More

    ನಿಯಮಿತವಾಗಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆಗೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.

    ಗದಗ: ಜಿಲ್ಲೆಯಲ್ಲಿನ ಶಾಲೆಗಳಲ್ಲಿ  ನಿಯಮಿತವಾಗಿ  ಮಕ್ಕಳ  ಆರೋಗ್ಯ ತಪಾಸಣೆಗೆ ಕ್ರಮ ವಹಿಸಬೇಕು. ಅಂದಾಗ ಮಾತ್ರ ಮಕ್ಕಳಲ್ಲಿ ಕಂಡು ಬರುವ ಆರೋಗ್ಯ ಸಮಸ್ಯೆಯನ್ನು  ಶೀಘ್ರವೇ ಗುಣಪಡಿಸಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.

    ಜಿಲ್ಲಾದಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ ಸಮಿತಿ ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ ಪ್ರಗತಿ ಪರಿಶೀಲನಾ ಸಭೆಯ  ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

    ಶಾಲಾ ಶಿಕ್ಷಕರು ಹಾಗೂ ಮಕ್ಕಳಲ್ಲಿ ಕೈ ತೊಳೆದುಕೊಳ್ಳುವ ಹಾಗೂ ವೈಯಕ್ತಿಕ  ಸ್ವಚ್ಛತೆ ಕಾಪಾಡುವ ಕುರಿತು ತಿಳುವಳಿಕೆ ನೀಡುವ ಕೆಲಸವಾಗಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ 2 ರಿಂದ 5 ವರ್ಷದೊಳಗಿನ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಲಸಿಕೆ ಹಾಕಿಸಲು ಕ್ರಮ ವಹಿಸಬೇಕೆಂದು. ಯಾವೊಂದು ಮಗುವೂ ಲಸಿಕೆಯಿಂದ ವಂಚಿತರಾಗದಂತೆ ಕ್ರಮ ವಹಿಸಬೇಕು. ಕೀಟಜನ್ಯ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ ರೋಗಗಳು ಬಾರದಂತೆ  ಮುಂಜಾಗ್ರತಾ  ಕ್ರಮ ವಹಿಸುವಂತೆ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಸಾರ್ವಜನಿಕರಲ್ಲಿ  ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು. ಒಂದು ವೇಳೆ ಶಾಲೆಗೆ ನಿಯಮಿತವಾಗಿ ಹಾಜರಾಗದೇ ಪದೇ ಪದೇ ಗೈರು ಇರುವ ಮಕ್ಕಳ ವಿವರ ಪಡೆದು ಅಂತಹ ಮಕ್ಕಳ ಆರೋಗ್ಯದ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಲು ಮುಂದಾಗಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

    ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ವಹಿಸಬೇಕು. ಆರೋಗ್ಯಕರ ವಾತಾವರಣ ನಿರ್ಮಾಣವಾಗಬೇಕು. ಚಿಕಿತ್ಸೆ ಬಯಸಿ ಆಗಮಿಸುವ ರೋಗಿಗಳಿಗೆ ಸಹಾನುಭೂತಿಯಿಂದ ಆರೋಗ್ಯ ಇಲಾಖೆಯ ವೈದ್ಯರು ಸಿಬ್ಬಂದಿಗಳು ನೋಡಿಕೊಳ್ಳಬೇಕು. ಜೊತೆಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದರು. ಆಸ್ಪತ್ರೆಯ ಬಯೋಮೆಡಿಕಲ್ ತ್ಯಾಜ್ಯ ಕುರಿತಂತೆ ಮಾತನಾಡಿದ ಜಿಲ್ಲಾಧಿಕಾರಿಗಳು ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆ ನಿಯಮಾನುಸಾರ ಕೈಗೊಳ್ಳಬೇಕು. ಬಯೋಮೆಡಿಕಲ್ ತ್ಯಾಜ್ಯ ಸಮರ್ಪಕ ನಿರ್ವಹಣೆಯ ಕಾರ್ಯ ಎಲ್ಲ ಆಸ್ಪತ್ರೆಗಳಲ್ಲಿಯೂ ಸರಿಯಾಗಿ ಆಗಬೇಕು. ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ನಿಯಮಿತವಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶನ ನೀಡಿದರು.  

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ನೀಲಗುಂದ ಅವರು ಮಾತನಾಡಿ 2023ರ   ಎಪ್ರಿಲ್‍ದಿಂದ ಅಕ್ಟೋಬರ್ 2023 ರವರೆಗೆ  12249  ಮಕ್ಕಳಿಗೆ  ರುಬೆಲ್ಲಾ / ದಡಾರ ಲಸಿಕೆ ಹಾಕಲಾಗಿದೆ. ಅಕ್ಟೋಬರ್ ಮಾಹೆಯಲ್ಲಿ 427 ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದೆ.  
    ಜಿಲ್ಲೆಯಲ್ಲಿ ಅಕ್ಟೋಬರ್ 2023 ರವರೆಗೆ 3 ಮಲೇರಿಯಾ ಪ್ರಕರಣಗಳು, 109 ಡೆಂಗ್ಯೂ ಪ್ರಕರಣಗಳು, 17 ಚಿಕುನ್ ಗುನ್ಯಾ ಪ್ರಕರಣಗಳು ಖಚಿತಪಟ್ಟಿವೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೀಟಜನ್ಯ ರೋಗಗಳು ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಮನೆ ಮನೆಗೆ ಹೋಗಿ ನೀರಿನ ಸಂಗ್ರಹಣಾ ಪರಿಕರಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಹಾಗೂ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕೆಂದು ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಗಿದೆ. ನಿಯಮಿತವಾಗಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

    ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ, ಐ.ಸಿ.ಡಿ.ಎಸ್, ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನೆ, ಐಡಿಎಸ್ ಪಿ, ಅಂಧತ್ವ ದೃಷ್ಟಿಹೀನತೆಯ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

    ಸಭೆಯಲ್ಲಿ ಡಬ್ಲುಎಚ್‍ಓದ ಸಲಹೆಗಾರರಾದ ಡಾ.ಮುಕುಂದ ಗಲಗಲಿ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಮೀನಾಕ್ಷಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಠೋಡ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿ.ಸಿ.ಕರಿಗೌಡ್ರ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ವೈ. ರಡ್ಡೇರ, ತಾಲೂಕಾ ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು  ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts