More

    ನೌಕರರಿಗೆ ಆರೋಗ್ಯ ಭಾಗ್ಯ: ಸರ್ಕಾರಿ ಉದ್ಯೋಗಿಗಳಿಗೆ ನಗದುರಹಿತ ಚಿಕಿತ್ಸೆ, 30 ಲಕ್ಷ ಜನರಿಗೆ ಅನುಕೂಲ..

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರ ಬಹುದಿನಗಳ ಕನಸಾದ ನಗದುರಹಿತ ಆರೋಗ್ಯ ಸೇವೆ ನನಸಾಗುವ ದಿನಗಳು ಹತ್ತಿರ ಬಂದಿದ್ದು, ಇನ್ನೆರಡು ದಿನಗಳಲ್ಲಿ ಚಾಲನೆ ದೊರಕಲಿದೆ. ನಗದುರಹಿತ ಆರೋಗ್ಯ ಸೇವೆ ಯೋಜನೆಯನ್ನು ಜಾರಿಗೆ ತರುವ ಮೂಲಕ ಅವರ ಬಾಳಿನಲ್ಲಿ ಆಶಾಕಿರಣ ಮೂಡಿಸಬೇಕೆಂಬ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಯತ್ನ ಈಗ ಫಲ ನೀಡುತ್ತಿದೆ. ಆರ್ಥಿಕ ಇಲಾಖೆಯ ಸಮ್ಮತಿಯೊಂದಿಗೆ ಯೋಜನೆ ಸಿದ್ಧವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆ.6ಕ್ಕೆ ಸರ್ಕಾರದ ಆದೇಶ ಬಿಡುಗಡೆ ಮಾಡುವುದರೊಂದಿಗೆ ಯೋಜನೆ ಚಾಲನೆ ಪಡೆದುಕೊಳ್ಳಲಿದೆ.

    ಗಂಭೀರ ಕಾಯಿಲೆಗೆ ತುತ್ತಾದರೆ ಚಿಕಿತ್ಸೆಗೆ ಸಾಲ ಮಾಡುವ ಪರಿಸ್ಥಿತಿ ರಾಜ್ಯ ಸರ್ಕಾರಿ ನೌಕರರದ್ದಾಗಿತ್ತು. ಆದ್ದರಿಂದಲೇ ನಗದುರಹಿತ ಚಿಕಿತ್ಸೆಯ ಯೋಜನೆ ಬರಬೇಕೆಂದು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಹೋರಾಟ ನಡೆಸಿದ್ದರು. ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಯಲ್ಲಷ್ಟೇ ಇಂಥ ವ್ಯವಸ್ಥೆ ಇದೆ. ಹಿಂದೆಲ್ಲ ಮರು ಪಾವತಿಗಾಗಿ ವರ್ಷಗಟ್ಟಲೆ ಅಲೆದಾಡಿದರೂ ಪೂರ್ಣ ಮೊತ್ತ ಸಿಗುವ ವಿಶ್ವಾಸ ಇರಲಿಲ್ಲ. ಆದ್ದರಿಂದಲೇ ನಗದುರಹಿತ ಸೇವೆ ನೀಡುವಂತೆ ಹೋರಾಟ ನಡೆಸುತ್ತಿದ್ದರು. ಸರ್ಕಾರ 2014 ರಲ್ಲಿ ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೆ ತಂದಿತು. ಅದರ ಮುಂದುವರಿದ ಭಾಗವಾಗಿ ಈಗ ರಾಜ್ಯ ಸರ್ಕಾರಿ ನೌಕರರ ಆರೋಗ್ಯ ಯೋಜನೆ ಜಾರಿಗೆ ಬರುತ್ತಿದೆ.

    ಯೋಜನೆ ಹೇಗೆ ಜಾರಿ: ಸರ್ಕಾರಿ ನೌಕರರ ಮಾಹಿತಿ ಸಂಗ್ರಹ ಈಗಾಗಲೇ ಮುಗಿದಿದೆ. ಇದಕ್ಕಾಗಿ ಪ್ರತ್ಯೇಕ ಕೋಶವನ್ನು ಸ್ಥಾಪಿಸಲಾಗಿದೆ. ಅದಕ್ಕೆ ಕೆಎಎಸ್ ದರ್ಜೆಯ ಅಧಿಕಾರಿಯನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಅವರೊಂದಿಗೆ ವೈದ್ಯಾಧಿಕಾರಿಗಳು ಇದ್ದಾರೆ. ಸಂಪೂರ್ಣ ಜವಾಬ್ದಾರಿ ಈ ಕೋಶದ್ದೇ ಆಗಿರುತ್ತದೆ.

    • ಸೆ.6ರಂದು ಯೋಜನೆಗೆ ಮುಖ್ಯಮಂತ್ರಿ ಚಾಲನೆ
    • ವಾರ್ಷಿಕ 1250 ಕೋಟಿ ರೂ. ವೆಚ್ಚ ಅಂದಾಜು
    • 1000ಕ್ಕೂ ಅಧಿಕ ರೋಗಗಳಿಗೆ ಅನ್ವಯ
    • ಹೊರರೋಗಿಗಳಿಗೂ ಉಚಿತ ಚಿಕಿತ್ಸೆ
    • ಪ್ರತ್ಯೇಕ ಸಾಫ್ಟ್​ವೇರ್ ಅಭಿವೃದ್ಧಿ
    • ಗಡಿ ಭಾಗದ ಹೊರ ರಾಜ್ಯಗಳ ಆಸ್ಪತ್ರೆ ಸೇರಿ 500ಕ್ಕೂ ಹೆಚ್ಚು ಆಸ್ಪತ್ರೆಗಳ ಜತೆ ಒಪ್ಪಂದ

    500ಕ್ಕೂ ಹೆಚ್ಚು ಆಸ್ಪತ್ರೆಗಳು: ರಾಜ್ಯದಲ್ಲಿ ಆಯುಷ್ಮಾನ್ ಭಾರತ ಕರ್ನಾಟಕ ಹಾಗೂ ಸಿಜಿಎಸ್​ಎಚ್​ನಲ್ಲಿ ನೋಂದಾಯಿತ 500 ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಸರ್ಕಾರಿ ನೌಕರರ ಆರೋಗ್ಯ ಯೋಜನೆಯ ಸೌಲಭ್ಯ ನೀಡಲು ಗುರುತಿಸಲಾಗಿದೆ. ಅಲ್ಲದೇ ಹೊರ ರಾಜ್ಯಗಳ ಅಂದರೆ, ರಾಜ್ಯದ ಗಡಿಗೆ ಹೊಂದಿಕೊಂಡಿರುವ ನಗರ ಮತ್ತು ಪಟ್ಟಣಗಳ ಆಸ್ಪತ್ರೆಗಳನ್ನು ಸಹ ಈ ಯೋಜನೆಯಲ್ಲಿ ನೋಂದಣಿ ಮಾಡಲಾಗುತ್ತಿದೆ.

    ಎಷ್ಟು ಕಾಯಿಲೆಗೆ ಚಿಕಿತ್ಸೆ?: ಹಿಂದೆ ಹಲ್ಲು, ಕಣ್ಣು, ಹೊರರೋಗಿಗಳ ಚಿಕಿತ್ಸೆಗೆ ಮರು ಪಾವತಿ ಇರಲಿಲ್ಲ. ಈಗ ಎಲ್ಲ ರೀತಿಯ ಕಾಯಿಲೆಗಳಿಗೂ ಚಿಕಿತ್ಸೆ ಸಿಗಲಿದೆ. ಮಕ್ಕಳಿಗೆ ಕಾಡುವ ರೋಗಗಳಿಗೂ ಚಿಕಿತ್ಸೆಗೆ ಅವಕಾಶ ಇದೆ. ಅಂದಾಜು 1,000 ಬಗೆಯ ರೋಗಗಳ ಚಿಕಿತ್ಸೆಯನ್ನು ಇದು ಒಳಗೊಳ್ಳಲಿದೆ. ನೌಕರರ ಮಾಹಿತಿ ಇರುವ ಎಚ್​ಆರ್​ಎಂಎಸ್ ಅನ್ನು ಸುವರ್ಣ ಆರೋಗ್ಯ ಟ್ರಸ್ಟ್ ಜತೆಗೆ ಲಿಂಕ್ ಮಾಡಲಾಗುತ್ತದೆ. ಅದೇ ಮಾಹಿತಿ ಆಧಾರದಲ್ಲಿ ಸ್ಮಾರ್ಟ್ ಕಾರ್ಡ್​ಗಳು ಸಿದ್ಧವಾಗುತ್ತಿವೆ. ಜಿಲ್ಲಾಮಟ್ಟದಲ್ಲಿಯೇ ಅವುಗಳ ವಿತರಣೆ ಕಾರ್ಯ ಶೀಘ್ರವೇ ಆರಂಭವಾಗಲಿದೆ.

    ಸಾಫ್ಟ್​ವೇರ್ ಅಭಿವೃದ್ಧಿ: ಯೋಜನೆ ಸಂಪೂರ್ಣ ಆನ್​ಲೈನ್​ನಲ್ಲಿಯೇ ನಡೆಯಲಿದೆ. ನೌಕರರಿಗೆ ಸ್ಮಾರ್ಟ್​ಕಾರ್ಡ್ ನೀಡಲಾಗುತ್ತದೆ. ಅದನ್ನು ತೋರಿಸಿದರೆ ಚಿಕಿತ್ಸೆ ಸಿಗಲಿದೆ. ಆಸ್ಪತ್ರೆಗಳ ಜತೆ ಒಪ್ಪಂದ, ಬಿಲ್ ಸಲ್ಲಿಕೆ, ಆಸ್ಪತ್ರೆಗಳಿಗೆ ಬಿಲ್ ಪಾವತಿಗಳೆಲ್ಲವೂ ಆನ್​ಲೈನ್​ನಲ್ಲಿಯೇ ನಡೆಯಲಿವೆ. ಅದಕ್ಕಾಗಿಯೇ ಪ್ರತ್ಯೇಕ ಸಾಫ್ಟ್​ವೇರ್ ಸಹ ಸಿದ್ಧವಾಗಿದೆ.

    ಸರ್ಕಾರಿ ನೌಕರರ ಮೂರು ದಶಕಗಳ ಹೋರಾಟಕ್ಕೆ ಕೊನೆಗೂ ಫಲ ಸಿಗುತ್ತಿದೆ. ನೌಕರರು ಗಂಭೀರ ಕಾಯಿಲೆಗೆ ತುತ್ತಾದರೂ ಆತಂಕಕ್ಕೆ ಒಳಗಾಗದೆ ಯಾವುದೇ ಆಸ್ಪತ್ರೆಯಲ್ಲಿ ಸುಲಭವಾಗಿ ಚಿಕಿತ್ಸೆ ಪಡೆಯಬಹುದಾಗಿದೆ. ಬೇಡಿಕೆಗೆ ಸ್ಪಂದಿಸಿದ ಸರ್ಕಾರಕ್ಕೆ ಚಿರಋಣಿಯಾಗಿರುತ್ತೇವೆ.

    | ಸಿ.ಎಸ್. ಷಡಾಕ್ಷರಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

    ಅನುಕೂಲಗಳು

    • ಯಾವುದೇ ಸಂದರ್ಭದಲ್ಲಿ ಕೈಯಲ್ಲಿ ಹಣವಿಲ್ಲದಿದ್ದರೂ ಆಸ್ಪತ್ರೆಗೆ ದಾಖಲಾಗಬಹುದು
    • ಆರೋಗ್ಯ ಸೇವೆಗಾಗಿ ಸಾಲ ಮಾಡಿಕೊಂಡು ಪಡಿಪಾಟಲು ಪಡಬೇಕಾಗಿಲ್ಲ
    • ಚಿಕಿತ್ಸೆ ಪಡೆದ ನಂತರ ಮರು ಪಾವತಿಗಾಗಿ ಕಚೇರಿಗೆ ಅಲೆದಾಡುವ ಪ್ರಮೇಯವಿಲ್ಲ
    • ಸರ್ಕಾರಿ ಆಸ್ಪತ್ರೆಗಳ ಮೇಲಿನ ಅವಲಂಬನೆ ತಪ್ಪಲಿದೆ

    ಹೊರರೋಗಿ ಚಿಕಿತ್ಸೆ: ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರು ಸೇರಿ ಒಟ್ಟಾರೆ 30 ಲಕ್ಷ ಜನರಿಗೆ ಈ ಯೋಜನೆ ಅನುಕೂಲವಾಗಲಿದೆ. ಒಳರೋಗಿ ಅಥವಾ ಹೊರ ರೋಗಿಗಳಾಗಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.

    ಸಿಬ್ಬಂದಿಯಿಂದಲೂ ದೇಣಿಗೆ ಪಾವತಿ: ನಗದುರಹಿತ ಚಿಕಿತ್ಸೆಗೆ ಸರ್ಕಾರಿ ನೌಕರರು ವಾರ್ಷಿಕ ದೇಣಿಗೆಯನ್ನು ಪಾವತಿಸಬೇಕಾಗುತ್ತದೆ. ನೌಕರರ ಮೂಲ ವೇತನದ ಶೇ.1 ರಷ್ಟು ಮೊತ್ತವನ್ನು ನಿಗದಿಯಾಗಲಿದೆ. ಅಂದಾಜು 200 ಕೋಟಿ ರೂ.ಗಳಷ್ಟಾಗುವ ಈ ಮೊತ್ತವನ್ನು ಆರ್ಥಿಕ ಇಲಾಖೆ ಕಡಿತ ಮಾಡಿಕೊಂಡು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್​ಗೆ ಪಾವತಿ ಮಾಡಲಿದೆ. ಅದರ ಮೂಲಕ ಆಸ್ಪತ್ರೆಗಳಿಗೆ ಪಾವತಿಯಾಗಲಿದೆ. ನಗದುರಹಿತ ಚಿಕಿತ್ಸೆ ನೀಡಲು ವಾರ್ಷಿಕ 1,250 ಕೋಟಿ ರೂ.ಗಳು ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ. ಇದುವರೆಗೂ ಚಿಕಿತ್ಸಾ ವೆಚ್ಚದ ಮರು ಪಾವತಿಯಲ್ಲಿ ಸರ್ಕಾರ ವಾರ್ಷಿಕ 200 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ.

    ಬರ್ತ್​​ಡೇಗೆ ಕೇಕು-ಹೂಗುಚ್ಛ ಬೇಡ, 18 ಪದಗಳೇ ಸಾಕು: ಅಭಿಮಾನಿಗಳಲ್ಲಿ ವಿಶಿಷ್ಟ ಬೇಡಿಕೆ ಇಟ್ಟ ಉಪೇಂದ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts