ಸಿನಿಮಾ

ಮನೋಬಲ, ಸಾಧನೆಯ ಛಲ ಇದ್ದರೆ ಯಶಸ್ಸು ಅಚಲ

ಕರುನಾಡು ಸಾಧಕರ ಬೀಡು. ವೀರರ ನಾಡು. ಮೊದಲಿನಿಂದಲೂ ಇಲ್ಲಿ ಸಾಧಕರ ಕೊರತೆಯಿಲ್ಲ. ಇದಕ್ಕೆ ಪೂರಕ ಹಲವು ಉದಾಹರಣೆಗಳು ನಮ್ಮೆದುರಿವೆ. ಪ್ರತಿ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದು ದೇಶದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ಹಿರಿ ಕಿರಿಯ ಸಾಧಕರ ದೊಡ್ಡ ಪಟ್ಟಿಯೇ ನಮ್ಮೆದುರಿದೆ. ಒಟ್ಟಾರೆ ಸಾಧನೆಯ ಪಥ ಯಶಸ್ಸಿನ ಸದ್ದಿನೊಂದಿಗೆ ಸಾಗುತ್ತಿದೆ.

ಮೊನ್ನೆ ಮೊನ್ನೆಯಷ್ಟೇ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಫಲಿತಾಂಶ ಪ್ರಕಟಗೊಂಡಿತು. ಎಂದಿನಂತೆ ಬಾಲಕಿಯರು ಮೇಲುಗೈ ಸಾಧಿಸಿದ ವಿಷಯವೂ ತಿಳಿಯಿತು. ಈ ಮಧ್ಯೆ ಸೂಕ್ಷ್ಮವಾಗಿ ಗಮನಿಸಿದಾಗ ಕಂಡು ಬಂದ ಸಂಗತಿ ಎಂದರೆ ಹಲವು ಗ್ರಾಮೀಣ ಪ್ರತಿಭೆಗಳ ಅಪ್ರತಿಮ ಸಾಧನೆ. ಹೌದು ಬೆಳಗಾವಿ ಜಿಲ್ಲೆ ಸವದತ್ತಿಯ ಬಾಲಕಿ ಅನುಪಮಾ ಹಿರೇಹೊಳಿಯ ಸಾಧನೆ ನನ್ನ ಕಣ್ಣು ಕೋರೈಸಿತು. ಮನೆಯಲ್ಲಿ ಕಡು ಬಡತನ, ಕಳೆದ ವರ್ಷವಷ್ಟೇ ತಂದೆಯ ಅಗಲಿಕೆ, ಮನೆ ಸ್ಥಿತಿ ಅಷ್ಟೇನೂ ಹೇಳಿಕೊಳ್ಳುವಂಥದಲ್ಲ. ಓದಿನ ಜತೆ ಮನೆಗೆಲಸವನ್ನೂ ಮಾಡಬೇಕು. ಮನೆಗೆ ತಾಯಿಯ ದುಡಿಮೆಯೇ ಆಸರೆ. ಇದರ ಮಧ್ಯೆಯೂ ಈ ಬಾಲಕಿಯ ಶೇ.100 ರಷ್ಟು ಸಾಧನೆ ನಿಜಕ್ಕೂ ಸಮಾಜಕ್ಕೆ ಅದರಲ್ಲೂ ವಿಶೇಷವಾಗಿ ಆಕೆಯ ಓರಗೆಯ ಮಕ್ಕಳಿಗೆ ರೋಲ್ ಮಾಡೆಲ್. ಇದು ಒಂದು ಉದಾಹರಣೆ ಮಾತ್ರ.

ಇವಳಂತೆ ಇನ್ನೂ ಅನೇಕರ ಯಶೋಗಾಥೆಯನ್ನು ನಾವು ಮಾಧ್ಯಮಗಳ ಮೂಲಕ ಅರಿತೆವು. ಒಬ್ಬೊಬ್ಬರದು ಒಂದೊಂದು ಹಿನ್ನೆಲೆ. ಆದರೆ ಪಡೆದ ಯಶಸ್ಸಿನ ದಾರಿ ಇಡೀ ಸಮಾಜವೇ ಬೆರಗಾಗುವಂಥದ್ದು. ಇಲ್ಲಿ ಈ ಎಲ್ಲ ಸಾಧಕರ ಕೈ ಹಿಡಿದಿದ್ದು ಮನೋಬಲ. ಸಾಧನೆಯ ತುಡಿತವೊಂದಿದ್ದರೆ ಸಾಕು ಏನನ್ನಾದರೂ ಸಾಧಿಸಬಹುದು ಎನ್ನಲು ಈ ಬಾಲಕಿಯೇ ಉತ್ತಮ ನಿದರ್ಶನ. ಇಲ್ಲಿ ನಾವು ಒಂದು ಗಮನಿಸಬೇಕಾದ ಅಂಶ ಎಂದರೆ ಸೌಲಭ್ಯಗಳು ಸಾಧನೆಗೆ ಪೂರಕ ಮತ್ತು ಅತ್ಯಗತ್ಯ ಎಂಬುದನ್ನು ಒಪ್ಪಿಕೊಂಡರೂ ಗುರಿಯತ್ತ ದಿಟ್ಟ ಹೆಜ್ಜೆ, ಮನಸ್ಸು ತುಂಬಾ ಅವಶ್ಯ. ಇವಳಿಗಿಂತ ಹೆಚ್ಚು ಸೌಲಭ್ಯ, ತರಬೇತಿ ಪಡೆದವರು ನಮ್ಮ ಮಧ್ಯೆ ಇಲ್ಲವೇ? ಇದ್ದರು, ಆದರೆ ಈಕೆ ಅವರೆಲ್ಲರಿಗಿಂತ ಭಿನ್ನವಾಗಿ, ಇದ್ದುದರಲ್ಲಿಯೇ ಕಂಡ ಯಶಸ್ಸು ಅವರ ಕುಟುಂಬ, ಕಲಿತ ಶಾಲೆ, ಊರು ಹಾಗೂ ಸಮಾಜಕ್ಕೆ ಶ್ರೇಯಸ್ಸು ತಂದು ಕೊಟ್ಟಿತು. ಸಾಧನೆ ಎಲ್ಲರ ಸ್ವತ್ತು. ಅದರ ಬೆನ್ನು ಬಿದ್ದವರ ಗುರಿ ಮತ್ತು ಕ್ರಮ ಸರಿಯಾಗಿರಬೇಕು, ಅಚಲವಾಗಿರಬೇಕು ಎನ್ನಲು ಅನುಪಮಾ ಬಲು ದೊಡ್ಡ ಉದಾಹರಣೆ. ಇಲ್ಲಿ ಇವರ ಮನೆಯಲ್ಲಿ ಯಾರೂ ಪ್ರೆಸ್ಟೀಜ್​ಗಾಗಿ ಪೈಪೋಟಿ ನಡೆಸಿದವರಲ್ಲ. ಆದರೆ ಇಟ್ಟುಕೊಂಡ ಗುರಿ ನಿರಾಯಾಸವಾಗಿ ಮುಟ್ಟಿದ ಶ್ರೇಯಸ್ಸು ಅವರದು. ಇದಕ್ಕೆ ಕಾರಣ ಅವರ ಸರಳ ಜೀವನ, ಉದಾತ್ತ ಚಿಂತನೆ ಮತ್ತು ಶಿಸ್ತುಬದ್ಧ ಓದುವ ಕ್ರಮ ಮತ್ತು ಈ ಮೊದಲು ಹೇಳಿದಂತೆ ಉತ್ಕಟ ಮನೋಬಲ. ಮಾಡಲೇಬೇಕು ಎನ್ನುವ ಧೀಶಕ್ತಿ ಇಂದು ಆಕೆಯನ್ನು ಗುರಿಯ ದಡ ಸೇರಿಸಿದೆ.

ಯಾವುದೇ ಒಂದು ದೇಶದ ಉಜ್ವಲ ಭವಿಷ್ಯ ನಿರ್ಧರಿಸುವವರು ಯುವಕರೇ. ಅವರ ಶಕ್ತಿ ಮತ್ತು ಯುಕ್ತಿ ಇಡೀ ದೇಶದ ಆಸ್ತಿಯಾಗಿರುತ್ತದೆ. ಈ ಶಕ್ತಿ ಮತ್ತು ಯುಕ್ತಿಯ ಸದ್ವಿನಿಯೋಗ ಆದಲ್ಲಿ ಆ ದೇಶದ ಭವಿಷ್ಯ ಉಜ್ವಲ ಹಾಗೂ ಸುಭದ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಅನುಪಮಾಳಂತಹ ಗ್ರಾಮೀಣ ಪ್ರತಿಭೆಯ ಶಕ್ತಿಯನ್ನು ಸಮಾಜ ಸದ್ಬಳಕೆ ಮಾಡಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಆಕೆ ತನ್ನ ಸಾಧನೆಗೆ ತುಕ್ಕು ಹಿಡಿಯದಂತೆ ಇನ್ನೂ ಹೆಚ್ಚಿನ ಯಶಸ್ಸಿನತ್ತ ಸಾಗಬೇಕು.

ಸಾಧನೆ ಅಷ್ಟು ಸಲೀಸಾಗಿ ಆಗುವಂತಹದಲ್ಲ. ಸಾಧನಾಪಥ ಕಷ್ಟಕರವಾದುದು. ಗಟ್ಟಿ ಹಾಗೂ ಕಠೋರ ನಿರ್ಧಾರದ ಜತೆಗೆ ಸ್ಥಿರವಾದ ಇಚ್ಛೆ ಇರಬೇಕು. ಉದಾತ್ತ ಮನಸ್ಸು, ತಾಳ್ಮೆ, ಅವಿರತ ಯತ್ನದ ಜತೆಗೆ ರಾಗ ದ್ವೇಷಗಳನ್ನು ತೊರೆಯುವ ಬಲವಾದ ಇಚ್ಛಾಶಕ್ತಿ ಇರಬೇಕು. ಉನ್ನತ ಗುರಿಯ ಸಾಧನೆಯಲ್ಲಂತೂ ಕಷ್ಟಗಳು ಹಲವು. ನಿರಂತರ ಅಭ್ಯಾಸದ ಮೂಲಕ ಮನಸ್ಸಿನಲ್ಲಿ ಸ್ಥಿರವಾದ ಛಲಭಾವ ಜಾಗೃತವಾಗಬೇಕು. ಶಿಸ್ತುಪಾಲನೆಗೆ ಆದ್ಯತೆ ಕೊಟ್ಟು ಉಗ್ರ ಮನಸ್ಸಿನ ಮೇಲೆ ಹತೋಟಿ ಹೊಂದಬೇಕು. ನಕಾರಾತ್ಮಕ ಸಂಗತಿಗಳನ್ನು ಸಕಾರಾತ್ಮಕವಾಗಿ ಪರಿವರ್ತಿಸಿಕೊಂಡಾಗ ಅವ್ಯಕ್ತಶಕ್ತಿಯೊಂದು ನಮ್ಮಲ್ಲಿ ಉದಯವಾಗುತ್ತದೆ. ಆ ಶಕ್ತಿ ನಮ್ಮ ಯುಕ್ತಿಗೆ ಕಾರಣವಾಗುತ್ತದೆ. ಈ ಶಕ್ತಿ ಮತ್ತು ಯುಕ್ತಿಗಳನ್ನೊಳಗೊಂಡ ಸಾಧನೆ ನಮ್ಮದಾಗಬೇಕು.

22 ವರ್ಷ ತನ್ನೊಳಗಿದ್ದ ಹೃದಯವನ್ನು 16 ವರ್ಷಗಳ ಬಳಿಕ ಮ್ಯೂಸಿಯಮ್​ನಲ್ಲಿ ಕಣ್ಣೆದುರೇ ಕಂಡಳು!

ಹಾಲಿನ ಮತ್ತೊಂದು ಬ್ರ್ಯಾಂಡ್​ಗೂ ಅಮುಲ್ ಆತಂಕ; ಎಲ್ಲಿ, ಯಾವುದು?

Latest Posts

ಲೈಫ್‌ಸ್ಟೈಲ್