More

    ಜಂಕ್ಷನ್‌ನಲ್ಲೇ ಪಾರ್ಕಿಂಗ್ ಅವ್ಯವಸ್ಥೆ

    ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಿಂದ ಕೊಲ್ಲೂರು ರಸ್ತೆ ವಿಸ್ತರಣೆಯಾಗಿದ್ದರೂ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಹೆಮ್ಮಾಡಿ ಜಂಕ್ಷನ್. ರಸ್ತೆ ಬದಿ ಅಂಗಡಿಗಳನ್ನು ತೆರವು ಮಾಡಿದರೂ ಬೇರೆ ಬೇರೆ ಕಡೆ ಹೋಗುವವರು ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸುವುದು ಸಂಚಾರ ಸಮಸ್ಯೆಗೆ ಮೂಲ ಕಾರಣ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಅಪಾಯಕಾರಿ ಸಂಧು ಹಾಗೂ ತಿರುವುಗಳನ್ನು 2.5 ಕೋಟಿ ರೂ. ವೆಚ್ಚದಲ್ಲಿ ವಿಸ್ತರಿಸಲಾಗಿತ್ತು. ಹೆಮ್ಮಾಡಿ ಜಂಕ್ಷನ್ ಕೂಡ ವಿಸ್ತ್ತರಿಸಿಕೊಂಡಿತ್ತು. ಹೆಮ್ಮಾಡಿ ಜಂಕ್ಷನ್ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನ ಹಾಗೂ ಕೊಲ್ಲೂರು ಸಂಪರ್ಕ ರಸ್ತೆ ಹಿಂದೆ ಕಿರಿದಾಗಿತ್ತು. ರಸ್ತೆ ಬದಿ ಗೂಡಂಗಡಿ ತಲೆ ಎತ್ತಿದ್ದರಿಂದ ಸಂಚಾರ ಸಂಪರ್ಕ ಸಮಸ್ಯೆ ಜೊತೆ ಅಪಘಾತ ವಲಯವಾಗಿಯೂ ಗುರುತಿಸಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ರಸ್ತೆ ವಿಸ್ತರಣೆ ಆದರೂ ಪ್ರಯೋಜನ ಸಿಗುತ್ತಿಲ್ಲ. ಹೆಮ್ಮಾಡಿ -ಕೊಲ್ಲೂರು ರಸ್ತೆ ಬದಿ ವಾಹನಗಳು ನಿಲ್ಲುವುದರಿಂದ ರಸ್ತೆ ಕಿರಿದಾಗುವ ಜತೆಗೆ ಪಾದಚಾರಿಗಳೂ ರಸ್ತೆಯಲ್ಲೇ ತಿರುಗಾಡಬೇಕಿದೆ. ರಸ್ತೆ ಬದಿ ಪಾದಚಾರಿ ಮಾರ್ಗ ಗುರುತಿಸಿದ್ದು, ಬಿಳಿ ಪಟ್ಟಿ ಹಾಕಿ ನಡೆದಾಡಲು ಕಾದಿರಿಸಿದ್ದರೂ, ಪಾದಚಾರಿ ಮಾರ್ಗ ಅತಿಕ್ರಮಿಸಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ರಸ್ತೆಯಲ್ಲಿ ಸಾಲಾಗಿ ವಾಹನ ನಿಲ್ಲುವುದರಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಿರುಗಾಡುವ ವಾಹನಗಳನ್ನು ಗಮನಿಸುವುದು ಕಷ್ಟವಾಗಿ ಅಪಘಾತಕ್ಕೆ ಕಾರಣವಾಗುತ್ತಿದೆ. ಸುಗಮ ಸಂಚಾರಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ರಸ್ತೆ ವಿಸ್ತರಿಸಿದ್ದರೂ ವಾಹನ ನಿಲ್ದಾಣ ಮಾಡಿಕೊಂಡಿದ್ದರಿಂದ ಜನರ ನೆರವಿಗೆ ಸಿಗುತ್ತಿಲ್ಲ ಎಂಬುದು ನೋವಿನ ಸಂಗತಿ.

    ಕಾನೂನು ಕ್ರಮ ಕೈಗೊಳ್ಳಲಿ: ಹೆಮ್ಮಾಡಿ – ಕೊಲ್ಲೂರು ರಸ್ತೆಯಲ್ಲಿ ವಾಹನ ನಿಲುಗಡೆ ಬಗ್ಗೆ ಕುಂದಾಪುರ ವೃತ್ತ ನಿರೀಕ್ಷಕರು ಹಾಗೂ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಾದಚಾರಿಗಳು ದೂರಿದ್ದಾರೆ. ರಸ್ತೆ ವಿಸ್ತರಿಸಿ ವಾಹನಗಳಿಗೆ ನಿಲ್ಲಲು ಅವಕಾಶ ಮಾಡಿ ಕೊಡುವುದಾದರೆ ರಸ್ತೆ ವಿಸ್ತರಿಸುವ ಅವಶ್ಯಕತೆಯೇ ಇರಲಿಲ್ಲ. ಹೆಮ್ಮಾಡಿ ಜಂಕ್ಷನ್ ಬಳಿಯಿಂದ ಹತ್ತಾರು ಮೀಟರ್ ದೂರದವರಗೆ ವಾಹನ ನಿಲ್ಲುವುದರಿಂದ ಜನರ ನಡೆದಾಡುವ ಹಕ್ಕನ್ನೇ ಕಿತ್ತುಕೊಂಡಂತಾಗಿದೆ. ಬೆಳಗ್ಗೆ ಮತ್ತೆ ಸಾಯಂಕಾಲ ವೇಳೆ ಕೊಲ್ಲೂರು -ಹೆಮ್ಮಾಡಿ ರಸ್ತೆಯಲ್ಲಿ ವಾಹನ ದಟ್ಟಣೆ ಜತೆಗೆ ಪಾದಚಾರಿಗಳ ಸಂಚಾರ ಕೂಡ ಹೆಚ್ಚಿರುತ್ತದೆ. ನೂರಾರು ವಿದ್ಯಾರ್ಥಿಗಳು ಜಂಕ್ಷನ್‌ನಲ್ಲಿ ನಿಂತು ಬಸ್ ಹಿಡಿದು ಕುಂದಾಪುರಕ್ಕೆ ಹೋಗಬೇಕು. ವಾಹನ ನಿಲುಗಡೆಯಿಂದ ಅಂಗಡಿ ಮುಂಗಟ್ಟುಗಳ ವ್ಯವಹಾರಕ್ಕೂ ಸಮಸ್ಯೆ ಆಗುತ್ತಿದೆ. ಸಂಚಾರಿ ಪೊಲೀಸರು ವಾಹನ ನಿಲುಗಡೆ ನಿಷೇಧಿಸಿ ನಾಮಫಲಕ ಹಾಕುವ ಜತೆ ರಸ್ತೆ ಬದಿ ವಾಹನ ನಿಲ್ಲಿಸಿದವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಹೆಮ್ಮಾಡಿ ಜಂಕ್ಷನ್ ವಾಹನ ನಿಲುಗಡೆ ಗಮನ ಹರಿಸಲು ನಮ್ಮ ಪ್ಯಾಟ್ರೋಲ್ ಗಾಡಿ ಕಳುಹಿಸಿ, ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗುತ್ತದೆ. ಕುಂದಾಪುರ ಸಂಚಾರಿ ಪೊಲೀಸರ ಗಮನಕ್ಕೂ ತಂದು ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಲಾಗುವುದು. ಹೆಮ್ಮಾಡಿ ಜಂಕ್ಷನ್ ವಾಹನ ನಿಲುಗಡೆ ಸಮಸ್ಯೆ ಪರಿಹಾರ ಆಗದಿದ್ದರೆ ತಕ್ಷಣ ನನ್ನ ಗಮನಕ್ಕೆ ತನ್ನಿ.
    ಹರಿರಾಮ್ ಶಂಕರ್, ಎಎಸ್ಪಿ ಕುಂದಾಪುರ

    ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಹೆಮ್ಮಾಡಿ ಜಂಕ್ಷನ್‌ನಲ್ಲಿ ಬಾಕಿಯಿದ್ದು, ತಲ್ಲೂರು ಹಾಗೂ ಹೆಮ್ಮಾಡಿ ಜಂಕ್ಷನ್ ಕೂಡ ವಿಸ್ತರಣೆಯಾದರೆ ರಸ್ತೆ ಬದಿ ವಾಹನ ನಿಲುಗಡೆಗೆ ಸಮಸ್ಯೆ ಪರಿಹಾರಗೊಳ್ಳಲಿದೆ. ಅನಿವಾರ್ಯವಾಗಿ ವಾಹನ ನಿಲುಗಡೆ ಬೇರೆ ಕಡೆ ಮಾಡಬೇಕಾಗುತ್ತದೆ. ಹೆಮ್ಮಾಡಿ ಗ್ರಾಪಂ ವಾಹನ ನಿಲುಗಡೆಗೆ ಸ್ಥಳ ಗುರುತಿಸಿ, ಪಾರ್ಕಿಂಗ್ ವ್ಯವಸ್ಥೆ ಮಾಡಿ ಕೊಡಬೇಕು.
    ಶಶಿಧರ ಹೆಮ್ಮಾಡಿ, ದಾರಿಗಾಗಿ ಧ್ವನಿ ಸಮಿತಿ, ಹೆಮ್ಮಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts