More

    ಭ್ರೂಣ ಹತ್ಯೆ ತಡೆಗೆ ಆರೋಗ್ಯ ಇಲಾಖೆ ಕಠಿಣ ಕ್ರಮ

    ಬೆಂಗಳೂರು: ಭ್ರೂಣ ಹತ್ಯೆ ತಡೆಗೆ ಕಠಿಣ ನಿಯಮಗಳನ್ನು ರೂಪಿಸಿರುವ ಆರೋಗ್ಯ ಇಲಾಖೆ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೊಠಡಿಯೊಳಗೆ ಗರ್ಭಿಣಿಯರನ್ನು ಹೊರತುಪಡಿಸಿ ಸಂಬಂಧಿಕರಿಗೆ ಹಾಗೂ ಹೆಚ್ಚುವರಿ ಮಾನಿಟರ್ ಅಳವಡಿಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದೆ.

    ಗರ್ಭ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆಗೆ (ಪಿಸಿಪಿಎನ್‌ಡಿಟಿ) ಸಂಬಂಧಿಸಿದ ಕಾರ್ಯಾಗಾರದಲ್ಲಿ ರೇಡಿಯಾಲಜಿಸ್ಟ್, ಸೋನಾಲಜಿಸ್ಟ್ ಹಾಗೂ ಸ್ತ್ರೀರೋಗ ತಜ್ಞರು ಈ ಬಗ್ಗೆ ಚರ್ಚಿಸಿದ್ದರು. ಸ್ಕ್ಯಾನಿಂಗ್ ಕೊಠಡಿಯೊಳಗೆ ಗರ್ಭಿಣಿಯರ ಜತೆಗೆ ಬರುವ ಸಂಬಂಧಿಗಳು ಅಲ್ಟ್ರಾಸೌಂಡ್ ಕಾರ್ಯವಿಧಾನಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಈ ಚಿತ್ರಗಳನ್ನು ಭ್ರೂಣ ಲಿಂಗ ಪತ್ತೆಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.

    ಗರ್ಭಿಣಿಯರಿಗೆ ಅಲ್ಟ್ರಾಸೌಂಡ್ ಕಾರ್ಯ ವಿಧಾನ ವೀಕ್ಷಿಸಲು ಹೆಚ್ಚುವರಿ ಮಾನಿಟರ್ ಇರಿಸಲಾಗುತ್ತಿತ್ತು. ಈ ರೀತಿ ಮಾನಿಟರ್ ಇರಿಸುವುದು ಪಿಸಿಪಿಎನ್‌ಡಿಟಿ ಕಾಯ್ದೆಯ ಉಲ್ಲಂಘನೆಯಾಗಿದೆ. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಬೇರೆ ಯಾರಿಗೂ ಅನುಮತಿಯಿಲ್ಲವೆಂಬ ಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಆಸ್ಪತ್ರೆಗಳು ಹಾಗೂ ಸ್ಕ್ಯಾನಿಂಗ್ ಕೇಂದ್ರಗಳಿಗೆ ಸೂಚಿಸಲಾಗಿದೆ. ಕಾಯ್ದೆಯಡಿ ನೋಂದಾಯಿಸಿರುವ ಎಲ್ಲ ಕೇಂದ್ರಗಳು, ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳು ಹೆಚ್ಚುವರಿ ಮಾನಿಟರ್ ಇರಿಸಿರುವುದು ಕಂಡುಬಂದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

    15 ವರ್ಷದಲ್ಲಿ 122 ಕೇಸ್!
    ರಾಜ್ಯದಲ್ಲಿ ಕಳೆದ 15 ವರ್ಷಗಳಲ್ಲಿ ಸಾವಿರಾರು ಭೂಣ ಲಿಂಗ ಪತ್ತೆ ಕಾರ್ಯಗಳು ನಡೆದಿವೆ. ಅವುಗಳಲ್ಲಿ ವರದಿಯಾಗಿರುವ ನೂರಾರು ಪ್ರಕರಣಗಳಲ್ಲಿ ಕೇವಲ 122 ಪ್ರಕರಣಗಳು ನ್ಯಾಯಾಲಯದ ಮೇಟ್ಟಿಲೇರಿವೆ. ಉಳಿದಂತೆ ಅಧಿಕಾರಿಗಳ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts