More

    ಭರ್ಜರಿ ವರ್ಷಧಾರೆ; ಮರ ಬಿದ್ದು ಸಂಚಾರ ಅಸ್ತವ್ಯಸ್ತ

    ಆಯನೂರು: ಜಿಲ್ಲೆಯ ಹಲವೆಡೆ ಸತತ ಎರಡನೇ ದಿನವೂ ಮಳೆಯಾಗಿದೆ. ಶುಕ್ರವಾರ ಮಧ್ಯಾಹ್ನ ತೀರ್ಥಹಳ್ಳಿ, ಶಿವಮೊಗ್ಗ, ಸಾಗರ ಮತ್ತು ಶಿಕಾರಿಪುರ ತಾಲೂಕಿನ ಹಲವೆಡೆ ಮಳೆಯಾಗಿದೆ. ಇದು ಹಲವು ದಿನಗಳಿಂದ ಕಾದ ಕಾವಲಿಯಂತಾಗಿದ್ದ ಮಲೆನಾಡಿಗೆ ಕೊಂಚ ತಂಪೆರೆದಿದ್ದು ವಿಶೇಷವಾಗಿ ರೈತಾಪಿ ವರ್ಗದಲ್ಲಿ ಖುಷಿಯನ್ನುಂಟು ಮಾಡಿದೆ.

    ಶಿವಮೊಗ್ಗ ತಾಲೂಕಿನ ಆಯನೂರು ಸುತ್ತಮುತ್ತ ಶುಕ್ರವಾರ ಮಧ್ಯಾಹ್ನ ಭರ್ಜರಿ ವರ್ಷಧಾರೆಯಾಗಿದ್ದು, ಗುಡುಗು-ಸಿಡಿಲು ಗಾಳಿ ಸಹಿತ ಸುರಿದ ಜೋರಾದ ಮಳೆಗೆ ಎರಡು ಮರ ನೆಲಕ್ಕುರುಳಿ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ತಾಸಿಗೂ ಅಧಿಕ ಸಮಯ ಸಂಚಾರ ಅಸ್ತವ್ಯಸ್ತಗೊಂಡಿತ್ತು.
    ಮಧ್ಯಾಹ್ನ ಜೋರಾಗಿ ಗಾಳಿ ಬೀಸಿದ ಪರಿಣಾಮ ಶಿವಮೊಗ್ಗ-ಆಯನೂರು ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಮರ ಬಿದ್ದು, ಒಂದು ತಾಸು ಟ್ರಾಫಿಕ್ ಜಾಮ್ ಉಂಟಾಗಿತ್ತು. ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಸ್ಥಳೀಯರೇ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
    ವಿದ್ಯುತ್ ತಂತಿಗಳ ಮೇಲೆ ಮರದ ಕೊಂಬೆಗಳು ಬಿದ್ದ ರಭಸಕ್ಕೆ ಹಲವೆಡೆ ಕಂಬಗಳು ನೆಲಕ್ಕುರುಳಿ ವಿದ್ಯುತ್ ಸಮಸ್ಯೆ ಉಂಟಾಗಿತ್ತು. ಸುರಿಯುವ ಮಳೆಯಲ್ಲೇ ಮೆಸ್ಕಾಂ ಲೈನ್‌ಮ್ಯಾನ್‌ಗಳು ಮರಗಳನ್ನು ತೆರೆವುಗೊಳಿಸಿ, ಲೈನ್‌ಗಳನ್ನು ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದರು.
    ಸಿಡಿಲು ಬಡಿದು 18 ಕುರಿಗಳು ಸಾವು: ಆಯನೂರು ಕೋಟೆಯಲ್ಲಿ ಜಾಕೀರ್ ಹುಸೇನ್ ಎಂಬುವರ 18ಕ್ಕೂ ಅಧಿಕ ಕುರಿಗಳು ಸಿಡಿಲಿಗೆ ಬಲಿಯಾಗಿವೆ. ಕುರಿಗಳು ಮೇಯುತ್ತಿದ್ದಾಗ ಮಳೆ ಜೋರಾಗಿ ಬಂದ ಕಾರಣ ಆಲದ ಮರದಡಿ ಹೋಗಿ ನಿಂತಿದ್ದವು. ಗುಡುಗು, ಸಿಡಿಲು ಸಮೇತ ಜೋರಾಗಿ ಮಳೆ ಆರಂಭಗೊಂಡಿದ್ದು, ಸಿಡಿಲು ಬಡಿದ ಪರಿಣಾಮ 18ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಇದೇ ವೇಳೆ ಕುರಿಗಳನ್ನು ಮೇಯಿಸುತ್ತಿದ್ದ ಜಾಕಿರ್ ಹುಸೇನ್ ಹಾಗೂ ಆತನ ಇಬ್ಬರು ಮಕ್ಕಳು ಪಕ್ಕದಲ್ಲಿದ್ದ ಶುಂಠಿ ಶೆಡ್ಡಿನ ಒಳಗೆ ಓಡಿ ಹೋಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದೆಡೆ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದರೂ ಬಿಸಿಲ ತಾಪದಿಂದ ನಿಟ್ಟುರಿಸು ಬಿಡುತ್ತಿದ್ದ ಜನ ಭರ್ಜರಿ ಮಳೆಯಿಂದ ಕೊಂಚ ನಿರಾಳರಾಗಿದ್ದಾರೆ. ಕೃಷಿಕರ ಮೊಗದಲ್ಲೂ ಮಂದಹಾಸ ಮೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts