More

    ಮಳೆಗೆ ನಲುಗಿದ ಗ್ರಾಮೀಣ ಭಾಗ

    ಮಂಗಳೂರು/ಉಡುಪಿ: ದ.ಕ. ಜಿಲ್ಲೆಯ ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕು ಸಹಿತ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಭಾರಿ ಗಾಳಿ ಮಳೆ ಮುಂದುವರಿದಿದ್ದು, ನೆರೆ-ಪ್ರವಾಹ, ಗುಡ್ಡ ಕುಸಿತ, ಮನೆಗಳಿಗೆ ಹಾನಿ ಮೊದಲಾದವುಗಳಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಸ್ನಾನಘಟ್ಟ ಐದನೇ ದಿನವೂ ಮುಳುಗಡೆಯಾಗಿದೆ. ಇಲ್ಲಿನ ಶೌಚಗೃಹ, ದೇವರ ಅವಭೃತ ಕಟ್ಟೆ ಭಾಗಶಃ ಮುಳುಗಡೆಗೊಂಡಿದೆ. ಡ್ರೆಸ್ಸಿಂಗ್ ರೂಂ, ಲಗೇಜ್ ಕೊಠಡಿ, ರಕ್ಷಕರ ಕೊಠಡಿ ಒಳಗೊಂಡ ಕಟ್ಟಡ ಜಲಾವೃತಗೊಂಡಿದೆ. ಹಳೇ ಸೇತುವೆಯೂ ಮುಳುಗಡೆಯಾಗಿದೆ. ದರ್ಪಣತೀರ್ಥ ನದಿಯ ಆಸುಪಾಸು ಕೃಷಿ ತೋಟಗಳಿಗೆ ನೀರು ನುಗ್ಗಿದೆ. ಕಡಬದಲ್ಲಿ ಹೊಸ್ಮಠ ಮುಳುಗು ಸೇತುವೆ ಆಗಾಗ ಮುಳುಗಡೆಯಾಗುತ್ತಿದೆ. ಈ ಭಾಗದಲ್ಲೂ ತೋಟಗಳು ಜಲಾವೃತಗೊಂಡಿವೆ.
    ಶನಿವಾರದಿಂದ ಮಳೆಯ ಅಬ್ಬರ ಕಡಿಮೆಯಾಗುವ ಸಾಧ್ಯತೆಯಿದ್ದು, ಆ.11ರವರೆಗೆ ದಿನ ಆರೆಂಜ್ ಅಲರ್ಟ್ ನೀಡಲಾಗಿದೆ. ಜಿಲ್ಲೆಯ ಇತರ ಕಡೆಗಳಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದ್ದು, ದಿನದ ಬಹುಭಾಗ ಮೋಡ ಕವಿದ ವಾತಾವರಣವಿತ್ತು. ಇತ್ತ ಕಡಲ್ಕೊರೆತ ತೀವ್ರಗೊಂಡಿದ್ದು, ಸೋಮೇಶ್ವರ, ಉಚ್ಚಿಲ, ಪಣಂಬೂರು, ತಣ್ಣೀರುಬಾವಿ ಪ್ರದೇಶದಲ್ಲಿ ಹಾನಿಯಾಗಿದೆ.
    ಉಡುಪಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಬೆಳಗ್ಗೆ ಕಡಿಮೆ ಇದ್ದರೂ ಅಪರಾಹ್ನ ಧಾರಾಕಾರವಾಗಿ ಸುರಿದಿದೆ. ಗಾಳಿಯಿಂದಾಗಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಹಾನಿ ಸಂಭವಿಸಿದೆ.

    ವಾಡಿಕೆಗಿಂತ ಹೆಚ್ಚು: ಜೂನ್ ಮತ್ತು ಜುಲೈ ತಿಂಗಳಲ್ಲಿ ಮಳೆ ಕೊರತೆ ಅನುಭವಿಸಿದ್ದ ಉಭಯ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳ ಮೊದಲ ವಾರದಲ್ಲೇ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ದ.ಕ. ಶೇ.47, ಉಡುಪಿ ಶೇ.40ರಷ್ಟು ಮಳೆ ಹೆಚ್ಚು ಮಳೆ ಸುರಿದಿದೆ. ಮುಂಗಾರು ಅವಧಿಯ ಮಳೆ ಇನ್ನೂ ಶೇ.24ರಷ್ಟು ಕೊರತೆಯಾಗಿದೆ ಎನ್ನುತ್ತದೆ ಹವಾಮಾನ ಇಲಾಖೆಯ ಅಂಕಿ ಅಂಶ.

    ಚಾರ್ಮಾಡಿ ಅತ್ಯಧಿಕ: ಶುಕ್ರವಾರ ಬೆಳಗ್ಗಿನಿಂದ ಸಾಯಂಕಾಲವರೆಗಿನ ಮಳೆ ಮಾಹಿತಿಯಂತೆ ಚಾರ್ಮಾಡಿಯಲ್ಲಿ ದ.ಕ. ಜಿಲ್ಲೆಯಲ್ಲೇ ಅತ್ಯಧಿಕ 95 ಮಿ.ಮೀ. ಮಳೆ ಸುರಿದಿದೆ. ಇಂದಬೆಟ್ಟು 84, ಕಡಿರುದ್ಯಾವರ 82, ನಾವೂರು 75.5, ನೆರಿಯ 72, ಪುದುವೆಟ್ಟುವಿನಲ್ಲಿ 70 ಮಿ.ಮೀ. ಮಳೆಯಾಗಿದೆ. ಶುಕ್ರವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಬಂಟ್ವಾಳ 21, ಬೆಳ್ತಂಗಡಿ 73.2, ಮಂಗಳೂರು 17.3, ಪುತ್ತೂರು 57.6, ಸುಳ್ಯ 79.2 ಮಿ.ಮೀ. ಸಹಿತ ಸರಾಸರಿ 49.6 ಮಿ.ಮೀ. ಮಳೆ ಮಳೆಯಾಗಿತ್ತು. ಉಡುಪಿ 52.3, ಕುಂದಾಪುರ 71.0, ಕಾರ್ಕಳ 73.5 ಮಿ.ಮೀ. ಸಹಿತ ಉಡುಪಿ ಜಿಲ್ಲೆಯಲ್ಲಿ ಸರಾಸರಿ 68.0 ಮಿ.ಮೀ. ಮಳೆ ದಾಖಲಾಗಿದೆ.

    ಅಣೆಕಟ್ಟಿನಲ್ಲಿ ನೀರಿನ ಮಟ್ಟ: ನೀರಿನ ಹರಿವು ಹೆಚ್ಚಿರುವುದರಿಂದ ಅಣೆಕಟ್ಟುಗಳ ಗೇಟ್‌ಗಳನ್ನು ತೆರೆಯಲಾಗಿದೆ. ಶುಕ್ರವಾರ ಸಾಯಂಕಾಲ 5 ಗಂಟೆವರೆಗಿನ ಮಾಹಿತಿಯಂತೆ ಎಎಂಆರ್ ಅಣೆಕಟ್ಟಿಗೆ 2,217 ಕ್ಯುಸೆಕ್ಸ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಹೊರಗೆ ಹೋಗುತ್ತಿದೆ. 7 ಗೇಟ್‌ಗಳನ್ನು ಶೇ.50ರಷ್ಟು ತೆರೆಯಲಾಗಿದ್ದು, 1 ಗೇಟ್ ಶೇ.15ರಷ್ಟು ತೆರೆಯಲಾಗಿದೆ. 18.9 ಮೀ. ನೀರು ನಿಂತಿದೆ. ತುಂಬೆ ಅಣೆಕಟ್ಟಿನಲ್ಲಿ 6.40 ಮೀ. ನೀರು ಸಂಗ್ರಹವಿದ್ದು, ಎಲ್ಲ 30 ಗೇಟ್‌ಗಳನ್ನು ತೆರೆದು ನೀರು ಹೊರಬಿಡಲಾಗುತ್ತಿದೆ. ದಿಶಾ(ಕಡಬ) ಅಣೆಕಟ್ಟಿನಲ್ಲಿ 4.7 ಮೀ, ಸಾಗರ್(ನೀರಕಟ್ಟೆ) ಅಣೆಕಟ್ಟಿನಲ್ಲಿ 34.30 ಮೀ. ನೀರು ನಿಂತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts