More

    ಸಂತಾನಪ್ರಾಪ್ತಿಗೆ ಇವೆ ಹಲವು ಚಿಕಿತ್ಸಾ ಪದ್ಧತಿಗಳು: ಡಾ. ಗೀತಾ ಭರತ್ (ಉತ್ತೂರ)

    ಸಂತಾನಪ್ರಾಪ್ತಿಗೆ ಇವೆ ಹಲವು ಚಿಕಿತ್ಸಾ ಪದ್ಧತಿಗಳು: ಡಾ. ಗೀತಾ ಭರತ್ (ಉತ್ತೂರ)ಮಕ್ಕಳಿಲ್ಲ ಎಂದು ದಂಪತಿ ಚಿಂತಿಸಬೇಕಾಗಿಲ್ಲ. ಸಂತಾನಪ್ರಾಪ್ತಿಗಾಗಿ ಹಲವು ಚಿಕಿತ್ಸೆಗಳಿವೆ. ಆ ಕುರಿತ ಮಾಹಿತಿಯನ್ನು ಧಾರವಾಡ ಗಿರಿನಗರದ ಪೊಲೀಸ್ ತರಬೇತಿ ಶಾಲೆ ಹತ್ತಿರ ಇರುವ ಸರ್ವೋದಯ ಫರ್ಟಿಲಿಟಿ ಆ್ಯಂಡ್ ಐವಿಎಫ್ ಸೆಂಟರ್​ನ ಡಾ.ಗೀತಾ ಭರತ್ ಇಲ್ಲಿ ವಿವರಿಸಿದ್ದಾರೆ.

    ಕೃತಕ ವೀರ್ಯಧಾರಣೆ

    ಸಕಾರಣಗಳಿಲ್ಲದ ಸಂತಾನಹೀನತೆ ಇದ್ದಾಗ, ಗರ್ಭಚೀಲದ ಬಾಯಿಯ ಸಮಸ್ಯೆ ಇದ್ದಾಗ, ಪುರುಷರಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಂದರೆ ಇದ್ದಾಗ, ವೀರ್ಯಾಣುಗಳ ಸಂಖ್ಯೆ ಅಥವಾ ಚಲನೆ ಕಡಿಮೆ ಇದ್ದಾಗ, ಮಹಿಳೆಯರಲ್ಲಿ ಅಂಡಾಣು ಬಿಡುಗಡೆ ಸಮಯದಲ್ಲಿ ವೀರ್ಯವನ್ನು ಪ್ರಯೋಗಶಾಲೆಯಲ್ಲಿ ಸಂಸ್ಕರಿಸಿ ಗರ್ಭಕೋಶದೊಳಗೆ ನೇರವಾಗಿ ಸೇರಿಸುವ ಮುಖಾಂತರ ಗರ್ಭ ಧರಿಸಬಹುದು.
    ಪುರುಷರಲ್ಲಿ ವೃಷಣದ ಶಸ್ತ್ರಚಿಕಿತ್ಸೆ ಅಥವಾ ಯಾವುದೇ ಕ್ಯಾನ್ಸರ್‌ಗೆ ರೇಡಿಯೋಥೆರಪಿ ಅಥವಾ ಕೀಮೊಥೆರಪಿ ಚಿಕಿತ್ಸೆ ತೆಗೆದುಕೊಳ್ಳುವ ಮೊದಲು ವೀರ್ಯಾಣುಗಳನ್ನು ಶೀತಲೀಕರಿಸಿ ಇಡಬಹುದು. ತದನಂತರ ಐಯುಐ ಮೂಲಕ ಮಗುವನ್ನು ಪಡೆಯಬಹುದು. ಕೆಲ ವಿಶೇಷ ಸಂದರ್ಭಗಳಲ್ಲಿ ಪತಿಯು ದೂರದ ಊರು/ ದೇಶದಲ್ಲಿ ಕೆಲಸ ಮಾಡುತ್ತಿದ್ದರೆ, ಪತಿಯ ವೀರ್ಯವನ್ನು ಶೀತಲೀಕರಿಸಿ, ಪತ್ನಿಗೆ ಐಯುಐ ಮುಖಾಂತರ ಗರ್ಭ ಧರಿಸಲು ಸಹಾಯ ಮಾಡಬೇಕಾದ ಅನಿವಾರ್ಯತೆ, ಸಾಧ್ಯತೆ ಎರಡೂ ಉಂಟು.

    ಪ್ರನಾಳಶಿಶು ಚಿಕಿತ್ಸೆ/ ಸೃಷ್ಟಿ

    ಇನ್ ವಿಟ್ರೋ ಫರ್ಟಿಲೈಸೇಷನ್ (ಐವಿಎಫ್) ಎಂದರೆ ವೀರ್ಯಾಣುವಿನಿಂದ ಅಂಡಾಣುವಿನ ಲಿತತೆ ಮತ್ತು ಭ್ರೂಣದ ಆರಂಭಿಕ ಹಂತದ ಬೆಳವಣಿಗೆ ಮಹಿಳೆಯ ದೇಹದ ಹೊರಗೆ, ಪ್ರಯೋಗಾಲಯದ ಗಾಜಿನ ತಟ್ಟೆಯಲ್ಲಿ ನಡೆಯುವಂತೆ ಸಂಯೋಜಿಸಲಾಗುತ್ತದೆ. ಮಹಿಳೆಯ ಅಂಡೋತ್ಪತ್ತಿ ಮತ್ತು ಬೆಳವಣಿಗೆಯ ಪ್ರಕ್ರಿಯೆಯನ್ನು ಉತ್ತೇಜಿಸಿದ ನಂತರ, ಅಂಡಾಣುಗಳನ್ನು ತೆಗೆದು ಪುರುಷ ಸಂಗಾತಿಯ ವೀರ್ಯದ ಮೂಲಕ ಪ್ರಯೋಗಾಲಯದಲ್ಲಿ ಫಲವತ್ತಾಗಿಸಲಾಗುತ್ತದೆ. ಫಲಿತ ಮೊಟ್ಟೆಯನ್ನು ಸೂಕ್ತ ವಾತಾವರಣದಲ್ಲಿ ಭ್ರೂಣವಾಗಿ ಬೆಳೆಯುವಂತೆ ೩ರಿಂದ ೬ ದಿನ ಪೋಷಿಸಿ, ಮಹಿಳೆಯ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಭ್ರೂಣಗಳು ಬೆಳೆದಲ್ಲಿ ಅವನ್ನು ಶೀತಲೀಕರಣ ಮಾಡಿಟ್ಟು, ಭವಿಷ್ಯದಲ್ಲಿ ಉಪಯೋಗಿಸಿಕೊಳ್ಳಬಹುದು. ೨೦೧೯ರವರೆಗೆ ವಿಶ್ವದಲ್ಲಿ ೮೦ ಲಕ್ಷಕ್ಕೂ ಹೆಚ್ಚು ಮಕ್ಕಳು ಈ ರೀತಿ ಜನಿಸಿದ್ದಾರೆ.

    ಸ್ತ್ರೀ ವಯಸ್ಸು ಮತ್ತು ಫಲವತ್ತತೆ

    ಐವಿಎಫ್ ಅಥವಾ ಯಾವುದೆ ಸಂತಾನಹೀನತೆ ಚಿಕಿತ್ಸೆಯ ಫಲಿತಾಂಶದ ಅತಿ ಮುಖ್ಯ ನಿರ್ಧಾರಕ ಅಂಶ- ಮಹಿಳೆಯ ವಯಸ್ಸು. ಅಂಡಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಆಕೆಯ ವಯಸ್ಸಿಗೆ ಅನುಗುಣವಾಗಿ ಇರುತ್ತದೆ. ಒಬ್ಬ ಮಹಿಳೆಯ ಫಲವತ್ತತೆ ೨೧ರಿಂದ ೩೦ ವರ್ಷಗಳವರೆಗೆ ಗರಿಷ್ಠ ಪ್ರಮಾಣದ್ದಾಗಿರುತ್ತದೆ. ೩೦ರ ನಂತರ ನಿಧಾನವಾಗಿ ಹಾಗೂ ೩೫ರ ನಂತರ ಶೀಘ್ರವಾಗಿ ಅಂಡಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಕುಸಿಯುತ್ತದೆ. ವಯಸ್ಸಾದವರಲ್ಲಿ ವರ್ಣತಂತುಗಳ ಸಮಸ್ಯೆ ಕಾಣಿಸಿಕೊಳ್ಳುವುದರಿಂದ ಗರ್ಭಧಾರಣೆ ಸಾಧ್ಯತೆ ಕಡಿಮೆ, ಗರ್ಭಪಾತದ ಸಾಧ್ಯತೆ ಇರುತ್ತದೆ. ಐವಿಎಫ್ ಚಿಕಿತ್ಸೆಯ ಫಲಿತಾಂಶವೂ ವಯಸ್ಸನ್ನು ಅವಲಂಬಿಸಿರುತ್ತದೆ. ಆದ್ದರಿಂದ ಐವಿಎಫ್ ಅವಶ್ಯಕವಾಗಿರುವ ದಂಪತಿ ಚಿಕಿತ್ಸೆಯ ನಿರ್ಧಾರವನ್ನು ಬೇಗ ತೆಗೆದುಕೊಳ್ಳುವುದರಿಂದ ಯಶಸ್ಸಿನ ಪ್ರಮಾಣ ಹೆಚ್ಚು.

    ಭ್ರೂಣಗಳ ಪೂರ್ವಭಾವಿ ಆನುವಂಶಿಕ ಪರೀಕ್ಷೆ (ಪಿಜಿಎಸ್/ ಪಿಜಿಟಿ)

    ಐವಿಎಫ್ ಚಿಕಿತ್ಸೆಯಿಂದ ಸೃಷ್ಟಿಯಾದ ಭ್ರೂಣಗಳನ್ನು ಗರ್ಭಕೋಶಕ್ಕೆ ವರ್ಗಾಯಿಸುವ ಮೊದಲು ಅವು ಆನುವಂಶಿಕವಾಗಿ ಮತ್ತು ವರ್ಣತಂತುಗಳ ತೊಂದರೆಯನ್ನು ಹೊಂದಿಲ್ಲ ಎಂದು ಪರೀಕ್ಷೆ ಮೂಲಕ ಪತ್ತೆ ಹಚ್ಚಲು ಸಾಧ್ಯವಿದೆ. ದಂಪತಿಯಲ್ಲಿ ಪುನರಾವರ್ತಿತ ಗರ್ಭಪಾತಗಳಾಗಿವೆಯೋ, ಮಹಿಳೆಯ ವಯಸ್ಸು ೪೦ರ ಆಸುಪಾಸಿನಲ್ಲಿದೆಯೋ, ಹಿಂದಿನ ಅನೇಕ ಐವಿಎಫ್ ಯತ್ನಗಳು ವಿಲಗೊಂಡಿವೆಯೋ ಅಂಥ ದಂಪತಿಯು ಐವಿಎಫ್ ಚಿಕಿತ್ಸೆಯಿಂದ ಬೆಳೆದ ಭ್ರೂಣಗಳ ಪೂರ್ವಭಾವಿ ಆನುವಂಶಿಕ ಪರೀಕ್ಷೆಯನ್ನು ಮಾಡಿ ಆರೋಗ್ಯವಂತ ಭ್ರೂಣಗಳನ್ನು ಪತ್ತೆ ಮಾಡಿ, ಗರ್ಭಕೋಶಕ್ಕೆ ಸರಿಯಾದ ಸಮಯದಲ್ಲಿ ವರ್ಗಾಯಿಸಿದಲ್ಲಿ ಗರ್ಭ ಧರಿಸಿ ಆರೋಗ್ಯವಂತ ಮಗುವನ್ನು ಪಡೆಯುವ ಸಾಧ್ಯತೆ ಹೆಚ್ಚು.

    ಐಸಿಎಸ್‌ಐ ವಿಧಾನ

    ಈ ವಿಧಾನದಲ್ಲಿ ಆರಿಸಿಕೊಂಡ ಒಂದು ವೀರ್ಯಾಣುವನ್ನು ನುರಿತ ಭ್ರೂಣಶಾಸ್ತ್ರಜ್ಞರು ಅತ್ಯಾಧುನಿಕ, ವಿಶೇಷ ಸೂಕ್ಷ್ಮದರ್ಶಕ ಯಂತ್ರದ ಸಹಾಯದಿಂದ ಅಂಡಾಣುವಿನ ಕೋಶದ್ರವದಲ್ಲಿ ತೂರಿಸಿ, ಫಲಿತತೆಯನ್ನು ಖಚಿತಗೊಳಿಸುತ್ತಾರೆ. ವಿಶೇಷವಾಗಿ ಪುರುಷರಲ್ಲಿ ಸಂತಾನಹೀನತೆಯ ತೊಂದರೆ ಇದ್ದಾಗ ಆನುವಂಶಿಕವಾಗಿ ತನ್ನದೇ ಸ್ವಂತ ಮಗುವನ್ನು ಪಡೆಯಲು ಈ ವಿಧಾನ ವರದಾನವಾಗಿದೆ.
    ಭ್ರೂಣ ಮತ್ತು ಲಿಂಗಾಣುಗಳ ಶೀತಲೀಕರಣ

    ೨ ದಶಕಗಳಲ್ಲಿ ಶೀತಲೀಕರಣ (cryopreservation/ virtification) ತಂತ್ರಜ್ಞಾನ ವೇಗವಾಗಿ ಬೆಳೆದು, ಪ್ರನಾಳ ಶಿಶು ಚಿಕಿತ್ಸೆಯ ಫಲಿತಾಂಶವನ್ನು ಗಣನೀಯವಾಗಿ ಹೆಚ್ಚಿಸಲು ಸಹಾಯಕವಾಗಿದೆ. ಈ ತಂತ್ರಜ್ಞಾನದ ಸಹಾಯದಿಂದ ಭ್ರೂಣ ಹಾಗೂ ಅಂಡಾಣುಗಳನ್ನು ಅನಿರ್ದಿಷ್ಟ ಕಾಲದವರೆಗೆ ದ್ರವರೂಪದ ನೈಟ್ರೋಜೆನ್ ಬ್ಯಾಂಕ್‌ಗಳಲ್ಲಿ ಸಂಗ್ರಹಿಸಿಡಬಹುದಾಗಿದ್ದು, ಭವಿಷ್ಯದಲ್ಲಿ ಅವಶ್ಯವಾದಾಗ ಹೊರಗೆ ತೆಗೆದು ಬೆಳೆಸಿ, ಅಂಡಾಣುಗಳನ್ನು ಭ್ರೂಣವಾಗಿ ಬೆಳೆಸಿ ಗರ್ಭಕೋಶಕ್ಕೆ ವರ್ಗಾವಣೆ ಮಾಡಬಹುದು.
    ಪ್ರನಾಳ ಶಿಶು ಚಿಕಿತ್ಸೆಯಲ್ಲಿ ಅನೇಕ ಭ್ರೂಣಗಳ ಸೃಷ್ಟಿ ಆಗುವುದರಿಂದ ಹೆಚ್ಚಿನ ಭ್ರೂಣಗಳನ್ನು ಶೀತಲೀಕರಿಸಿಟ್ಟು ಒಂದೊಂದೇ ಭ್ರೂಣಗಳನ್ನು ಅನೇಕ ಬಾರಿ ಉಪಯೋಗಿಸಬಹುದಾಗಿದೆ. ಇದರಿಂದ ಒಂದೇ ಐವಿಎಫ್ ಚಿಕಿತ್ಸೆಯಲ್ಲಿ ದಂಪತಿ ಎರಡು ಮಕ್ಕಳನ್ನು ಪಡೆಯಬಹುದಾಗಿದೆ.

    ಸಾಮಾಜಿಕ ಅಂಡಾಣು ಶೀತಲೀಕರಣ

    ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಾಕಷ್ಟು ಪ್ರಚಾರದಲ್ಲಿರುವ ಈ ಚಿಕಿತ್ಸೆಯ ಬಗ್ಗೆ ಭಾರತದಲ್ಲಿ ಜಾಗೃತಿ ಅಷ್ಟೊಂದಿಲ್ಲ. ಯಾವುದೇ ಕಾರಣದಿಂದ ದಂಪತಿ ಮಗುವನ್ನು ಹೊಂದುವುದನ್ನು ಮುಂದೆ ಹಾಕುವ ನಿರ್ಧಾರ ಮಾಡಿದಲ್ಲಿ, ಮಹಿಳೆಯ ವಯಸ್ಸು ೩೦ಕ್ಕಿಂತ ಹೆಚ್ಚಾಗಿದ್ದು, ಮದುವೆಯನ್ನಾಗಲಿ, ಮಗು ಹೊಂದುವುದನ್ನಾಗಲಿ ಮುಂದೂಡಬೇಕಾದ ಅನಿವಾರ್ಯತೆ ಇದ್ದಾಗ ಅವರು ಅಂಡಾಣು ಮತ್ತು ಭ್ರೂಣಗಳ ಶೀತಲೀಕರಣದ ಮುಖಾಂತರ ತಮ್ಮ ಲವತ್ತತೆಯನ್ನು ಸಂರಕ್ಷಿಸಿಕೊಳ್ಳಬಹುದು. ಕಡಿಮೆ ವಯಸ್ಸಿನಲ್ಲಿ ಅಂಡಾಣುಗಳ ಗುಣಮಟ್ಟ ಅತ್ಯುತ್ತಮವಾಗಿರುವುದರಿಂದ ಭ್ರೂಣಗಳು ಹೆಚ್ಚು ಆರೋಗ್ಯವಂತ ಮಗುವಾಗಿ ಬೆಳೆಯುತ್ತವೆ.

    ಅಂಡಾಶಯಗಳ ಪುನರ್‌ ಯೌವ್ವನಗೊಳಿಸುವಿಕೆ

    ಇನ್ನೂ ಸಂಶೋಧನೆಯ ಹಂತದಲ್ಲಿ ಇರುವ ಈ ಚಿಕಿತ್ಸೆಯನ್ನು ಅಗತ್ಯವಿರುವ ಮಹಿಳೆಯರಲ್ಲಿ ಬಳಸಲಾಗುತ್ತಿದೆ. ಸಂತಾನ ಪಡೆಯಬಯಸುವ ಮಹಿಳೆಯ ವಯಸ್ಸು ೪೦ಕ್ಕಿಂತ ಹೆಚ್ಚಾಗಿದ್ದು, ಅಂಡಾಣುಗಳ ಸಂಖ್ಯೆ ಮತ್ತು ಗುಣಮಟ್ಟ ತೀರ ಕಡಿಮೆಯಾಗಿದ್ದು ಹಾಗೂ ದಾನದಿಂದ ಪಡೆದ ಅಂಡಾಣುಗಳ ಉಪಯೋಗ ದಂಪತಿಗೆ ಬೇಡವಾಗಿದ್ದಲ್ಲಿ ಹಾಗೂ ತಮ್ಮದೇಯಾದ ಆನುವಂಶಿಕ ಮಗುವನ್ನು ಪಡೆಯುವ ಆಸೆ ಮಹಿಳೆಗೆ ಇದ್ದಲ್ಲಿ ಈ ಚಿಕಿತ್ಸೆ ಪ್ರಯೋಜನಕಾರಿಯಾಗಬಲ್ಲದು. ಇದರಲ್ಲಿ ಮಹಿಳೆಯ ಅಸ್ಥಿಮಜ್ಜೆಯಿಂದ ತೆಗೆದ ಅಥವಾ ರಕ್ತದಿಂದ ಪ್ರತ್ಯೇಕಿಸಿದ ಪ್ಲೇಟ್‌ಲೆಟ್‌ನಲ್ಲಿ ಶ್ರೀಮಂತವಾಗಿರುವ ಪ್ಲಾಸ್ಮಾವನ್ನು ಅಂಡಾಶಯಗಳಲ್ಲಿ ಸೂಜಿಯಿಂದ ಹಾಕಲಾಗುತ್ತದೆ. ಇದರಿಂದ ಅಂಡಾಶಯದಲ್ಲಿ ಸುಪ್ತ ಸ್ಥಿತಿಯಲ್ಲಿದ್ದ ಅಂಡಾಣುಗಳು ಪ್ರಚೋದನೆಗೊಂಡು, ಐವಿಎಫ್ ಚಿಕಿತ್ಸೆಗೆ ಬೇಕಾದ ಅಂಡಾಣುಗಳನ್ನು ಕೊಡಬಹುದು.

    ವಿಶ್ವ ಐವಿಎಫ್ ದಿನಾಚರಣೆ

    ಐವಿಎಫ್ ಪ್ರನಾಳ ಶಿಶು ಚಿಕಿತ್ಸಾ ವಿಧಾನವು ೨೦ನೇ ಶತಮಾನದ ಅತ್ಯದ್ಭುತ ಸಂಶೋಧನೆಗಳಲ್ಲೊಂದು. ಇದು ದಂಪತಿಯ ಸಂತಾನಹೀನತೆಯ ಕ್ಲಿಷ್ಟಕರ ಸಮಸ್ಯೆಗಳಿಗೆ ವರದಾನವಾಗಿ ಪರಿಣಮಿಸಿದೆ. ೧೯೭೮ರ ಜು. ೨೫ರಂದು ವಿಶ್ವದ ಮೊದಲ ಪ್ರನಾಳ ಶಿಶು ‘ಲೂಯಿಸ್ ಬ್ರೌನ್’ ಜನಿಸಿದ ದಿನ. ಆಕೆ ಜನಿಸಿದ ೬೭ ದಿನಗಳ ಅಂತರದಲ್ಲಿ ಅಂದರೆ ೧೯೭೮ರ ಅ. ೩ರಂದು ಭಾರತದಲ್ಲಿ ‘ದುರ್ಗಾ’ (ಕನುಪ್ರಿಯಾ ಅಗರವಾಲ್) ಅವರ ಜನನವಾಯಿತು. ಭಾರತದ ಪ್ರಥಮ ಹಾಗೂ ಜಗತ್ತಿನ ೨ನೇ ಪ್ರನಾಳ ಶಿಶು ದುರ್ಗಾಳ ಸೃಷ್ಟಿ ಕೋಲ್ಕತದ ಡಾ. ಸುಭಾಷ್ ಮುಖ್ಯೋಪಾಧ್ಯಾಯ ಅವರಿಗೆ ಸಲ್ಲಬೇಕು.

    ಡಾ. ಸುಭಾಷ್ ಅವರ ಈ ಕ್ರಾಂತಿಕಾರಕ ಸಂಶೋಧನೆಯನ್ನು ಮೆಚ್ಚಿ ಪ್ರೋತ್ಸಾಹಿಸುವ ಬದಲು ವಿರೋಧ ವ್ಯಕ್ತಪಡಿಸಿ ಸಂಶೋಧನೆಯನ್ನು ಬಹಿರಂಗಗೊಳಿಸದಂತೆ ಅಂದಿನ ಪಶ್ಚಿಮ ಬಂಗಾಳ ಸರ್ಕಾರ ಕಡಿವಾಣ ಹಾಕಿತ್ತು. ಇದರಿಂದ ಹತಾಶರಾದ ಡಾ. ಸುಭಾಷ ಅವರು ೧೯೮೧ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಭಾರತ ದೇಶದ ಅತಿ ದೊಡ್ಡ ದುರಂತ. ಇಲ್ಲದಿದ್ದರೆ ಈ ಸಂಶೋಧನೆಗೆ ಸಿಕ್ಕ ನೊಬೆಲ್ ಪಾರಿತೋಷಕ ಭಾರತಕ್ಕೆ ದಕ್ಕಬೇಕಿತ್ತು.

    ಕೋವಿಡ್‌ನಿಂದ ಇಲ್ಲ ಅಡಚಣೆ

    ಕೋವಿಡ್ ಮಹಾಮಾರಿಯ ಅನಿಶ್ಚಿತತೆಯ ಈ ಕಾಲದಲ್ಲಿ ಐವಿಎಫ್/ ಸಂತಾನಹೀನತೆ ಚಿಕಿತ್ಸೆಯನ್ನು ಮುಂದೂಡುವ ಅಥವಾ ನಿಲ್ಲಿಸುವ ಅವಶ್ಯಕತೆ ಇಲ್ಲ. ಐವಿಎಫ್ ಕೇಂದ್ರದಲ್ಲಿ ಕೋವಿಡ್‌ನ ಎಲ್ಲ ಸುರಕ್ಷತಾ ನಿಯಮಗಳನ್ನು ಪಾಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಐವಿಎಫ್ ಚಿಕಿತ್ಸೆಯ ಯಶಸ್ಸು ಮಹಿಳೆಯ ವಯಸ್ಸನ್ನು ಅವಲಂಬಿಸಿರುವುದರಿಂದ ೩೫ಕ್ಕಿಂತ ಹೆಚ್ಚು ವಯಸ್ಸಾದ ಮಹಿಳೆಯರು ಚಿಕಿತ್ಸೆಯನ್ನು ಮುಂದೂಡುವ ಅವಶ್ಯಕತೆ ಇಲ್ಲ. ಇನ್ನು ಕೋವಿಡ್ ಲಸಿಕೆ ಮಹಿಳೆಯ ಗರ್ಭಧಾರಣೆಯ ಸಾಧ್ಯತೆ ಅಥವಾ ಚಿಕಿತ್ಸೆಯ ಲಿತಾಂಶದ ಮೇಲೆ ಯಾವುದೇ ಪರಿಣಾಮವನ್ನು ಉಂಟು ಮಾಡುವುದಿಲ್ಲ. ಆದ್ದರಿಂದ ಸಂತಾನಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ದಂಪತಿ ಕರೊನಾ ಲಸಿಕೆ ಪಡೆಯುವುದು ಅತ್ಯಗತ್ಯ. ಸದ್ಯದ ಮಾರ್ಗಸೂಚಿಯಂತೆ ಗರ್ಭಿಣಿಯರಿಗೂ ಕರೊನಾ ಲಸಿಕೆ ನೀಡುವುದು ಸುರಕ್ಷಿತ ಹಾಗೂ ಲಾಭದಾಯಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts