಕೆಜಿ, ಪೂನಂ -57 ಕೆಜಿ, ವಿಂಕಾ – 60 ಕೆಜಿ, ಅರುಂಧತಿ ಚೌಧರಿ – 69 ಕೆಜಿ, ಟಿ. ಸನಾಮಚಾ ಚಾನು -75 ಕೆಜಿ, ಅಲ್ಪಿಯಾ ಪಠಾಣ್ – 81 ಕೆಜಿ ಮೇಲ್ಪಟ್ಟವರು.

    ಕೋಟ್​

    ಇದು ನಮ್ಮ ಯುವ ಬಾಕ್ಸರ್​ಗಳ ಒಂದು ಅದ್ಭುತ ಪ್ರಯತ್ನ. ಏಕೆಂದರೆ ಕಳೆದ ವರ್ಷ ಕರೊನಾದಿಂದಾಗಿ ಬಾಕ್ಸಿಂಗ್ ಅಭ್ಯಾಸಕ್ಕೆ ಹೆಚ್ಚಿನ ಅವಕಾಶವೇ ಸಿಕ್ಕಿರಲಿಲ್ಲ, ಎಲ್ಲರೂ ಮನೆಯಲ್ಲಿಯೇ ಇರುವಂತಾಗಿತ್ತು. ಆದರೆ ನಮ್ಮ ತರಬೇತುದಾರರು, ಸಿಬ್ಬಂದಿ ಮತ್ತು ಕ್ರೀಡಾಪಟುಗಳ ಕಠಿಣ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ.

    | ಅಜಯ್ ಸಿಂಗ್

    ಭಾರತ ಬಾಕ್ಸಿಂಗ್ ಫೆಡರೇಷನ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts