More

    ಪಾಲಿಕೆಯಿಂದ ಕಡತಯಜ್ಞ ಅಭಿಯಾನ

    ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡುವುದಕ್ಕಾಗಿ ‘ಕಡತ ಯಜ್ಞ’ ಅಭಿಯಾನ ಆರಂಭಿಸಲಾಗುತ್ತಿದೆ.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಇದಕ್ಕಾಗಿ ಮೇಯರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಉಪ ಮೇಯರ್, ಪ್ರತಿಪಕ್ಷ ನಾಯಕರು ಸಮೀತಿಯಲ್ಲಿ ಇರುತ್ತಾರೆ. ನಾನು ಉಸ್ತುವಾರಿ ನೋಡಿಕೊಳ್ಳುತ್ತೇನೆ. ಸಕಾಲ ಸೇವೆಯಂತೆ ಕಡತಗಳ ವಿಲೇವಾರಿಗೆ ಸಮಯ ನಿಗದಿಪಡಿಸಲಾಗಿದೆ ಎಂದರು.

    ಅಧಿಕಾರಿ ಅಥವಾ ಸಿಬ್ಬಂದಿಯ ನಿರ್ಲಕ್ಷತನದಿಂದಾಗಿ ಕಡತಗಳು ಬಹಳ ದಿನಗಳಿಂದ ಬಾಕಿ ಉಳಿದಿದ್ದರೆ ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಹುಬ್ಬಳ್ಳಿ-ಧಾರವಾಡದ ರಸ್ತೆ ಗುಂಡಿ ಮುಚ್ಚುವ ಕೆಲಸಕ್ಕೆ ಎರಡ್ಮೂರು ದಿನಗಳಲ್ಲಿ ಟೆಂಡರ್ ಕರೆಯಲಾಗುವುದು. ಅವಳಿ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿರಿಸಲು ಆದ್ಯತೆ ನೀಡಲಾಗುವುದು. ಪ್ರತಿ ವಲಯದ ಎಲ್ಲ ವಾರ್ಡ್​ಗಳಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಪಾಲಿಕೆಯಿಂದ ಸ್ವಚ್ಛಗೊಳಿಸಿ, ಅದರ ವೆಚ್ಚವನ್ನು ಮಾಲೀಕರ ತೆರಿಗೆ ಹಣಕ್ಕೆ ಸೇರಿಸಲಾಗುವುದು ಎಂದರು.

    ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿನ ಕಸದ ಗುಡ್ಡ ಕರಗಿಸಲು ಟೆಂಡರ್ ಕರೆಯಲಾಗಿದ್ದು, ಆ. 17ರಂದು ಟೆಂಡರ್ ತೆರೆಯಲಾಗುವುದು. ಹುಬ್ಬಳ್ಳಿ ಕಾರವಾರ ರಸ್ತೆಯಲ್ಲಿನ ಕಸದ ಗುಡ್ಡವನ್ನು 30 ದಿನಗಳಲ್ಲಿ ಹಾಗೂ ಧಾರವಾಡ ಹೊಸ ಯಲ್ಲಾಪುರದಲ್ಲಿನ ಕಸದ ಗುಡ್ಡವನ್ನು 20 ದಿನಗಳಲ್ಲಿ ಕರಗಿಸಲಾಗುವುದು ಎಂದು ತಿಳಿಸಿದರು.

    ಪಾಲಿಕೆ ವ್ಯಾಪ್ತಿಯಲ್ಲಿ 3.23 ಲಕ್ಷ ಆಸ್ತಿ ಇವೆ. ಇವುಗಳಲ್ಲಿ 2.13 ಲಕ್ಷ ಆಸ್ತಿ ನೋಂದಣಿಯಾಗಿವೆ. ಎಲ್ಲ ವಲಯ ವ್ಯಾಪ್ತಿಯಲ್ಲಿ ಪಾಲಿಕೆ ಒಡೆತನದ ಆಸ್ತಿ ಸರ್ವೆ ಮಾಡಿಸಿ, ಫಿನಿಶಿಂಗ್ ಹಾಗೂ ನಾಮಫಲಕ ಹಾಕಲಾಗುವುದು ಎಂದರು.

    ಗುತ್ತಿಗೆದಾರರಿಗೆ 20 ಕೋಟಿ ರೂ. ಬಿಲ್ ಪಾವತಿಸುವುದು ಬಾಕಿ ಇದೆ. ಹುಬ್ಬಳ್ಳಿಯಲ್ಲಿ ಸಾಮಾನ್ಯ ಸಭೆ ನಡೆಸುವುದಕ್ಕಾಗಿ 35 ಕೋಟಿ ರೂ. ವೆಚ್ಚದಲ್ಲಿ ನೂತನ ಸಭಾಭವನ ಕಟ್ಟಡ ನಿರ್ವಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಿರುವ ಸಭಾಭವನ್ನು 50 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾಗುವುದು ಎಂದು ತಿಳಿಸಿದರು.

    ಪಾಲಿಕೆ ಆರ್ಥಿಕವಾಗಿ ಸುಭದ್ರವಾಗಿದೆ. ಈ ವರ್ಷದಲ್ಲಿ 119 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಇದ್ದು, ಇದುವರೆಗೆ 69 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ ಎಂದರು.

    ಸ್ಮಾರ್ಟ್​ಸಿಟಿ ಯೋಜನೆಯಡಿ ಪೂರ್ಣಗೊಳಿಸಿರುವ ವಿವಿಧ ಯೋಜನೆಗಳನ್ನು ಪಾಲಿಕೆ ಹಸ್ತಾಂತರಿಸಿಕೊಳ್ಳುವಂತೆ ಸರ್ಕಾರದ ಸೂಚನೆ ಇದೆ. ಆದರೆ, ಹಿಂದಿನ ಸಾಮಾನ್ಯ ಸಭೆಯಲ್ಲಿ ಈ ಯೋಜನೆಗಳು ಕಳಪೆಯಾಗಿದ್ದು, ಹಸ್ತಾಂತರಿಸದಂತೆ ಠರಾವು ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಥರ್ಡ್​ಪಾರ್ಟಿಯಿಂದ ಈ ಯೋಜನೆಗಳ ಪರಿಶೀಲನೆ ನಡೆಸಲಾಗುವುದು. ಯೋಜನೆಗಳು ಸರಿಯಾಗಿದ್ದರೆ ಸಾಮಾನ್ಯ ಸಭೆಯಲ್ಲಿ ಮತ್ತೊಮ್ಮೆ ಠರಾವು ಮಂಡಿಸಿ, ಹಸ್ತಾಂತರಿಸಿಕೊಳ್ಳಲಾಗುವುದು ಎಂದು ಹೇಳಿದರು.

    ಪಾಲಿಕೆ ಪ್ರತಿಪಕ್ಷ ನಾಯಕಿ ಸುವರ್ಣ ಕಲಕುಂಟ್ಲ, ಮುಖ್ಯ ಲೆಕ್ಕಾಧಿಕಾರಿ ಸತ್ಯಪ್ಪ ನರಗಟ್ಟಿ, ಅಧೀಕ್ಷಕ ಅಭಿಯಂತರ ತಿಮ್ಮಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts