More

    ಆರೋಗ್ಯ ಕೇಂದ್ರಗಳಿಗೆ ವೈದ್ಯರು, ನರ್ಸ್ ನಿಯೋಜಿಸಿ

    ಬೆಳಗಾವಿ: ಜಗತ್ತಿನ ತುಂಬೆಲ್ಲ ಕರೊನಾ ವೈರಸ್ ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣದಿಂದಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ವೈದ್ಯರು, ನರ್ಸ್‌ಗಳನ್ನು ನಿಯೋಜಿಸಬೇಕು ಎಂದು ಜಿಪಂ ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸ್ಥಾಯಿ ಸಮಿತಿ ಸದಸ್ಯರು ಸೂಚಿಸಿದ್ದಾರೆ.

    ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸ್ಥಾಯಿ ಸಮಿತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ನರ್ಸ್‌ಗಳು ಇಲ್ಲ. ಇಂತಹ ಸಂದರ್ಭದಲ್ಲಿ ಕರೊನಾ ವೈರಸ್ ಹೇಗೆ ನಿಯಂತ್ರಣ ಮಾಡುತ್ತೀರಿ? ಈ ವೈರಸ್ ಅಪಾಯಕಾರಿ ಎಂದು ಜನರಲ್ಲಿ ಭಯ ಉಂಟು ಮಾಡುತ್ತಿದ್ದಾರೆ. ವೈದ್ಯಾಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದರು.

    ವೈರಸ್ ಪತ್ತೆ ಆಗಿಲ್ಲ: ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ವಿ. ಮುನ್ಯಾಳ, ಕರೊನಾ ವೈರಸ್ ರೋಗ ಎದುರಿಸುತ್ತಿರುವ ಚೀನಾ ಸೇರಿ ವಿವಿಧ ದೇಶಗಳಿಂದ ಬೆಳಗಾವಿ ಜಿಲ್ಲೆಗೆ 19 ಜನರು ಆಗಮಿಸಿದ್ದಾರೆ. ಇವರನ್ನು ಆರಂಭದ ದಿನದಿಂದ ಇಲ್ಲಿಯವರೆಗೆ ತಪಾಸಣೆ ನಡೆಸಲಾಗುತ್ತಿದ್ದು, ಯಾರಲ್ಲಿಯೂ ವೈರಸ್ ಪತ್ತೆ ಆಗಿಲ್ಲ. ವಿದೇಶ ಮತ್ತು ವಿವಿಧ ರಾಜ್ಯಗಳಿಂದ ವಿಮಾನದ ಮೂಲಕ ಜಿಲ್ಲೆಗೆ ಆಗಮಿಸುತ್ತಿರುವವರ ಆರೋಗ್ಯ ತಪಾಸಣೆಗಾಗಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ದಿನದ 24 ಗಂಟೆಗಳ ಕಾರ್ಯನಿರ್ವಹಣೆ ವಿಶೇಷ ವೈದ್ಯರ ತಂಡ ನಿಯೋಜಿಸಲಾಗಿದೆ. ಸಾರ್ವಜನಿಕರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಸಂಪೂರ್ಣವಾಗಿ ಬೇಯಿಸದಿರುವ ಮಾಂಸಾಹಾರ, ಹೋಟೆಲ್ ತಿಂಡಿ, ಎಣ್ಣೆ ಪದಾರ್ಥಗಳಿಂದ ದೂರ ಉಳಿಯುವುದು ಒಳ್ಳೆಯದು ಎಂದರು. ಸಭೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರಾದ ಅಜಿತ ದೇಸಾಯಿ, ಮಾಧುರಿ ಹೆಗಡೆ, ಗುರುನಾಥ ಗಂಗಲ, ಗುರಪ್ಪ ದಾಶ್ಯಾಳ ಇತರರು ಇದ್ದರು.

    ಮೀನುಗಾರಿಕೆ ಇಲಾಖೆಯಲ್ಲಿ ಮೀಸಲಿಟ್ಟಿರುವ ಅನುದಾನ, ಫಲಾನುಭವಿಗಳ ಆಯ್ಕೆ ಹಾಗೂ ಮೀನು ಸಾಕಣೆಗಾಗಿ ಕೆರೆಗಳ ಟೆಂಡರ್ ಕರೆದಿರುವ ಕುರಿತು ಸಮಗ್ರ ಮಾಹಿತಿ ಸಲ್ಲಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು.
    | ಪರಶುರಾಮ ದುಡಗುಂಟಿ ಜಿಪಂ ಮುಖ್ಯ ಲೆಕ್ಕಾಧಿಕಾರಿ

    ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜನರು ಮುಂಜಾಗ್ರತಾ ಕ್ರಮವಾಗಿ ಮುಖಕ್ಕೆ ಮಾಸ್ಕ್ ಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಆದರೆ, ಕೆಲವರು ಮಾಸ್ಕ್‌ಗಳನ್ನು ಹಾಕಿಕೊಂಡಿರುವವರೆಲ್ಲ ಕರೊನಾ ವೈರಸ್ ಬಂದವರು ಎಂದು ತಪ್ಪಾಗಿ ಭಾವಿಸುತ್ತಿದ್ದಾರೆ. ಈ ಬಗ್ಗೆ ವೈದ್ಯಾಧಿಕಾರಗಳು ಜಾಗೃತಿ ಕೈಗೊಳ್ಳಬೇಕು.
    | ಆಶಾ ಐಹೊಳೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts