More

    67 ಗಣ್ಯರಿಗೆ ಧೀಮಂತ ಪ್ರಶಸ್ತಿ

    ಹುಬ್ಬಳ್ಳಿ: ಈ ಬಾರಿ ನವಂಬರ್ 1ರಂದು 67ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಅವಳಿ ನಗರದ 67 ಗಣ್ಯರಿಗೆ ಧೀಮಂತ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ತಿಳಿಸಿದರು.

    ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5 ಗಂಟೆಗೆ ಇಂದಿರಾ ಗಾಜಿನ ಮನೆ ಆವರಣದಲ್ಲಿ ಪ್ರಶಸ್ತಿ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 50 ವರ್ಷ ಮೇಲ್ಪಟ್ಟವರು ಹಾಗೂ ಹು-ಧಾ ದಲ್ಲಿ ಕನಿಷ್ಠ 10 ವರ್ಷಗಳಿಂದ ನೆಲೆಸಿರುವವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಅಂಗವಿಕಲರಿಗೆ ವಯಸ್ಸಿನ ಮಿತಿ ಇರುವುದಿಲ್ಲ. ಪಾಲಿಕೆಯ ಹಿರಿಯ ಪೌರ ಕಾರ್ವಿುಕರಿಗೂ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.

    ಆರೋಗ್ಯ, ಶಿಕ್ಷಣ, ಕಲೆ, ಸಾಹಿತ್ಯ, ಪತ್ರಿಕೋದ್ಯಮ, ಕ್ರೀಡೆ ಸೇರಿ 15-16 ಕ್ಷೇತ್ರಗಳ ಸಾಧಕರನ್ನು ಗುರುತಿಸಲಾಗುವುದು. ಪ್ರಶಸ್ತಿಗೆ ಅರ್ಜಿ ಆಹ್ವಾನಿಸುವುದಿಲ್ಲ. ಉಪ ಮೇಯರ್ ಉಮಾ ಮುಕುಂದ ಅವರ ಅಧ್ಯಕ್ಷತೆಯಲ್ಲಿ ಉಪ ಸಮಿತಿಯನ್ನು ರಚಿಸಲಾಗಿದೆ. ಅ. 28ರೊಳಗೆ ಉಪ ಸಮಿತಿಯು ಆಯ್ಕೆಯನ್ನು ಅಂತಿಮಗೊಳಿಸಲಿದೆ. ಪ್ರಶಸ್ತಿಯು ನೆನಪಿನ ಕಾಣಿಕೆ. ಶಾಲು, ಫಲಕ ಒಳಗೊಂಡಿರಲಿದೆ ಎಂದು ತಿಳಿಸಿದರು.

    ಧಾರವಾಡದಲ್ಲೂ ಮೆರವಣಿಗೆ

    ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಈ ಭಾರಿ ಧಾರವಾಡದಲ್ಲೂ ಸ್ತಬ್ಧ ಚಿತ್ರಗಳ ಮೆರವಣಿಗೆ ಆಯೋಜಿಸಲಾಗಿದೆ. ಅ. 30ರಂದು ಮಧ್ಯಾಹ್ನ 3ಗಂಟೆಗೆ ಧಾರವಾಡದ ಶಿವಾಜಿ ವೃತ್ತದಿಂದ ಕಲಾಭವನದವರೆಗೆ ಮೆರವಣಿಗೆ ನಡೆಯಲಿದೆ. ನ. 1ರಂದು ಬೆಳಗ್ಗೆ 9.30ಕ್ಕೆ ಶ್ರೀ ಸಿದ್ಧಾರೂಢ ಮಠದಿಂದ ನೆಹರು ಮೈದಾನದವರೆಗೆ ಸ್ತಬ್ಧ ಚಿತ್ರಗಳ ಮೆರವಣಿಗೆ ಏರ್ಪಡಿಸಲಾಗಿದೆ. 12ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಪಾಲ್ಗೊಳ್ಳಲಿವೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಉಪ ಮೇಯರ್ ಉಮಾ ಮುಕುಂದ, ಸಭಾ ನಾಯಕ ತಿಪ್ಪಣ್ಣ ಮಜ್ಜಗಿ, ವಿರೋಧ ಪಕ್ಷದ ನಾಯಕ ದೋರಾಜ್ ಮಣಿಕುಂಟ್ಲ, ಸದಸ್ಯೆ ಸುವರ್ಣ ಕಲ್ಲಕುಂಟ್ಲ, ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ, ಸಹಾಯಕ ಆಯುಕ್ತ ಎಸ್.ಸಿ. ಬೇವೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts