More

    ಹೆದ್ದಾರಿಗಾಗಿ ಸಂಪರ್ಕ ರಸ್ತೆ ಬಂದ್ ಮಾಡಿದ್ದಕ್ಕೆ ಕಾಮಗಾರಿ ತಡೆದು ಗ್ರಾಮಸ್ಥರ ಪ್ರತಿಭಟನೆ

    ಚನ್ನಪಟ್ಟಣ: ಎನ್‌ಎಚ್ 275 ಬೈಪಾಸ್ ಕಾಮಗಾರಿಗಾಗಿ ಗ್ರಾಮಗಳ ಸಂಪರ್ಕ ರಸ್ತೆಗಳನ್ನು ಮುಚ್ಚಲಾಗುತ್ತಿದೆ ಎಂದು ಆರೋಪಿಸಿ, ತಾಲೂಕಿನ ದೇವರ ಹೊಸಹಳ್ಳಿ ಮತ್ತು ಕೋಮನಹಳ್ಳಿ ಹಾಗೂ ರಾಂಪುರ ಗ್ರಾಮಸ್ಥರು ಕಾಮಗಾರಿಯನ್ನು ತಡೆಯುವ ಮೂಲಕ ಪ್ರತಿಭಟನೆ ನಡೆಸಿದರು.

    ಗ್ರಾಮದ ಬಳಿ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಈ ಎರಡು ಗ್ರಾಮಸ್ಥರು, ಹಲವಾರು ವರ್ಷಗಳಿಂದ ಈ ರಸ್ತೆಯನ್ನು ಬಳಸುತ್ತಿದ್ದೇವೆ. ಎರಡೂ ಗ್ರಾಮ ಸೇರಿ ಹಲವು ಗ್ರಾಮಗಳಿಗೆ ತೆರಳಲು ಸಂಪರ್ಕ ಕೊಂಡಿಯಾಗಿರುವ ಈ ರಸ್ತೆಯಲ್ಲಿ ಪ್ರತಿನಿತ್ಯ ವಿದ್ಯಾರ್ಥಿಗಳು, ರೈತರು ಸೇರಿ ನೂರಾರು ಮಂದಿ ಸಂಚರಿಸುತ್ತಾರೆ. ಆದರೆ, ಇದೀಗ ಈ ರಸ್ತೆಯನ್ನು ಬಂದ್ ಮಾಡಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.

    ದೇವರ ಹೊಸಹಳ್ಳಿಯಿಂದ ಕೋಮನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಪಟ್ಲು ಗ್ರಾಮದವರೆಗೂ ಮುಂದುವರಿದಿದೆ. ಜಮೀನುಗಳಿಗೆ ತೆರಳಲು ಈ ರಸ್ತೆಯನ್ನು ಬಳಸುತ್ತಿದ್ದ ರೈತರಿಗೆ ಇದೀಗ ಇನ್ನಿಲ್ಲದ ಸಮಸ್ಯೆ ಎದುರಾಗಿದೆ. ಈ ರಸ್ತೆಗೆ ಅಂಡರ್‌ಪಾಸ್ ನಿರ್ಮಿಸಿಕೊಡುವಂತೆ ಈ ಹಿಂದೆಯೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗ ಏಕಾಏಕಿ ಈ ರಸ್ತೆಯನ್ನು ಬಂದ್ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಭಾಗದಲ್ಲಿ ಈ ರಸ್ತೆಯ ಅವಶ್ಯಕತೆ ಹೆಚ್ಚಿದೆ. ರಸ್ತೆ ಮುಚ್ಚಲು ಅವಕಾಶ ನೀಡುವುದಿಲ್ಲ. ತಿರುಗಾಡಲು ಪರ್ಯಾಯ ರಸ್ತೆ ವ್ಯವಸ್ಥೆ ಮಾಡಬೇಕು. ಎನ್‌ಎಚ್ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಪರಿಹರಿಸುವವರೆಗೂ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

    ಪ್ರತಿಭಟನಾ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸ್ಥಳೀಯ ಅಧಿಕಾರಿಗಳು ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದರಾದರೂ ಪ್ರತಿಭಟನಾಕಾರರು ಸಮ್ಮತಿಸಲಿಲ್ಲ. ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಸ್ತೆಗೆ ಸಂಪರ್ಕ ನೀಡುವುದಾಗಿ ಲಿಖಿತ ಭರವಸೆ ನೀಡುವವರೆಗೂ ಪ್ರತಿಭಟನೆಯನ್ನು ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಗ್ರಾಮಸ್ಥರು ಗುರುವಾರವೂ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.

    ಪ್ರತಿಭಟನೆಯಲ್ಲಿ ಮುಖಂಡರಾದ ರಾಂಪುರ ರಾಜಣ್ಣ, ರಾಂಪುರ ಸ್ವಾಮಿ, ಕೋಮನಹಳ್ಳಿ ಜಯರಾಜು, ಗುರು, ಪಟ್ಲು ನಾಗೇಂದ್ರ, ಕಾಮರಾಜು, ದೇವರಹೊಸಳ್ಳಿ ಚೇತನ್ ಮತ್ತಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts