ಬಳ್ಳಾರಿ: ಒನ್ ಇಂಡಿಯಾ ಒನ್ ಹೆಲ್ತ್ ಯೋಜನೆಯಡಿ 2030ರ ವೇಳೆಗೆ ದೇಶದ ಆರೋಗ್ಯ ವಲಯದಲ್ಲಿ ಮಹತ್ತರ ಬದಲಾವಣೆ ತರುವ ಉದ್ದೇಶ ಇದೆ. ಹೀಗೆ ಕೇಂದ್ರದ ಹತ್ತು ಹಲವು ಯೋಜನೆಗಳ ಜತೆ ರಾಜ್ಯ ಸರ್ಕಾರವೂ ಉತ್ತಮ ಯೋಜನೆಗಳನ್ನ ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ತಾಲೂಕು ಮಟ್ಟದ ಉಚಿತ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
100 ಹಿಂದುಳಿದ ತಾಲೂಕುಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿ 100 ಅತಿ ಹೆಚ್ಚು ಒತ್ತಡ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 25 ಬೆಡ್ ಮಾದರಿ ಆರೋಗ್ಯ ಕೇಂದ್ರಗಳಾಗಿ 2 ವರ್ಷಗಳಲ್ಲಿ 1000 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಯೋಜನೆ ಘೋಷಣೆ ಆಗಿದೆ. ಮಹಿಳೆಯರಿಗೆ 300 ಮಹಿಳಾ ಸ್ವಾಸ್ಥ್ಯ ಕೇಂದ್ರ, 438 ನಮ್ಮ ಕ್ಲಿನಿಕ್‌ಗಳು, 11 ಕೋಟಿ ರೂ. ವೆಚ್ಚದಲ್ಲಿ ಮೊಬೈಲ್ ಕ್ಲಿನಿಕ್‌ಗಳು ಹಾಗೂ 100 ಹೈಟೆಕ್ ಕ್ಲಿನಿಕ್‌ಗಳನ್ನು ಅಗತ್ಯವಾರು ರಾಜ್ಯದ ವಿವಿಧೆಡೆ ಸ್ಥಾಪಿಸುವ ಘೋಷಣೆ ಮಾಡಲಾಗಿದೆ. ಹೀಗೆ ಉತ್ತಮ ವೈದ್ಯಕೀಯ ವ್ಯವಸ್ಥೆ ಹಾಗೂ ಆರೋಗ್ಯ ಸೇವೆಗಳಿಂದ ಆರೋಗ್ಯಕರ ಸದೃಢ ಭಾರತ ನಿರ್ಮಾಣ ನಿರ್ಮಾಣಕ್ಕಾಗಿ ಹೆಜ್ಜೆ ಇಡಲಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ, ಎಪಿಎಂಸಿ ಅಧ್ಯಕ್ಷ ಉಮೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ನಿರ್ದೇಶಕಿ ಡಾ.ಇಂದುಮತಿ, ವಿಮ್ಸ್ ನಿರ್ದೇಶಕ ಡಾ.ಟಿ.ಗಂಗಧಾರಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮೋಹನ್‌ಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಇತರರು ಇದ್ದರು.