More

    ಹೋಬಳಿ ಮಟ್ಟದಲ್ಲೂ ಆರೋಗ್ಯ ಶಿಬಿರ

    ಸರಗೂರು: ಮನುಷ್ಯನಿಗೆ ಕಾಯಿಲೆ ಬಂದರೆ ಧೃತಿಗೆಡದೆ ಧೈರ್ಯದಿಂದ ರೋಗ ನಿವಾರಣೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಲಹೆ ನೀಡಿದರು.

    ಪಟ್ಟಣದ ಶಿವರಾತ್ರೀಶ್ವರ ಶಿವಾನುಭವ ಮಂಟಪದಲ್ಲಿ ಸೋಮವಾರ ಜೆಎಸ್‌ಎಸ್ ಆಸ್ಪತ್ರೆ, ಜೆಎಸ್‌ಎಸ್ ಶಿಕ್ಷಣ ಸಂಸ್ಥೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಆರೋಗ್ಯ ಉಚಿತ ತಪಾಸಣೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ರೋಗ ಬಂದಾಗ ಎಚ್ಚೆತ್ತುಕೊಂಡು ತೊಂದರೆಪಡುವ ಬದಲಿಗೆ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆಹಾರ, ವಿಹಾರವನ್ನು ಸಮ ಪ್ರಮಾಣದಲ್ಲಿ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕಾಲಕಾಲಕ್ಕೆ ಆಸ್ಪತ್ರೆಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಭಯಪಟ್ಟು ಆಸ್ಪತ್ರೆಯಿಂದ ದೂರ ಉಳಿಯುವುದು ತರವಲ್ಲ ಎಂದರು.

    13 ತಿಂಗಳು ಸತತವಾಗಿ ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಿಕೊಂಡು ಬರಲಾಗಿದೆ. ಇದರಿಂದ ಬಡ ಜನರಿಗೆ ತುಂಬಾ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲೂ ಆಯೋಜಿಸಲಾಗುವುದು ಎಂದು ತಿಳಿಸಿದರು.

    ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಜೆಎಸ್‌ಎಸ್ ಸಂಸ್ಥೆಯು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ನಿರಂತರ ಸೇವೆ ಮಾಡಿಕೊಂಡು ಬರುತ್ತಿದೆ. ಇಂತಹ ಸಂಸ್ಥೆ ದೇಶದಲ್ಲಿ ಇರುವುದರಿಂದಲೇ ಬಡ ಜನರು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಹೊಂದುವಂತಾಗಿದೆ ಎಂದು ಹೇಳಿದರು.

    ಮಹಾಸಭಾ ಅಧ್ಯಕ್ಷ ಡಿ.ಜಿ.ಶಿವರಾಜು ಮಾತನಾಡಿ, ಶಿಬಿರದಲ್ಲಿ ಸಾವಿರಾರು ಜನರು ಆರೋಗ್ಯ ತಪಾಸಣೆಗೊಳಪಟ್ಟು ಉತ್ತಮ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಜೆಎಸ್‌ಎಸ್ ಸಂಸ್ಥೆ ಕೌಶಲ ತರಬೇತಿಯನ್ನು ನೀಡಲು ಮುಂದಾಗಬೇಕು ಎಂದು ಮನವಿ ನೀಡಿದರು. ಹಂಚೀಪುರ ಪಟ್ಟದ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ದಡದಹಳ್ಳಿ ಮಠದ ಶ್ರೀ ಷಡಕ್ಷರಿ ಸ್ವಾಮೀಜಿ, ಪಡುವಲು ವಿರಕ್ತ ಮಠದ ಶ್ರೀ ಮಹದೇವ ಸ್ವಾಮೀಜಿ ಆಶೀರ್ವಚನ ನೀಡಿದರು.

    ಶಿವಕಥಾ ವಿದ್ವಾನ್ ಬದನವಾಳು ಶಿವಕುಮಾರ ಶಾಸ್ತ್ರಿ, ಸರ್ಕಾರಿ ಸಹಾಯಕ ಅಭಿಯೋಜಕ ಎಸ್.ಎಂ.ಪ್ರಸನ್ನ ಅವರನ್ನು ಸನ್ಮಾನಿಸಲಾಯಿತು. ಅಂಗವಿಕಲರಿಗೆ ಪರಿಕರಗಳನ್ನು ವಿತರಿಸಲಾಯಿತು. ಜೆಎಸ್‌ಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ.ಮಧು ಆರೋಗ್ಯ ಉಚಿತ ತಪಾಸಣಾ ಶಿಬಿರದ ವಾರ್ಷಿಕ ವರದಿ ಮಡಿಸಿದರು.

    ಸಮಾಜ ಸೇವಕಿ ಸುಧಾ ಮೃತ್ಯುಂಜಯಪ್ಪ, ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್. ಬಸವನಗೌಡಪ್ಪ, ತಹಸೀಲ್ದಾರ್ ರುಕಿಯಾ ಬೇಗಂ, ಡಿ.ಪಿ.ನಟರಾಜು, ಬಾಡಗ ಸಿದ್ದಪ್ಪ, ಹಂಚೀಪುರ ಗಣಪತಿ, ಗುರುಸ್ವಾಮಿ, ಅಂಜುಮಾನ್ ಪಾಷಾ, ಗಂಗಾಧರ್, ಮಹದೇವಸ್ವಾಮಿ, ಎಸ್.ಎಸ್.ಪ್ರಭುಸ್ವಾಮಿ, ಸಿ.ಕೆ.ಗಿರೀಶ್, ಸೀಮಾ ಮೋಹನ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts