More

    ರೈತರನ್ನು ಒಕ್ಕಲೆಬ್ಬಿಸುತ್ತಿರುವ ಸರ್ಕಾರ: ಮಾಜಿ ಸಿಎಂ ಎಚ್‌ಡಿಕೆ ಕಿಡಿ

    ಬೆಂಗಳೂರು ಗ್ರಾಮಾಂತರ: ಕೈಗಾರಿಕೆ ನಿರ್ಮಾಣದ ಹೆಸರಿನಲ್ಲಿ ಕೃಷಿ ಯೋಗ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈತರನ್ನು ಒಕ್ಕಲೆಬ್ಬಿಸುವುದು ಸರ್ಕಾರದ ಜನವಿರೋಧಿ ಆಡಳಿಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.


    ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಆವರಣದಲ್ಲಿ ಗುರುವಾರ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟಗಾರರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.


    ಈ ಹಿಂದೆ ಇದೇ ಪ್ರದೇಶದಲ್ಲಿ 12 ಸಾವಿರ ಎಕರೆ ಭೂಮಿಯನ್ನು ವಿಮಾನ ನಿಲ್ದಾಣ ಮತ್ತಿತರ ಕಾರಣಗಳಿಗಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಮತ್ತೆ 1700 ಎಕರೆ ಭೂಮಿ ವಶಪಡಿಸಿಕೊಳ್ಳಲು ಸರ್ಕಾರ ಅಧಿಸೂಚನೆ ಹೊರಡಿಸಿರುವುದರಿಂದ ಸಹಜವಾಗಿಯೇ ರೈತರು ಕೆರಳಿದ್ದಾರೆ. ಸರ್ಕಾರಕ್ಕೆ ರೈತರ ಹಿತರಕ್ಷಣೆ ಬಗ್ಗೆ ಕಾಳಜಿ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರು ಈ ಭಾಗದಲ್ಲಿ ದ್ರಾಕ್ಷಿ ಸೇರಿ ವಿವಿಧ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಕೋಳಿ ಫಾರ್ಮ್ ಸೇರಿ ಅನೇಕ ಉಪಕಸುಬುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿನ ಕೃಷಿಯೋಗ್ಯ ಭೂಮಿಯಿಂದ ರೈತರು ಉತ್ತಮವಾಗಿಯೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಜೀವನ ನಡೆಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸರ್ಕಾರ ರೈತರ ಭೂಮಿಯನ್ನು ಬಲವಂತವಾಗಿ ಕಿತ್ತುಕೊಂಡು ದಲ್ಲಾಳಿಗಳಿಗೆ ಕಾಸು ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಿರುವುದು ಅಕ್ಷಮ್ಯವಾಗಿದೆ ಎಂದರು.


    ಬಿಜೆಪಿ ಪಾಠ ಕಲಿತಿಲ್ಲ: ಈ ಹಿಂದೆಯು ಬಿಜೆಪಿ ಸರ್ಕಾರದಲ್ಲಿ ಇದೇ ರೀತಿ ಅಕ್ರಮ ಎಸಗಿ ಸಚಿವರೇ ಜೈಲು ಸೇರಿದ್ದರು. ಇಂಥ ಪ್ರಕರಣ ನಡೆದಿದ್ದರೂ ಬಿಜೆಪಿಯವರು ಪಾಠ ಕಲಿತಿಲ್ಲ. ರೈತರ ಹಿತಾಸಕ್ತಿ ಬಲಿಕೊಟ್ಟು ಸರ್ಕಾರ ನಡೆಸುವ ಉಮೇದು ಅವರಿಗೇನಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.


    ರೈತರ ಮೇಲಿನ ಪ್ರಕರಣ ರದ್ದಾಗಬೇಕು: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಎರಡನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ 1,700 ಎಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ಚನ್ನರಾಯಪಟ್ಟಣ ವ್ಯಾಪ್ತಿಯ ರೈತರು ನಡೆಸುತ್ತಿರುವ ಹೋರಾಟ 145 ನೇ ದಿನಕ್ಕೆ ಕಾಲಿಟ್ಟಿದೆ. ಆದರೂ ಸರ್ಕಾರ ರೈತರ ನ್ಯಾಯಯುತ ಹೋರಾಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.


    ರೈತರ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ರೈತರ ಮೇಲೆಯೇ ಪೋಲಿಸ್‌ರಿಂದ ದೌರ್ಜನ್ಯ ನಡೆಸಿದೆ ಇದು ಎಷ್ಟರ ಮಟ್ಟಿಗೆ ಸರಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು. ರೈತರ ಮೇಲೆ ಹಲ್ಲೆ ನಡೆಸಿರುವ ಪೋಲಿಸರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ರೈತರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ರದ್ದು ಮಾಡಬೇಕು ಮತ್ತು ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಒತ್ತಾಯಿಸಿದರು. ಗ್ರಾಮಾಂತರ ಜಿಲ್ಲೆ ಅಪರ ಜಿಲ್ಲಾಧಿಕಾರಿ ವಿಜಯ ಈ ರವಿಕುಮಾರ್ ಮೂಲಕ ಹೋರಾಟಗಾರರು ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts