More

    45 ವರ್ಷಗಳ ಬಳಿಕ ದಿಲ್ಲಿಯಲ್ಲಿ ಯಮುನೆಯ ರುದ್ರನರ್ತನ; ಜನಜೀವನ ಸಂಪೂರ್ಣ ಅಸ್ತವ್ಯಸ್ತ

    |ರಾಘವ ಶರ್ಮ ನಿಡ್ಲೆ, ನವದೆಹಲಿ
    ಉತ್ತರ ಭಾರತದ ವಿವಿಧೆಡೆ ನಿರಂತರ ಮಳೆಯಾಗುತ್ತಿದ್ದರೂ, ದಿಲ್ಲಿಯಲ್ಲಿ ಕಳೆದೆರಡು ದಿನಗಳಿಂದ ಮಳೆ ಬಂದಿಲ್ಲ. ಆದರೆ, ದಿಲ್ಲಿಯಲ್ಲಿ 22 ಕಿಮೀ ಉದ್ದ ಹರಿಯುವ ಯಮುನಾ ನದಿಯ ಸುತ್ತಮುತ್ತಲಿನ ಪ್ರದೇಶಗಳಿಗೆಲ್ಲಾ ನದಿ ನೀರು ಪ್ರವಾಹದಂತೆ ಅಪ್ಪಳಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬರೋಬ್ಬರಿ 45 ವರ್ಷಗಳ ಬಳಿಕ ದಿಲ್ಲಿ ಜನತೆ ಯಮುನಾ ನದಿಯ ರುದ್ರನರ್ತನಕ್ಕೆ ಸಾಕ್ಷಿಯಾಗಿದ್ದಾರೆ.

    ಯಮುನಾ ನದಿ ಬಯಲಿನಲ್ಲಿ ನಿರ್ವಣಗೊಂಡಿದ್ದ ಐತಿಹಾಸಿಕ ಕೆಂಪುಕೋಟೆಗೂ ನೀರು ನುಗ್ಗಿದೆ. ಹರ್ಯಾಣದ ಹತ್ನಿಕುಂಡ್ ಬ್ಯಾರೇಜ್​ನಿಂದ ನೀರು ಬಿಡುಗಡೆ ಮಾಡಿದ ಪರಿಣಾಮ ದಿಲ್ಲಿ ಜಲಸಂಕಷ್ಟ ಎದುರಿಸುತ್ತಿದೆ. ಗುರುವಾರದಂದು ಬ್ಯಾರೇಜ್​ಗೆ ಭೇಟಿ ನೀಡಿದ ಸಿಎಂ ಅರವಿಂದ ಕೇಜ್ರಿವಾಲ್, ನಿಯಂತ್ರಿತ ನೀರು ಬಿಡುಗಡೆಗೆ ಮನವಿ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಈ ಬಗ್ಗೆ ಪತ್ರ ಬರೆದಿದ್ದು, ಹರ್ಯಾಣ ಸರ್ಕಾರಕ್ಕೆ ದಿಲ್ಲಿ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿ, ನಿಯಂತ್ರಿತ ನೀರು ಬಿಡುಗಡೆಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಏತನ್ಮಧ್ಯೆ, ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶ, ಉತ್ತರಾಖಂಡದಲ್ಲೂ ಮಳೆ ಹೆಚ್ಚುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    1978ರ ಕರಾಳ ನೆನಪು: 1978ರ ನಂತರ ಮೊದಲ ಬಾರಿಗೆ ದಿಲ್ಲಿ ಈ ಪರಿ ಪ್ರವಾಹಕ್ಕೆ ಸಾಕ್ಷಿಯಾಗುತ್ತಿದೆ. 2013ರ ಉತ್ತರಾಖಂಡ ಪ್ರವಾಹದ ಸಂದರ್ಭದಲ್ಲೂ ನೀರು ಹರಿದುಬಂದಿತ್ತು. ಆದರೆ, ಪರಿಸ್ಥಿತಿ ನಿಯಂತ್ರಣದಲ್ಲಿತ್ತು. ಆದರೆ, ಪ್ರಸ್ತುತ ಪರಿಸ್ಥಿತಿ ಕೈ ಮೀರುವಂತಿದೆ. 1978ರ ಸೆ.6ರಂದು 7 ಲಕ್ಷ ಕ್ಯೂಸೆಕ್ ನೀರನ್ನು ಹತ್ನಿಕುಂಡ್​ನಿಂದ ಬಿಡಲಾಗಿತ್ತು. ಅದರಿಂದ ಹಳೆ ದೆಹಲಿಯ ರೈಲ್ವೆ ಸೇತುವೆಯ ನೀರಿನ ಮಟ್ಟ 207.49 ಮೀಟರ್ ಗೆ ಏರಿತ್ತು. ಅಂದರೆ, ಅಪಾಯದ ಮಟ್ಟಕ್ಕಿಂತ 2.66 ಮೀಟರ್​ಗಿಂತ ಹೆಚ್ಚು. ಬುಧವಾರ ಯಮುನೆಯಲ್ಲಿ 207.71 ಮೀ. ದಾಖಲಾಗಿ, ಗುರುವಾರ ಸಂಜೆ ವೇಳೆಗೆ ಅದು 208.75ಕ್ಕೆ ತಲುಪಿದೆ. 1978ರ ಪ್ರವಾಹ ಉತ್ತರ ಮತ್ತು ಪೂರ್ವ ದೆಹಲಿಯ ಸಾವಿರಾರು ಕುಟುಂಬಗಳ ಮನಸ್ಸಿನಲ್ಲಿ ಈಗಲೂ ಕರಾಳ ನೆನಪಾಗಿ ಕಾಡುತ್ತಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಘೊಷಣೆಯಾದ ನಂತರದ ವರ್ಷವದು. ಸುಮಾರು 2.5 ಲಕ್ಷಕ್ಕೂ ಹೆಚ್ಚು ಜನರನ್ನು ನದಿ ಪಕ್ಕದಿಂದ ಸ್ಥಳಾಂತರಿಸಿದ್ದರು. ಇಡೀ ನಗರ ತುರ್ತು ಪರಿಸ್ಥಿತಿಯಲ್ಲಿತ್ತು. ಜನರಿಗೆ ಆಹಾರ, ಅಗತ್ಯ ಸಾಮಗ್ರಿಗಳನ್ನು ಒದಗಿಸಲು ಸೇನೆ ನಿಯೋಜನೆ ಮಾಡಲಾಗಿತ್ತು. ಈಗ ಜನಸಂಖ್ಯೆ ಹೆಚ್ಚಾಗಿದ್ದು, ನೀರಿನ ಪ್ರಮಾಣ ಹೆಚ್ಚಾದಲ್ಲಿ ದೇವರೇ ಕಾಪಾಡಬೇಕು ಎನ್ನುತ್ತಾರೆ ಗೀತಾ ಕಾಲನಿ ನಿವಾಸಿ ದಾಲ್​ಚಂದ್ ಸಾಗರ್.

    Delhi Floods

    ನೀರಿನ ಸಮಸ್ಯೆ: ಪ್ರವಾಹದಿಂದಾಗಿ ದೆಹಲಿಯ ವಜೀರಾಬಾದ್, ಚಂದ್ರವಾಲ್ ಮತ್ತು ಓಖ್ಲಾದಲ್ಲಿರುವ ಮೂರು ನೀರು ಸಂಸ್ಕರಣಾ ಘಟಕಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದರಿಂದಾಗಿ ದೆಹಲಿಯಾದ್ಯಂತ ನೀರು ಪೂರೈಕೆಗೆ ಅಡ್ಡಿಯಾಗಿದೆ. ಯಮುನಾ ನದಿ ನೀರು ತಗ್ಗಿದ ಬಳಿಕ ಈ ಸ್ಥಾವರಗಳ ಕಾರ್ಯ ಪುನರಾರಂಭವಾಗಲಿದೆ ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ದೆಹಲಿಯ ಹಲವು ಪ್ರದೇಶಗಳಿಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇದೇ ಕಾರಣಕ್ಕಾಗಿ, ವರ್ಕ್ ಫ್ರಮ್ ಹೋಮ್ೆ ಸಿಎಂ ಆದ್ಯತೆ ನೀಡಿದ್ದು, ಶಾಲಾ-ಕಾಲೇಜುಗಳಿಗೆ ಭಾನುವಾರದ ತನಕ ರಜೆ ಘೊಷಿಸಲಾಗಿದೆ.

    ಸರ್ಕಾರಗಳೇ ಹೊಣೆ: ನೀರಿನ ಮಟ್ಟ ಸ್ವಲ್ಪ ಜಾಸ್ತಿಯಾದರೂ ದೆಹಲಿಯ ಯಮುನಾ ನದಿ ತೀರದ ಪ್ರದೇಶ ಮುಳುಗುವ ಅಪಾಯವಿದೆ ಎಂಬುದು ಸರ್ಕಾರಗಳಿಗೆ ಗೊತ್ತಿಲ್ಲದೇನಿಲ್ಲ. ಆದರೂ ನದಿ ಪಕ್ಕದಲ್ಲಿ ಸಾವಿರಾರು ಮನೆ, ಕಟ್ಟಡಗಳ ನಿರ್ವಣಕ್ಕೆ ಅನುಮತಿ ಕೊಡಲಾಗಿದೆ. ಈಗಲೂ ಹತ್ತಾರೂ ಕಟ್ಟಡ ನಿರ್ಮಾಣ ಕಾಮಗಾರಿ ಈ ಪ್ರದೇಶದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್ ಮತ್ತು 9 ವರ್ಷಗಳಿಂದ ಸರ್ಕಾರ ನಡೆಸುತ್ತಿರುವ ಆಮ್ ಆದ್ಮಿ ಪಕ್ಷಗಳೇ ಇಂಥದ್ದೊಂದು ದುರಂತಕ್ಕೆ ಕಾರಣ. ಈಗ ಸಿಎಂ ಕೇಜ್ರಿವಾಲ್​ಗೆ ಬೈದುಕೊಂಡು ಕೂತರೆ ಏನೂ ಪ್ರಯೋಜನವಿಲ್ಲ ಎನ್ನುತ್ತಾರೆ ದಿಲ್ಲಿಯ ಕಾಶ್ಮೀರಿ ಗೇಟ್ ನಿವಾಸಿ ಹರಿಂದರ್ ಸಿಂಗ್.

    ರಸ್ತೆ ಬದಿ ತಾತ್ಕಾಲಿಕ ಟೆಂಟ್ ಸಮಾಧಿಗಳೂ ಕಣ್ಮರೆ!: ನದಿ ಅಕ್ಕಪಕ್ಕದ ನಿವಾಸಿಗರಿಗೆ ಕೊಂಚ ದೂರದ ಹೆದ್ದಾರಿ, ಮೇಲ್ಸೇತುವೆಗಳ ಬದಿಯಲ್ಲಿ ತಾತ್ಕಾಲಿಕ ಟೆಂಟ್​ಗಳನ್ನು ಸರ್ಕಾರದಿಂದ ಕಟ್ಟಿಕೊಡಲಾಗಿದೆ. ನೀರು ತಗ್ಗುವ ತನಕ ಈ ಟೆಂಟ್​ನಲ್ಲೇ ವಾಸ್ತವ್ಯ ಮುಂದುವರಿಸಬೇಕಿದೆ. ಸೂಕ್ತ ಸಮಯಕ್ಕೆ ಆಹಾರ, ನೀರನ್ನು ಸ್ಥಳೀಯಾಡಳಿತದಿಂದ ಒದಗಿಸಲಾಗುತ್ತಿದೆ. ಯಮುನಾ ನದಿ ಸನಿಹದಲ್ಲಿರುವ ಹಳೆ ದೆಹಲಿಯ ರಸ್ತೆ ಬದಿಯುದ್ದಕ್ಕೂ ಇರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸದೈವ ಅಟಲ್ ಸ್ಮಾರಕ ಸೇರಿದಂತೆ ಹಲವು ಮಾಜಿ ಪ್ರಧಾನಿ ಹಾಗೂ ರಾಷ್ಟ್ರಪತಿಗಳ ಸಮಾಧಿ ಸ್ಥಳಗಳೆಲ್ಲವೂ ನೀರಿನಿಂದ ಮುಳುಗಿ ಹೋಗಿವೆ!

    ಮುಳುಗಿದ ಗೋಶಾಲೆ: ದೆಹಲಿಯ ಸಿವಿಲ್ ಲೈನ್ಸ್ ಬಳಿ ಬೇಲಾ ರೋಡ್​ನ ಯಮುನಾ ಕಿನಾರೆಯಲ್ಲಿರುವ ಗರೀಬ್ ಗೋಶಾಲೆ ಪರಿಸ್ಥಿತಿ ಹೇಳತೀರದಾಗಿದೆ. ಬಹುಪಾಲು ಗೋವುಗಳು ಪ್ರವಾಹದಲ್ಲಿ ಸಿಲುಕಿಕೊಂಡಿದ್ದು, ಅವುಗಳನ್ನು ಮೇಲಕ್ಕೆತ್ತುವುದೇ ಹರಸಾಹಸದ ಕೆಲಸವಾಗಿಬಿಟ್ಟಿದೆ. ದೊಡ್ಡ ಗಾತ್ರದ ಹಸುಗಳ ದೇಹದ ಮುಕ್ಕಾಲು ಭಾಗ ನೀರಿನಲ್ಲಿದ್ದರೆ, ಕರುಗಳಂತೂ ಸಂಕಷ್ಟದಲ್ಲಿವೆ.

    ದೆಹಲಿಯಲ್ಲಿ ಮಳೆಯ ರೌದ್ರಾವತಾರ; ಜುಲೈ 16ರ ವರೆಗೆ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts