More

    ಪಾಲಿಕೆ ಮಳಿಗೆಗಳ ಬಾಡಿಗೆ ಇ-ಹರಾಜು

    ಸಂತೋಷ ವೈದ್ಯ ಹುಬ್ಬಳ್ಳಿ

    ಹು-ಧಾ ಮಹಾನಗರ ಪಾಲಿಕೆ ತನ್ನ ಒಡೆತನದ ವಾಣಿಜ್ಯ ಮಳಿಗೆಗಳನ್ನು ಇ-ಹರಾಜು ಮೂಲಕ ಹಂಚಿಕೆ ಮಾಡಲು ಮುಂದಾಗಿದೆ.

    ಪಾಲಿಕೆ ಒಡೆತನದ ಎಲ್ಲ ವಾಣಿಜ್ಯ ಮಳಿಗೆಗಳ ಲೀಸ್ ಕಮ್ ಬಾಡಿಗೆ ಅವಧಿ ಬಹಳ ವರ್ಷಗಳ ಹಿಂದೆಯೇ ಮುಗಿದಿದೆ. ಆದರೂ, ಪ್ರತಿ 3 ವರ್ಷಕ್ಕೊಮ್ಮೆ ಬಾಡಿಗೆ ಮೊತ್ತವನ್ನು ಹೆಚ್ಚಿಸಿಕೊಂಡು ಮುಂದುವರಿಸಿಕೊಂಡು ಬರಲಾಗಿದೆ. ಈಗ ಬಹಿರಂಗ ಇ-ಹರಾಜು ಮೂಲಕ ಹೊಸ ಬಾಡಿಗೆ ದರ ಹಾಗೂ ಬಾಡಿಗೆದಾರರು ನಿರ್ಧಾರವಾಗಲಿದ್ದಾರೆ.

    ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್​ಗೆ ನಡೆದ ಚುನಾವಣೆಯ ಮಾದರಿ ನೀತಿ ಸಂಹಿತೆ ನ. 13ರಂದು ಕೊನೆಗೊಂಡ ಹಿನ್ನಲೆಯಲ್ಲಿ ಪಾಲಿಕೆ ತಕ್ಷಣ ಇ-ಹರಾಜು ಪ್ರಕ್ರಿಯೆಗೆ ಸಿದ್ಧತೆ ನಡೆಸಿದೆ. ಪಾಲಿಕೆಗೆ ಇ-ಹರಾಜು ಪ್ರಕ್ರಿಯೆ ಹೊಸದು. ಇದು ಇ-ಟೆಂಡರ್​ಗಿಂತ ಭಿನ್ನವಾದುದು. ಹಾಗಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದೆ.

    ನೆಲ ಬಾಡಿಗೆ, ಉಪ ನೋಂದಣಾಧಿಕಾರಿ ಕಚೇರಿಯ ಮಾರುಕಟ್ಟೆ ಮಾರ್ಗಸೂಚಿ ದರ, ಕಟ್ಟಡದ ಸವಕಳಿ ಸೇರಿ ಮೂಲ ಬೆಲೆ ನಿರ್ಧಾರವಾಗಲಿದೆ. ರಸ್ತೆಗೆ ಮುಖ ಮಾಡಿರುವ, ರಸ್ತೆಯ ಹಿಂದಿರುವ, ನೆಲ ಮಹಡಿ, ಮೊದಲ ಮಹಡಿ, 2ನೇ ಮಹಡಿ, ಮುಖ್ಯ ಮಾರುಕಟ್ಟೆ ಸ್ಥಳ, ಒಳ ರಸ್ತೆಗಳಲ್ಲಿರುವ ಮಳಿಗೆಗಳು, ಹೀಗೆ ಪ್ರತಿ ಮಳಿಗೆಗಳ ಬಾಡಿಗೆ ದರ ಭಿನ್ನವಾಗಿರಲಿದೆ.

    ಅವಳಿ ನಗರದಲ್ಲಿ ಪಾಲಿಕೆ ಒಡೆತನದ ಸುಮಾರು 2600 ವಾಣಿಜ್ಯ ಮಳಿಗೆಗಳಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿ ನವೀಕರಣಗೊಳ್ಳುವ ಜನತಾ ಬಜಾರ್ ಮಾರುಕಟ್ಟೆ ಹಾಗೂ ಹಳೇ ಹುಬ್ಬಳ್ಳಿ ಮಾರುಕಟ್ಟೆ ಪ್ರದೇಶದ ಮಳಿಗೆಗಳು ಇ-ಹರಾಜು ಪ್ರಕ್ರಿಯೆಗೆ ಒಳಪಡುತ್ತಿಲ್ಲ.

    ಎಲ್ಲ ಮಳಿಗೆಗಳು ಒಮ್ಮೆಗೇ ಇ-ಹರಾಜು ಪ್ರಕ್ರಿಯೆಗೆ ಒಳಪಡುತ್ತಿಲ್ಲ. ಹಂತ ಹಂತವಾಗಿ ನಡೆಸಲಿದೆ. ಪತ್ರಿಕೆಯಲ್ಲಿ ಜಾಹೀರಾತು ನೀಡಿ ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಕೋರಲಾಗುತ್ತದೆ. ಪ್ರತಿ ಮಳಿಗೆಯ ಮೂಲ ಬೆಲೆ ನಿಗದಿ ಪಡಿಸಲಾಗಿರುತ್ತದೆ. ಆಸಕ್ತರು ತಾವು ಇಚ್ಛಿಸುವ ಬಾಡಿಗೆ ಮೊತ್ತವನ್ನು ದಾಖಲಿಸಬಹುದಾಗಿರುತ್ತದೆ.

    ಹಾಲಿ ಮಳಿಗೆದಾರರಿಗೂ ಅವಕಾಶವಿದೆ: ಹರಾಜು ಮೂಲಕ ಪಾಲಿಕೆ ತನ್ನ ಒಡೆತನದ ಎಲ್ಲ ಮಳಿಗೆಗಳ ಪರಿಷ್ಕೃತ ಬಾಡಿಗೆ ನಿಗದಿ ಪಡಿಸಲು ಮುಂದಾಗಿರುವುದು ಹಾಲಿ ಮಳಿಗೆದಾರರ ಆತಂಕಕ್ಕೆ ಕಾರಣವಾಗಿದೆ. 20-30 ವರ್ಷಗಳಿಂದ ಒಂದೇ ಕಡೆ ನೆಲೆ ನಿಂತು ವ್ಯಾಪಾರ-ವಹಿವಾಟು ನಡೆಸಿಕೊಂಡು ಬಂದಿರುವವರಿಗೆ ಈಗಿರುವ ಮಳಿಗೆ ಕೈ ತಪ್ಪುವ ಸಾಧ್ಯತೆ ಇರುತ್ತದೆ.

    ಹಾಲಿ ಮಳಿಗೆದಾರರ ಅನುಕೂಲಕ್ಕಾಗಿ ಪಾಲಿಕೆ ಒಂದು ಯೋಜನೆ ರೂಪಿಸಿದೆ. ಯಾರೂ ಹರಾಜಿನಲ್ಲಿ ಗರಿಷ್ಠ ಬಾಡಿಗೆಗೆ ಮಳಿಗೆಯನ್ನು ಪಡೆದಿರುತ್ತಾರೋ ಅವರಿಗಿಂತ ಶೇ. 5 ರಷ್ಟು ಹೆಚ್ಚಿನ ಬಾಡಿಗೆ ನೀಡಲು ಒಪ್ಪಿದರೆ ಹಾಲಿ ಮಳಿಗೆದಾರರಿಗೆ ನೀಡಲಾಗುತ್ತದೆ. ಅಂಥವರು ಹರಾಜು ಪ್ರಕ್ರಿಯೆಗಿಂತ 1 ವಾರ ಮುಂಚಿತವಾಗಿ ಪಾಲಿಕೆ ಆಯುಕ್ತರಿಗೆ ಲಿಖಿತವಾಗಿ ಮನವಿ ಮಾಡಿಕೊಳ್ಳಬೇಕು.

    ನಗರ ಸ್ಥಳೀಯ ಸಂಸ್ಥೆಗಳು ವಾಣಿಜ್ಯ ಮಳಿಗೆಗಳನ್ನು 12 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಲೀಸ್ ನೀಡಬಾರದು ಎಂಬ ನಿಯಮವಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 1974ರಿಂದ ಲೀಸ್ ಕಮ್ ಬಾಡಿಗೆ ಅವಧಿಯನ್ನು ಮುಂದುವರಿಸಿಕೊಂಡು ಬರಲಾಗಿದೆ. ಕೆಲವರು ಸಬ್ ಲೀಸ್ ನೀಡಿ ದುಪ್ಪಟ್ಟು ಬಾಡಿಗೆಯನ್ನು ಪಡೆಯುತ್ತಿದ್ದಾರೆ. ಇದನ್ನೆಲ್ಲ ನಿಯಂತ್ರಿಸಲು ಹಾಗೂ ಆದಾಯ ಹೆಚ್ಚಿಸಿಕೊಳ್ಳಲು ಎಲ್ಲ ವಾಣಿಜ್ಯ ಮಳಿಗೆಗಳ ಬಾಡಿಗೆಯನ್ನು ಇ-ಹರಾಜು ಮೂಲಕ ನಿರ್ಧರಿಸಲು ಪಾಲಿಕೆ ಮುಂದಾಗಿದೆ.

    ಕಳೆದ 20 ತಿಂಗಳಿಂದ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲ. ಪಾಲಿಕೆ ಆಡಳಿತಾಧಿಕಾರಿಯಾಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 5ರಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಎಲ್ಲ ಮಳಿಗೆಗಳ ಹರಾಜು ಪ್ರಕ್ರಿಯೆ ಜರುಗಿಸಲು ತೀರ್ವನಿಸಲಾಗಿದೆ. ಇದಕ್ಕೆ ಸರ್ಕಾರದ ಅನುಮೋದನೆ ಪಡೆಯಲಾಗಿದೆ.

    ಪಾಲಿಕೆ ಒಡೆತನದ ವಾಣಿಜ್ಯ ಮಳಿಗೆಗಳಿಂದ ಸದ್ಯ ವಾರ್ಷಿಕವಾಗಿ 3.6 ಕೋಟಿ ರೂ. ಬಾಡಿಗೆ ಸಂದಾಯವಾಗುತ್ತಿದೆ. ಇ-ಹರಾಜು ಪ್ರಕ್ರಿಯೆಯಲ್ಲಿ ನಿಗದಿ ಪಡಿಸಿರುವ ಮೂಲ ಬೆಲೆಯನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ 9ರಿಂದ 10 ಕೋಟಿ ರೂ. ಬಾಡಿಗೆ ಬರುತ್ತದೆ. ಸದ್ಯದಲ್ಲೇ ಇ-ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸುತ್ತೇವೆ.

    | ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts