More

    ಮಳೆಗೆ ಕರಾವಳಿ ಜನ ತತ್ತರ

    ಮಂಗಳೂರು/ಉಡುಪಿ: ದ.ಕ ಜಿಲ್ಲಾದ್ಯಂತ ಗುರುವಾರ ರಾತ್ರಿ-ಶುಕ್ರವಾರ ಹಗಲು ವೇಳೆ ಉತ್ತಮ ಮಳೆ ಸುರಿದಿದೆ. ಮಂಗಳೂರು ನಗರ ವ್ಯಾಪ್ತಿಯ ಜಪ್ಪಿನಮೊಗರು, ಕಲ್ಲಾಪು, ಜಪ್ಪುಕುಡುಪಾಡಿ, ಪಾಂಡೇಶ್ವರದ ಶಿವನಗರ, ವೈದ್ಯನಾಥೇಶ್ವರ ನಗರ ಬಂಗ್ರಕೂಳೂರು ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿ ನೂರಾರು ಮನೆಗಳು ಕೆಲವು ಗಂಟೆಗಳ ಕಾಲ ಜಲಾವೃತಗೊಂಡಿತು.

    ಅಗ್ನಿಶಾಮಕ ದಳ, ಹೋಂಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬೋಟ್‌ಗಳ ಮೂಲಕ ಹಲವರನ್ನು ಸುರಕ್ಷಿತ ಸ್ಥಳಗಳಿಗೆ ತರುವಲ್ಲಿ ಯಶಸ್ವಿಯಾಯಿತು. ಜಿಲ್ಲಾಡಳಿತ ಕಾಳಜಿ ಕೇಂದ್ರಗಳನ್ನು ತೆರೆದು ಸಂತ್ರಸ್ತರಿಗೆ ಊಟ, ವಸತಿ ವ್ಯವಸ್ಥೆ ಮಾಡಿದೆ. ಮಧ್ಯಾಹ್ನವರೆಗೆ ನಿರಂತರವಾಗಿ ಸುರಿದ ಮಳೆ ಬಳಿಕ ತನ್ನ ಪ್ರತಾಪ ಕಡಿಮೆ ಮಾಡಿದೆ. ಪರಿಣಾಮ ನೆರೆ ನೀರು ಇಳಿದು, ಜನರು ಸ್ವಲ್ಪ ನಿಟ್ಟುಸಿರು ಬಿಟ್ಟರು. ಜಿಲ್ಲೆಯ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಕಡಬ ತಾಲೂಕಿನಲ್ಲೂ ಉತ್ತಮ ಮಳೆಯಾಗಿದೆ. ಪರಿಣಾಮ ನದಿಗಳಲ್ಲಿ ನೀರಿನ ಹರಿಯುವಿಕೆ ಮತ್ತೆ ಹೆಚ್ಚಾಗಿದೆ. ಮೂಲ್ಕಿಯಲ್ಲಿ ಶಾಂಭವಿ ನದಿ ಉಕ್ಕಿ ಹರಿದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಒಳ ಅಂಗಣಕ್ಕೆ ನೀರು ನುಗ್ಗಿದೆ. ಭಕ್ತರು ದೇವಳ ದರ್ಶನ ಪಡೆಯಲು ಅಡ್ಡಿಯಾಗಲಿಲ್ಲ.

    ಶುಕ್ರವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಮಂಗಳೂರು ತಾಲೂಕಿನಲ್ಲಿ ಅತ್ಯಧಿಕ 210.9 ಮಿ.ಮೀ. ಮಳೆ ಸುರಿದಿದೆ. ಉಳಿದಂತೆ ಬಂಟ್ವಾಳದಲ್ಲಿ 88.2, ಬೆಳ್ತಂಗಡಿಯಲ್ಲಿ 73, ಪುತ್ತೂರಿನಲ್ಲಿ 13.4, ಸುಳ್ಯದಲ್ಲಿ 7.8 ಮಿ.ಮೀ. ಮಳೆ ಸಹಿತ ಸರಾಸರಿ 78.7 ಮಿ.ಮೀ ಮಳೆ ಸುರಿದಿದೆ.

    ಇಂದು ಆರೆಂಜ್ ಅಲರ್ಟ್
    ಹವಾಮಾನ ಇಲಾಖೆ ಶನಿವಾರ ಮುಂಜಾನೆವರೆಗೆ ಕರಾವಳಿಗೆ ರೆಡ್ ಅಲರ್ಟ್, ಆ ಬಳಿಕ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಆ ಬಳಿಕ ಮೂರು ಯೆಲ್ಲೋ ಅಲರ್ಟ್ ಇದೆ. ಸಮುದ್ರದಲ್ಲಿ ತೀವ್ರವಾದ ಗಾಳಿ ಬೀಸುತ್ತಿದ್ದು, ಗಂಟೆಗೆ 45-55 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಉಡುಪಿಯಲ್ಲಿ ಧಾರಾಕಾರ ಮಳೆ
    ಉಡುಪಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಗುರುವಾರ ತಡರಾತ್ರಿಯಿಂದ ಶುಕ್ರವಾರ ಮಧ್ಯಾಹ್ನವರೆಗೂ ನಿರಂತರ ಮಳೆಯಾಗಿದೆ. ಶುಕ್ರವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳಲ್ಲಿ ಇನ್ನಂಜೆ ಗ್ರಾಮ ವ್ಯಾಪ್ತಿಯಲ್ಲಿ ಅತ್ಯಧಿಕ 281 ಮಿ.ಮೀ. ಮಳೆ ದಾಖಲಾಗಿದೆ. ಬಡಾನಿಡಿಯೂರು ಗ್ರಾಮದಲ್ಲಿ 276, ಮುಂಡ್ಕೂರಿನಲ್ಲಿ 255, ಕೋಡಿ ಗ್ರಾಮದಲ್ಲಿ 231 ಮತ್ತು ಹೆಜಮಾಡಿಯಲ್ಲಿ 215 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಸರಾಸರಿ 93 ಮಿ.ಮೀ. ಮಳೆ ದಾಖಲಾಗಿದೆ. ಉಡುಪಿ ತಾಲೂಕಿನಲ್ಲಿ ಗರಿಷ್ಠ 135.6 ಮಿ.ಮೀ. ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts