More

    ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಬೇರೆ ಸ್ಥಳ ಗುರುತಿಸಿ : ಪ್ರಧಾನಿ, ಮುಖ್ಯಮಂತ್ರಿಗಳಿಗೆ ಸ್ಥಳೀಯರ ಪತ್ರ

    ಚಿಕ್ಕಬಳ್ಳಾಪುರ : ತಾಲೂಕಿನ ಮಂಡಿಕಲ್ಲು ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಮಂಜೂರಾಗಿರುವ ಜಾಗದ ಬಗ್ಗೆ ತಕರಾರು ಉಂಟಾಗಿದ್ದು ಅರಣ್ಯ ಪ್ರದೇಶದ ಬದಲಿಗೆ ಬೇರೆ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಒತ್ತಾಯ ಸ್ಥಳೀಯರಿಂದ ಕೇಳಿ ಬಂದಿದೆ.

    ಗ್ರಾಮದ ಸರ್ವೇ ನಂಬರ್ 231 ಮತ್ತು 232 ರಲ್ಲಿನ 2 ಎಕರೆ ಜಮೀನನ್ನು ಮಂಡಿಕಲ್ಲು ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರದ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ. ಆದರೆ, ಇದೇ ಸರ್ವೇ ನಂಬರ್ 231 ರಲ್ಲಿ 1.32 ಎಕರೆ ಮತ್ತು 232 ರಲ್ಲಿ 5.20 ಎಕರೆ ಪ್ರದೇಶವನ್ನು ಡೀಮ್ಡ್ ಅರಣ್ಯ ಪ್ರದೇಶ ಎಂಬುದಾಗಿ ಗುರುತಿಸಲಾಗಿದೆ. ಕಟ್ಟಡ ನಿರ್ಮಾಣದಿಂದ ಪ್ರಾಕೃತಿಕ ಸಂಪತ್ತಿನ ಮೇಲೆ ಹೊಡೆತ ಬೀಳಲಿದೆ ಎಂದು ಗ್ರಾಮಸ್ಥರು ಪ್ರಧಾನಿ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರು, ಕೇಂದ್ರ ಹಸಿರು ವಲಯ ಸಬಲೀಕರಣ ಪ್ರಾಧಿಕಾರದ ಅಧ್ಯಕ್ಷರು, ಮುಖ್ಯಮಂತ್ರಿ ಮತ್ತು ರಾಜ್ಯ ಸಚಿವರು ಸೇರಿ ಹಲವರಿಗೆ ಪತ್ರವನ್ನು ಬರೆದು ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ.

    ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಪುರಾತನ ದೇವಸ್ಥಾನ, ಋಷಿಗಳು ತಪಸ್ಸು ಮಾಡಿರುವ ಗುಹೆಗಳು ಸೇರಿ ಪೌರಾಣಿಕ ಹಿನ್ನೆಲೆಯ ಸ್ಥಳಗಳಿವೆ. ಇಲ್ಲಿ ಅರಣ್ಯ ಇಲಾಖೆಯಿಂದ ಸುಮಾರು 50 ರಿಂದ 60 ವರ್ಷದಿಂದ ಬೆಳೆಸಿರುವ ಮರಗಳಿವೆ. ಶ್ರೀರಾಮದೇವರ ಕಾಡು ಎಂಬ ನಾಮಫಲಕವನ್ನು ಅರಣ್ಯ ಇಲಾಖೆಯೇ ಅಳವಡಿಸಿದೆ. ಇಂತಹ ಸ್ಥಳದಲ್ಲಿ ಮರಗಳನ್ನು ಕಡಿದು ಹಾಕಿ, ಕಟ್ಟಡ ನಿರ್ಮಿಸುವುದು ಮತ್ತು ಜನದಟ್ಟಣೆ, ಇತರೆ ಚಟುವಟಿಕೆಗೆ ಅವಕಾಶ ನೀಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಗ್ರಾಮದ ಸಮೀಪದ ಹೊಸಹಳ್ಳಿ ಸರ್ವೇ ನಂಬರ್ 39 ರಲ್ಲಿ 9.18 ಎಕರೆ ಸರ್ಕಾರಿ ಜಮೀನು ಇದೆ. ಅದು ಬರಡು ಭೂಮಿಯಾಗಿದೆ. ಇತರೆ ಗ್ರಾಮಗಳಿಗೆ ಅನುಕೂಲವಾಗುವ ಉದ್ದೇಶದಿಂದ ಪ್ರಾಥಮಿಕ ಆರೋಗ್ಯವನ್ನು ಇಲ್ಲಿ ನಿರ್ಮಿಸುವುದು ಒಳಿತು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಮ.ಕೃ.ಶ್ರೀಧರ್, ಎಂ.ವಿ.ನಾಗೇಶ್, ಎಂ.ವಿಶ್ವನಾಥ, ಸುಂದರಲಕ್ಷ್ಮೀ, ಎಂ.ಎಸ್.ಪದ್ಮಾವತಮ್ಮ, ಮುನಿಶಾಮಿ, ರಾಮಾಂಜಿನಪ್ಪ, ಮುರಳಿ ಕೃಷ್ಣ ಮತ್ತಿತರರು ಒತ್ತಾಯಿಸಿದ್ದಾರೆ.

     

    ಜನಸ್ಪಂದನದಲ್ಲಿ ಒತ್ತಾಯ : ಸರ್ವೇ 231 ಮತ್ತು ಸರ್ವೇ 232 ರಲ್ಲಿನ 8.38 ಎಕರೆ ಸರ್ಕಾರಿ ಖರಾಬು ಜಮೀನಿನಲ್ಲಿ ಅರಣ್ಯ ಇಲಾಖೆಯು ಮರಗಿಡಗಳನ್ನು ಬೆಳೆಸಿದ್ದು ಶ್ರೀ ರಾಮದೇವರ ಕಾಡು ಎಂಬುದಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಮರಗಳನ್ನು ಕಳ್ಳಕಾಕರು, ದನಗಾಹಿಗಳು, ಪ್ರಭಾವಿಗಳು ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಜಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸಿ, ಉದ್ಯಾನ ನಿರ್ಮಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಹಿಂದಿನ ಜನಸ್ಪಂದನ ಸಭೆಗಳಲ್ಲಿ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಅನುಗುಣವಾಗಿ ವಲಯ ಅರಣ್ಯಾಧಿಕಾರಿಗಳು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಪತ್ರ ಬರೆದು, ಅರಣ್ಯ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಬೇಕೆಂಬುದರ ಬಗ್ಗೆ ಗಮನ ಸೆಳೆದಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲುವಿನಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಿಸುತ್ತಿರುವುದು ಶ್ಲಾಘನೀಯ. ಆದರೆ, ಡೀಮ್ಡ್ ಅರಣ್ಯ ಪ್ರದೇಶದ ಬದಲಿಗೆ ಬಂಜರು ಸರ್ಕಾರಿ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು.
    ಶ್ರೀಧರ್, ಸ್ಥಳೀಯ ನಿವಾಸಿ, ಮಂಡಿಕಲ್ಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts