ಬಾರದಿದ್ದ ಮಳೆ ಬಂದಾಗ…

< ರಾಶಿಗೆ ಬಂದಿದ್ದ ತೊಗರಿ ಹಾನಿ, ನೆಲಕ್ಕುರುಳಿದ ಜೋಳ < ಅಂಗಡಿ-ಮನೆಗಳಿಗೆ ನುಗ್ಗಿದ ನೀರು

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಗುರುವಾರ ರಾತ್ರಿ ನಗರ ಸೇರಿ ಕಲಬುರಗಿ, ಕಮಲಾಪುರ, ಚಿಂಚೋಳಿ ತಾಲೂಕಿನ ಹಲವೆಡೆ ಸುರಿದ ಅಬ್ಬರದ ಮಳೆಯಿಂದಾಗಿ ಒಣಗಿ ಬರಡಾಗಿದ್ದ ಭೂಮಿಗಿಷ್ಟು ನೀರು ಸಿಕ್ಕಂತಾಗಿದೆ. ಜತೆಗೆ ಬರದಿಂದ ಕಂಗೆಟ್ಟಿದ್ದ ರೈತರಿಗೆ ಸಿಗಲಿದ್ದ ಅಲ್ಪಸ್ವಲ್ಪ ತೊಗರಿ ಬೆಳೆ ಹಾಗೂ ಬೆಳೆದು ನಿಂತಿದ್ದ ಬಿಳಿಜೋಳ ನೆಲಕ್ಕುರುಳಿದೆ. ಮಳೆ ಒಂದಿಷ್ಟು ಖುಷಿ, ಸಂಕಷ್ಟ ತರಿಸಿದೆ.

ನಗರದಲ್ಲಿ ರಾತ್ರಿ 11.20ರ ಸುಮಾರಿಗೆ ಸಣ್ಣ ಹನಿ ಸುರಿಯುತ್ತ ಕ್ರಮೇಣ ಜೋರಾಯಿತು. ಸುಮಾರು ನಾಲ್ಕು ಗಂಟೆ ಸುರಿದ ಮಳೆ ನಗರವೆಲ್ಲ ನೀರಾಗುವಂತೆ ಮಾಡಿತು. ಮಾಮೂಲಿನಂತೆ ಲಾಲ್ಗೇರಿ ಕ್ರಾಸ್ನಲ್ಲಿ ನೀರು ನಿಂತು ಅಂಗಡಿಗಳಿಗೆ ನುಗ್ಗಿತು. ನೀರು ಸರಿಯಾಗಿ ಹರಿದು ಹೋಗಲು ಸರಿಯಾದ ಚರಂಡಿ ಮಾರ್ಗಗಳಿಲ್ಲದೆ ಸುಮಾರು ಹೊತ್ತು ರಸ್ತೆಯಲ್ಲ ಜಲಾವೃತಗೊಂಡಿದ್ದವು. ಇತ್ತ ಮಳೆ ಬರದೆ ತ್ರಾಸಿನಲ್ಲಿದ್ದ ರೈತರಿಗೆ ಬಾರದಿದ್ದ ಮಳೆ ಬಂದು ಖುಷಿ ತರಲಿಲ್ಲ. ಬದಲಿಗೆ ಕೈಗೆ ಬಂದಿದ್ದ ತೊಗರಿ ಹೋಯ್ತಲ್ಲ, ಜೋಳ ನೆಲಕ್ಕುರುಳಿದ ನೋವು ಕಾಡುವಂತೆ ಮಾಡಿತು.

ಜೇವರ್ಗಿ ಕ್ರಾಸ್, ಲಾಲ್ಗೇರಿ ಕ್ರಾಸ್, ಸೇಡಂ ರಸ್ತೆಯ ಕೆಲವೆಡೆ, ಕೆಬಿಎನ್ ಆಸ್ಪತ್ರೆ ಬಳಿ ಹಾಗೂ ಸೂಪರ್ ಮಾರ್ಕೆಟ್ನ ಕೆಳಪ್ರದೇಶದ ಕಾಂಪ್ಲೆಕ್ಸ್ಗಳಿಗೆ ಮಳೆ ನೀರು ನುಗ್ಗಿತು. ಒಂದೂವರೆಯಿಂದ ಎರಡು ಅಡಿವರೆಗೆ ನೀರು ನಿಂತಿತ್ತು. ಹಲವು ಅಂಗಡಿಯೊಳಗೆ ನೀರು ನುಗ್ಗಿ ವ್ಯಾಪಾರಿಗಳನ್ನು ಪರೇಶಾನ್ ಮಾಡಿತು. ಬಿದ್ದಾಪುರ ಕಾಲನಿ, ಮಹಾದೇವ ನಗರ, ಲಕ್ಷ್ಮೀನಗರ ಇತರ ತಗ್ಗು ಪ್ರದೇಶದ ಬಡಾವಣೆಗಳಲ್ಲಿ ನೀರು ನಿಂತು ಜನರು ಹೈರಾಣ ಆಗುವಂತಾಯಿತು.

ಜೇವರ್ಗಿ ಕಾಲನಿ, ಬಿದ್ದಾಪುರ ಕಾಲನಿ, ನೆಹರು ಗಂಜ್ ಪ್ರದೇಶ ಸೇರಿ ಹಲವೆಡೆ ರಸ್ತೆ ಹಾಗೂ ಸೇತುವೆ ಕೆಲಸ ನಡೆದಿದ್ದರಿಂದ ಅಲ್ಲಿಯೂ ನೀರು ಹರಿದು ಹೋಗದೆ ಜಮಾಯಿಸಿತ್ತು. ರಾತ್ರಿ ಮಳೆ ಅಬ್ಬರಿಸಿದರೂ ಬೆಳಗ್ಗೆ ಏನೂ ಆಗಿಲ್ಲ ಎಂಬಂತೆ ಕಂಡು ಬಂದಿತು. ಆದರೆ ಕೆಳಪ್ರದೇಶದ ಅಂಗಡಿ-ಮನೆಗಳು ಜಲಾವೃತಗೊಂಡಿದ್ದವು. ನಗರದಲ್ಲಿ ಚರಂಡಿಗಳನ್ನು ಕೆಲವರು ಒತ್ತುವರಿ ಮಾಡಿದ್ದರಿಂದ ಲಾಲ್ಗೇರಿ ಕ್ರಾಸ್ ಸಮಸ್ಯೆ ಹಾಗೇ ಮುಂದುವರಿದಿದೆ.

ಕಲಬುರಗಿಯಲ್ಲಿ ಹೆಚ್ಚು ಮಳೆ
ಕಳೆದ 24 ಗಂಟೆಗಳಲ್ಲಿ ಕಲಬುರಗಿ ನಗರ ಮತ್ತು ತಾಲೂಕಿನಲ್ಲೇ 26 ಮಿಮೀ ಮಳೆಯಾಗಿದೆ. ಉಳಿದಂತೆ ಚಿಂಚೋಳಿ ತಾಲೂಕಿನಲ್ಲಿ 22 ಮಿಮೀ, ಚಿತ್ತಾಪುರದಲ್ಲಿ 13 ಆಳಂದ ತಾಲೂಕಿನಲ್ಲಿ 10 ಮಿಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 12 ಮಿಮೀ ಮಳೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಇನ್ನೆರಡು ದಿನ ಮೋಡದ ವಾತಾವರಣ
ಹವಾಮಾನ ಇಲಾಖೆ ಮಾಹಿತಿಯಂತೆ ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಮೋಡಕವಿದ ವಾತಾವರಣ ಮುಂದುವರಿಯಲಿದೆ. ಆಗಾಗ್ಗೆ ಸ್ವಲ್ಪ ಮಳೆಯಾಗಲಿದೆ. ಹೀಗಾಗಿ ತೊಗರಿ ಇತರ ಬೆಳೆಗಳನ್ನು ಕಟಾವು ಮಾಡಿ ರಾಶಿ ಮಾಡುವ ರೈತರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಅಧಿಕಾರಿಗಳು ಕೋರಿದ್ದಾರೆ.