More

    ವಿಪರೀತ ಮಳೆ; ಒಂದು ವಾರ ಹೈ ಅಲರ್ಟ್

    ಬೆಂಗಳೂರು: ರಾಜ್ಯದುದ್ದಗಲಕ್ಕೂ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಜಿಲ್ಲಾಡಳಿತದ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಎಲ್ಲೆಲ್ಲಿ ಮಳೆ ಯಾವ ಪ್ರಮಾಣದಲ್ಲಿ ಸುರಿಯುತ್ತಿದೆ ಎಂಬ ಕುರಿತು ಮಾಹಿತಿ ಪಡೆಯುತ್ತಿದ್ದೇವೆ. ಮುಂದಿನ ಒಂದು ವಾರ ಹೈ ಅಲರ್ಟ್‌ನಲ್ಲಿ ಇರಬೇಕಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

    ರಾಜ್ಯದಲ್ಲಿ ಅತಿಯಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡ ಸಚಿವರು, ಮುಂದೆ ಮುಂಗಾರು ಚುರುಕಾಗಲಿದೆ. ಕರಾವಳಿ ಭಾಗ, ಬೆಳಗಾವಿಯಲ್ಲಿ ಹೆಚ್ಚು ಮಳೆಯಾಗಲಿದೆ. ಬೀದರ್, ಯಾದಗಿರಿ, ವಿಜಯಪುರ, ಕಲಬುರಗಿಯಲ್ಲೂ ಅತೀ ಹೆಚ್ಚು ಮಳೆಯಾಗಲಿದೆ. ಈಗಾಗಲೇ ಈ ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದರು.

    ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಲೇ ಇದೆ. ವಾಡಿಕೆಗಿಂತಲೂ ಹೆಚ್ಚು ಮಳೆ ಆಗುತ್ತಿದ್ದು ಮಳೆಯಿಂದಾದ ಅನಾಹುತಕ್ಕೆ ಒಟ್ಟು 27 ಬಲಿಯಾಗಿದ್ದಾರೆ. ಎಂಟು ಜನ ಸಿಡಿಲಿಗೆ ಬಲಿಯಾಗಿದ್ದಾರೆ, ಕೆಲವರು ಕಾಲು ಜಾರಿ ಹಳ್ಳಗಳಲ್ಲಿ ಬಿದ್ದಿದ್ದಾರೆ. ಇದೆಲ್ಲವನ್ನು ಇದನ್ನೂ ನಾವು ಪ್ರಕೃತಿ ವಿಕೋಪದಿಂದ ಜೀವ ಹಾನಿ ಎಂದೇ ಪರಿಗಣಿಸಿದ್ದೇವೆ ಎಂದು ತಿಳಿಸಿದರು.

    ಒಂದು ವಾರದ ಹಿಂದೆ ಜಲಾಶಯಗಳಲ್ಲಿ ನೀರು ಇರಲಿಲ್ಲ. ಇಂದು ಒಟ್ಟು ಜಲಾಶಯಗಳಲ್ಲಿ 40 ಪರ್ಸೆಂಟ್ ನೀರು ಇದೆ. ಕಳೆದ 7 ದಿನಗಳಲ್ಲಿ ಜಲಾಶಯಗಳಲ್ಲಿ 144 ಟಿಎಂಸಿ ನೀರು ಸಂಗ್ರಹವಾಗಿದೆ. ನಿನ್ನೆ (ಭಾನುವಾರ) ಒಂದೇ ದಿನ 40 ಟಿಎಂಸಿ ನೀರು ಶೇಖರಣೆಯಾಗಿದೆ ಎಂದು ವಿವರಿಸಿದರು.

    ಕಾವೇರಿ, ಕೃಷ್ಣ ನದಿಗಳ ಜಲಾಶಯದ ಒಳ ಹರಿವು ಹೆಚ್ಚಾಗಿದೆ. ಹಾರಂಗಿ, ಹೇಮಾವತಿ, ಕಬಿನಿ, ಕೆಆರ್‌ಎಸ್‌ನಲ್ಲಿ ಹೊರ ಹರಿವು ಕೂಡ ಈಗ ಆರಂಭ ಆಗಿದೆ. ಕೃಷ್ಣ ತಪ್ಪಲಿನ ಜಲಾಶಯಗಳಲ್ಲಿಒಳ ಹರಿವು ಗಣನೀಯವಾಗಿ ಹೆಚ್ಚಾಗಿದೆ ಎಂದರು.

    ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಜುಲೈನಲ್ಲಿ ಹೆಚ್ಚು ಮಳೆಯಾಗುತ್ತದೆ ಎಂದಿದ್ದರು. ಅದರಂತೆ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದೆ. ಜೂನ್ ಅಂತ್ಯದಲ್ಲಿ ಶೇ.56ರಷ್ಟು ಮಳೆ ಕೊರತೆ ಇತ್ತು. ಒಂದು ವಾರದಲ್ಲಿ ಆಗಿರುವ ಮಳೆಯಿಂದಾಗಿ ಕೊರತೆ ಪ್ರಮಾಣ ಶೇ.29 ರಷ್ಟಕ್ಕೆ ಬಂದಿದೆ. ಭಾನುವಾರ ಸರಾಸರಿ ಮಳೆ ಕೊರತೆ ಶೇ.19ಗೆ ಇಳಿದಿದ್ದರೆ, ಸೋಮವಾರಕ್ಕೆ ಕೊರತೆ ಪ್ರಮಾಣ ಶೇ.14ರಷ್ಟಕ್ಕೆ ಬಂದಿದೆ ಎಂದು ವಿವರಿಸಿದರು.

    ಬೆಂಗಳೂರು ಸುತ್ತಮುತ್ತ ಜಿಲ್ಲೆಗಳಲ್ಲಿ ಮಳೆ ಕಡಿಮೆ ಇದೆ. ಅದೇ ರೀತಿ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಚಾಮರಾಜನಗರ ದಲ್ಲಿ ಮಳೆ ಕೊರತೆ ಇದೆ. ಮಲೆನಾಡಿನಲ್ಲಿ ಮಳೆಆಗುತ್ತಾ ಇದೆ, ಆದರೂ ವಾಡಿಕೆಗೆ ಹೋಲಿಕೆ ಮಾಡಿದರೆ ಕಡಿಮೆ ಆಗಿದೆ. ಉತ್ತರ ಒಳನಾಡಿನಲ್ಲಿ ಹೆಚ್ಚು ಮಳೆಯಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts