More

    ವರುಣಾರ್ಭಟ, ಬ್ರಹ್ಮಗಿರಿಯಲ್ಲಿ ಭೂ ಕುಸಿತ ; ಎರಡು ವಾರ ನಂದಿಗಿರಿಗೆ ಪ್ರವೇಶ ಇಲ್ಲ

    ಚಿಕ್ಕಬಳ್ಳಾಪುರ: ಧಾರಾಕಾರ ಮಳೆಗೆ ಪ್ರವಾಸಿ ತಾಣ ನಂದಿ ಬೆಟ್ಟಕ್ಕೆ ಹೊಂದಿಕೊಂಡಿರುವ ಬ್ರಹ್ಮಗಿರಿಯಲ್ಲಿ ಭೂ ಕುಸಿತ ಉಂಟಾಗಿದ್ದು ಬಂಡೆಗಳು ಮರಗಳ ಸಮೇತ ರಸ್ತೆಗೆ ಉರುಳಿವೆ. ಅದೃಷ್ಟವಾತ್ ಪ್ರಾಣಾಪಾಯ ಸಂಭವಿಸಿಲ್ಲ.

    ಭೂ ಕುಸಿತದಿಂದಾಗಿ ನಂದಿ ಬೆಟ್ಟ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಮಣ್ಣು ಬಿದ್ದಿರುವುದರಿಂದ ಬಹುತೇಕ ಎರಡು ವಾರ ಪ್ರವಾಸಿತಾಣದ ಮಾರ್ಗ ಬಂದ್ ಆಗುವುದು ಖಚಿತವಾಗಿದೆ. ಬ್ರಹ್ಮಗಿರಿ ಬೆಟ್ಟದ ಮೇಲೆ ಹರಿದ ನೀರಿನಿಂದ ಮಣ್ಣಿನ ಸವಕಳಿ ಉಂಟಾಗಿ ಭೂ ಕುಸಿತ ಸಂಭವಿಸಿದೆ.

    ಬ್ರಹ್ಮಗಿರಿ ಬೆಟ್ಟದ ತಪ್ಪಲಿನ ರಸ್ತೆಯಲ್ಲಿ ಮಣ್ಣಿನ ರಾಶಿ ಬಿದ್ದಿದ್ದು, ಈಗಾಗಲೇ ಅಧಿಕಾರಿಗಳು ತೆರವು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಬೆಟ್ಟದ ಮೇಲಿಂದ ಕುಸಿದ ಬಂಡೆಗಳು ರಸ್ತೆಗೆ ಬಿದ್ದ ರಭಸಕ್ಕೆ ಡಾಂಬರು ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು, ನಂದಿ ಬೆಟ್ಟದ ನಡುವೆ ವಾಹನ ಸಂಚಾರ ಸ್ಥಗಿತಗೊಂಡಿದೆ.

    ಸುತ್ತಲು ಭಾರೀ ಶಬ್ದ:ಮಳೆಯ ನಡುವೆ ನಡುರಾತ್ರಿ ನಂದಿ ಗಿರಿಧಾಮದ ಕಡೆಯಿಂದ ಭಾರೀ ಶಬ್ದ ಕೇಳಿ ಬಂತು ಎಂದು ಸ್ಥಳೀಯರು ತಿಳಿಸಿದ್ದಾರೆ. ರಾತ್ರಿ ವೇಳೆ ಸಾಮಾನ್ಯವಾಗಿ ಜನ ಮತ್ತು ವಾಹನ ಸಂಚಾರ ಇರುವುದಿಲ್ಲ. ಇನ್ನು ಬೆಳಗ್ಗೆ ಸಿಬ್ಬಂದಿ ಎಂದಿನಂತೆ ಗಿರಿಧಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಭೂ ಕುಸಿತ ಉಂಟಾಗಿರುವುದು ಗೊತ್ತಾಗಿದೆ. ತಕ್ಷಣ ಪ್ರವಾಸೋದ್ಯಮ, ಅರಣ್ಯ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.

    ಪ್ರವಾಸಿಗರ ಪರದಾಟ:ಭೂ ಕುಸಿತದ ಮಾಹಿತಿ ಇಲ್ಲದೆ ನಂದಿ ಬೆಟ್ಟ ವೀಕ್ಷಿಸಲು ಬುಧವಾರ ಬೆಳಿಗ್ಗೆ ಪ್ರವಾಸಿಗರ ದಂಡೇ ಆಗಮಿಸಿತ್ತು. ರಸ್ತೆ ಸಂಪರ್ಕ ಕಡಿತಗೊಂಡಿದೆ ಎಂದು ಹೇಳಿ ಪೊಲೀಸರು ವಾಪಸ್ ಕಳುಹಿಸಿದರು. ಮತ್ತೊಂದೆಡೆ ಹಿಂದಿನ ದಿನವೇ ಗಿರಿಧಾಮದ ಪ್ರವಾಸೋದ್ಯಮ, ತೋಟಗಾರಿಕೆ ಮತ್ತು ಬೆಸ್ಕಾಂನ ಬಾಡಿಗೆ ಕೊಠಡಿಯಲ್ಲಿ ತಂಗಿದ್ದ ಪ್ರವಾಸಿಗರುವ ರಸ್ತೆ ಸಂಚಾರ ಸ್ಥಗಿತಗೊಂಡಿದ್ದರಿಂದ ವಾಹನಗಳನ್ನು ಗಿರಿಧಾಮದಲ್ಲಿಯೇ ಬಿಡಬೇಕಾಯಿತು. ಕೆಲವರು ಬೆಟ್ಟದ ಮೆಟ್ಟಿಲಿನ ಹಾದಿಯಲ್ಲಿ ಇಳಿದು ಬಂದು, ಇತರ ವಾಹನಗಳಲ್ಲಿ ಊರುಗಳಿಗೆ ತೆರಳಿದರು.

    ಇದೇ ಮೊದಲ ಬಾರಿಗೆ ಕುಸಿತ:ಪಂಚಗಿರಿಗಳ ಸಾಲಿನಲ್ಲಿ ಒಂದಾಗಿರುವ ನಂದಿ ಗಿರಿಧಾಮದ ತಪ್ಪಲಿನಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದೆ. ಬ್ರಹ್ಮಗಿರಿಯ ಮೇಲ್ಭಾಗದಿಂದ ದೊಡ್ಡ ಕಾಲುವೆ ಮಾದರಿಯಲ್ಲಿ ಮಣ್ಣು ಜಾರಿ ಬಿದ್ದಿದೆ. ನಂದಿ ಗಿರಿಧಾಮ ಪಾಲಾರ್, ಅರ್ಕಾವತಿ ಸೇರಿ ಹಲವು ನದಿಗಳ ಉಗಮ ಸ್ಥಾನ. ಇಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯ ಬಿರುಸು, ನದಿಗಳ ಹರಿಯುವಿಕೆ ಸ್ಥಳಗಳು ಹಾಳಾಗುವಿಕೆ, ಸುತ್ತಲಿನ ಕಲ್ಲು ಗಣಿಗಾರಿಕೆ ಸೇರಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದೆ. ಅನಪೇಕ್ಷಿತ ಚಟುವಟಿಕೆಗಳ ಕಡಿವಾಣದ ಅನಿವಾರ್ಯತೆಯನ್ನು ಭೂ ಕುಸಿತದ ಮೂಲಕ ಮೊದಲ ಎಚ್ಚರಿಕೆಯ ಸಂದೇಶ ರವಾನೆಯಾದಂತಿದೆ.

    ಇದೇ ಮೊದಲ ಬಾರಿಗೆ ನಂದಿ ಬೆಟ್ಟದಲ್ಲಿ ಭೂ ಕುಸಿತ ಉಂಟಾಗಿದೆ. ಮುಂಬರುವ ದಿನಗಳಲ್ಲಿ ಧಾರಾಕಾರ ಮಳೆಗೆ ಮತ್ತಷ್ಟು ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಬಹುದು. ಭಾರೀ ಅನಾಹುತ ಸಂಭವಿಸಬಹುದು. ಇದಕ್ಕೆ ಮುಂಜಾಗ್ರತಾ ಕ್ರಮಗಳ ಪಾಲನೆಯ ಮೂಲಕ ಕಡಿವಾಣ ಹಾಕಬೇಕು.
    ಚೇತನ್, ಸ್ಥಳೀಯ ನಿವಾಸಿ, ಚಿಕ್ಕಬಳ್ಳಾಪುರ

    ನಂದಿ ಗಿರಿಧಾಮದ ತಪ್ಪಲಿನ ಬ್ರಹ್ಮಗಿರಿ ಬೆಟ್ಟದಲ್ಲಿ ಭೂ ಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಕೆಲ ದಿನಗಳ ಕಾಲ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವುದನ್ನು ಮುಂದೂಡಬೇಕು.
    ಆರ್.ಲತಾ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts