More

    ಭಾರಿ ಅವಾಂತರ ಸೃಷ್ಟಿಸಿದ ಮಳೆ

    ಯಲ್ಲಾಪುರ: ತಾಲೂಕಿನಲ್ಲಿ ಭಾನುವಾರ ಸಂಜೆ ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು, ಹಲವೆಡೆ ಭಾರಿ ಅವಾಂತರ ಸೃಷ್ಟಿಸಿದೆ. ಮದನೂರು ಭಾಗದಲ್ಲಿ ಭಾರಿ ಗಾಳಿಯಿಂದಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

    ಮದನೂರು ಗ್ರಾ.ಪಂ. ವ್ಯಾಪ್ತಿಯ ಮಾದೇವಪ್ಪದಲ್ಲಿ 20 ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ತಗಡುಗಳು ಹಾರಿ ಹೋಗಿವೆ. ಇದರಿಂದ ಮನೆಯೊಳಗೆ ನೀರು ನುಗ್ಗಿ ಮನೆಯಲ್ಲಿದ್ದ ಆಹಾರ ಸಾಮಗ್ರಿಗಳು, ಇತರ ವಸ್ತುಗಳಿಗೆ ಹಾನಿ ಉಂಟಾಗಿದೆ. ಕಂಡ್ರಾನಕೊಪ್ಪದಲ್ಲಿ ಗಂಗಾಬಾಯಿ ಶಂಕರ ಗಾಂವ್ಕಾರ ಅವರ ತೋಟದಲ್ಲಿ ಬಾಳೆ-ಅಡಕೆ ಸಸಿಗಳು ಧರೆಗುರುಳಿವೆ. ಮರವೊಂದು ನೀರಿನ ಟ್ಯಾಂಕ್ ಮೇಲೆ ಬಿದ್ದು ಜಖಂಗೊಳಿಸಿದೆ. ಕಿರವತ್ತಿ, ಮದನೂರು ಭಾಗದಲ್ಲಿ ಮಾವಿನ ಬೆಳೆ ನೆಲ ಕಚ್ಚಿದೆ. ಕೊಯ್ಲು ಮಾಡಿಟ್ಟ ಭತ್ತದ ಬಣವೆಗಳು ಜಲಾವೃತಗೊಂಡಿವೆ.

    ಪಟ್ಟಣದ ಬೆಲ್ ರಸ್ತೆಯಲ್ಲಿ ನಡೆಯುವ ವಾರದ ಸಂತೆಗೆ ಮಳೆಯಿಂದ ಅಡ್ಡಿ ಉಂಟಾಗಿದ್ದು, ತರಕಾರಿಗಳು ಜಲಾವೃತಗೊಂಡು ವ್ಯಾಪಾರಸ್ಥರು ಪರದಾಡುವಂತಾಯಿತು. ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ವಿದ್ಯುತ್ ತಂತಿ ಹರಿದು ಬಿದ್ದು ಕೆಲಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು.

    ದಾಂಡೇಲಿ,ಜೊಯಿಡಾ ತಾಲೂಕಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಗುಡುಗು ಸಹಿತ ಮಳೆಯಾಗಿದ್ದು, ಕಳೆದ 15ದಿನಗಳಿಂದ ಬಿಸಿಲ ಬೇಗೆಗೆ ಬಳಲಿದ್ದ ಜನರು ತಂಪನುಭವಿಸಿದರು.

    ಸಿಡಿಲು ಬಡಿದು ಮನೆಗೆ ಹಾನಿ

    ಮುಂಡಗೋಡ ತಾಲೂಕಿನ ಮೈನಳ್ಳಿ ಗ್ರಾಮದ ಮನೆಯೊಂದಕ್ಕೆ ಭಾನುವಾರ ಸಂಜೆ ಸಿಡಿಲು ಬಡಿದು ಹಾನಿಯಾಗಿದೆ. ಸಿಡಿಲು ಬಡಿದ ಪರಿಣಾಮ ಮಾರಾಟಕ್ಕೆಂದು ಇಟ್ಟ ರೆಡಿಮೇಡ್ ಬಟ್ಟೆಗಳು, ಕೋಣೆಯ ಕಟ್ಟಿಗೆಯ ಮೇಲ್ಛಾವಣಿ, ಗೋಡೆ, ಹೆಂಚುಗಳು, ದಿನಬಳಕೆ ವಸ್ತು, ಮೀನಿನ ಬಲೆಗಳು, ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts