More

    ಕೆ.ಸಿ.ನಾರಾಯಣಗೌಡರನ್ನು ಭೇಟಿ ಮಾಡಿದ ಮಾಜಿ ಸಿಎಂ‌ ಎಚ್‌ಡಿಕೆ: ಕಾಂಗ್ರೆಸ್ ಸೇರುವ ನಿರ್ಧಾರಕ್ಕೆ ಬ್ರೇಕ್?

    ಮಂಡ್ಯ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಅವರನ್ನು ಪಕ್ಷಕ್ಕೆ ಕರೆತರಲು ಸಜ್ಜಾಗಿದ್ದ ಕಾಂಗ್ರೆಸ್ ನಾಯಕರಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಅದರಂತೆ ಮಹತ್ವದ ಬೆಳವಣಿಗೆ ಎಂಬಂತೆ ಬೆಂಗಳೂರಿನಲ್ಲಿ ಕೆ.ಸಿ.ನಾರಾಯಣಗೌಡ ಅವರನ್ನು ಎಚ್ಡಿಕೆ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
    2018ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದ ಕೆಸಿಎನ್, ನಂತರ ದಿನದಲ್ಲಿ ಬದಲಾದ ರಾಜಕೀಯ ಕಾರಣಕ್ಕೆ ಪಕ್ಷ ತೊರೆದು ಬಿಜೆಪಿ ಸೇರಿದರು. ಮಾತ್ರವಲ್ಲದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಶಾಸಕರ ಗುಂಪಿನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಕಣಕ್ಕಿಳಿದು ಗೆಲುವು ಸಾಧಿಸಿ ಜಿಲ್ಲೆಯಲ್ಲಿ ಬಿಜೆಪಿ‌ ಮೊದಲ ಶಾಸಕ ಹಾಗೂ ಸಚಿವ ಎನ್ನುವ ಹೆಗ್ಗಳಿಕೆ ಹೊಂದಿದ್ದಾರೆ.
    ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಬಳಿಕ ರಾಜಕೀಯವಾಗಿ ತಟಸ್ಥವಾಗಿದ್ದರು. ಈ ನಡುವೆ ಬಿಜೆಪಿ ಜೆಡಿಎಸ್‌‌‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಜತೆಗೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡದಂತೆ ಒತ್ತಾಯಿಸಿದರು.
    ಆದರೆ ಜೆಡಿಎಸ್‌ಗೆ ಮಂಡ್ಯ ಕ್ಷೇತ್ರ ಬಿಟ್ಟು ಕೊಟ್ಟ ಕಾರಣಕ್ಕೆ ಕಾಂಗ್ರೆಸ್ ಸೇರುತ್ತಾರೆನ್ನುವ ಚರ್ಚೆ ಕೇಳಿಬಂದಿತ್ತು. ಈ ನಡುವೆ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಖಚಿತವಾದ ಹಿನ್ನೆಲೆಯಲ್ಲಿ ನಾರಾಯಣಗೌಡ ಅವರನ್ನು ಭೇಟಿ‌ ಮಾಡಿ ಮನವೊಲಿಸುವ ಪ್ರಯತ್ನ ನಡೆದಿದೆ.
    ಈ ವೇಳೆ ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಿ.ಎಸ್.ಪುಟ್ಟರಾಜು, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್ ಇದ್ದರು. ಹಲವು ಹೊತ್ತು ನಾರಾಯಣಗೌಡ ಜತೆ ಮಾತುಕತೆ ನಡೆಸಲಾಗಿದೆ. ಇದಕ್ಕೆ ಕೆಸಿಎನ್ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆನ್ನಲಾಗಿದೆ.

    ಕೆ.ಸಿ.ನಾರಾಯಣಗೌಡರನ್ನು ಭೇಟಿ ಮಾಡಿದ ಮಾಜಿ ಸಿಎಂ‌ ಎಚ್‌ಡಿಕೆ: ಕಾಂಗ್ರೆಸ್ ಸೇರುವ ನಿರ್ಧಾರಕ್ಕೆ ಬ್ರೇಕ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts