More

    ಬಿಜೆಪಿ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಜೆಡಿಎಸ್ ನಾಯಕರು!

    ಬೆಂಗಳೂರು: ಬಿಜೆಪಿ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಜೆಡಿಎಸ್ ನಾಯಕರನ್ನು ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಹಾಗಾಗಿ ಇನ್ನು ಮುಂದೆ ಬಿಜೆಪಿ ಪ್ರಚಾರ ಸಭೆಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ, ಸರ್ಕಾರದ ವಿರುದ್ಧ ಜಂಟಿ ಸಮರ ಸಾರಲಿದ್ದಾರೆ.

    ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೂ ತಮ್ಮ ಪಕ್ಷವನ್ನು ಕಡೆಗಣಿಸುತ್ತಿರುವ ಬಗ್ಗೆ ಜೆಡಿಎಸ್ ನಾಯಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.
    ಜೆಡಿಎಸ್ ಕೋರ್ ಕಮಿಟಿಯಲ್ಲಿ ಘಟಾನುಘಟಿ ನಾಯಕರೇ ಬಿಜೆಪಿ ವರ್ತನೆ ಬಗ್ಗೆ ಅತೀವ ಬೇಸರ ಹೊರ ಹಾಕಿದ್ದರು.

    ಸೀಟು ಹಂಚಿಕೆ ವಿಳಂಬ, ಬಿಜೆಪಿ ಟಿಕೆಟ್ ನೀಡಿಕೆ ಸಂದರ್ಭದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು, ಸಭೆ,ಸಮಾರಂಭಗಳಿಗೆ ಆಹ್ವಾನಿಸದೇ ಇರುವ ಬಗ್ಗೆ ಜೆಡಿಎಸ್ ಮುಖಂಡರಲ್ಲಿ ಅಸಮಾಧಾನ ಭುಗಿಲೆದ್ದಿತ್ತು.

    ನಮ್ಮನ್ನು ನಿರ್ಲಕ್ಷಿಸಿದರೆ ನಿಮಗೇ ನಷ್ಟ

    ಜೆಡಿಎಸ್ ಪ್ರಾದೇಶಿಕ ಪಕ್ಷ ಎಂದು ನಿರ್ಲಕ್ಷಿಸಬೇಡಿ. ಹಳ್ಳಿ ಹಳ್ಳಿಗಳಲ್ಲಿ ಬಲಿಷ್ಠ ಕಾರ್ಯಕರ್ತರ ಪಡೆ ಇದೆ. ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ನಮ್ಮ ಬೆನ್ನಿಗಿವೆ. ನಮ್ಮನ್ನು ಕಡೆಗಣಿಸಿದರೆ ನಿಮಗೇ ನಷ್ಟ. ಮೈತ್ರಿ ಧರ್ಮ ಪಾಲನೆ ರೂಢಿಸಿಕೊಳ್ಳಿ ಎಂದು ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ನಾಯಕರು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.

    ಮೋದಿ ಪ್ರಚಾರ ಸಭೆಗೂ ಆಹ್ವಾನ ಇರಲಿಲ್ಲ

    ರಾಜ್ಯದಲ್ಲಿ ಮೋದಿ ಕಲಬುರಗಿ ಹಾಗೂ ಶಿವಮೊಗ್ಗದಲ್ಲಿ ಅಬ್ಬರದ ಚುನಾವಣಾ ಪ್ರಚಾರ ನಡೆಸಿದರೂ ಜೆಡಿಎಸ್ ನಾಯಕರಿಗೆ ಆಹ್ವಾನವಿರಲಿಲ್ಲ. ಸ್ಥಳೀಯ ಬಿಜೆಪಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಪ್ರಧಾನಿ ಸಭೆಗಳಿಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನಾದರೂ ಕರೆಯಬೇಕಲ್ಲವೆ? ಎಂದು ಕೋರ್ ಕಮಿಟಿ ಸಭೆಯಲ್ಲಿ ಮುಖಂಡರು ಸಿಟ್ಟು ತೋಡಿಕೊಂಡಿದ್ದರು.

    ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿ ಈಗ ಜೆಡಿಎಸ್‌ಗೆ ಹಾಸನ, ಮಂಡ್ಯ ಹಾಗೂ ಕೋಲಾರ ಕ್ಷೇತ್ರ ಬಿಟ್ಟುಕೊಡುವುದಾಗಿ ೋಷಿಸಿದೆ. ಜತೆಗೆ ಚುನಾವಣಾ ಪ್ರಚಾರ ಆರಂಭವಾದ ಮೇಲೆ ಬಿಜೆಪಿ- ಜೆಡಿಎಸ್ ನಾಯಕರು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ. ಜತೆ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ ಮೈತ್ರಿ ಪಕ್ಷದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.

    ಕೊನೆಗೂ ದಕ್ಕಿದ ಕೋಲಾರ

    ಕೋಲಾರ ಸೀಟು ಹಂಚಿಕೆ ಬಗ್ಗೆ ಬಿಜೆಪಿ ಮೀನಾಮೇಷ ಎಣಿಸುತ್ತಿದ್ದುದರಿಂದ ಬೇಸತ್ತ ಕುಮಾರಸ್ವಾಮಿ,‘ಕೇವಲ ಎರಡು ಕ್ಷೇತ್ರ ತೆಗೆದುಕೊಳ್ಳಲು ಇಷ್ಟು ಪ್ರಯತ್ನ ಪಡಬೇಕಿತ್ತಾ?ಇಷ್ಟೆಲ್ಲ ಹೊಂದಾಣಿಕೆ ಬೇಕಾ ನನಗೆ’ ಎಂದು ಕಿಡಿಕಾರಿದ್ದರು. ಈಗ ಸೀಟು ಹಂಚಿಕೆಯಾಗಿದೆ, ಜತೆಗೆ ಬಿಜೆಪಿ ಪ್ರಚಾರಕ್ಕೆ ಸ್ಟಾರ್ ಕ್ಯಾಂಪೇನರ್ ಪಟ್ಟಿಗೆ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಸೇರಿಸಿಕೊಳ್ಳಲು ಬಿಜೆಪಿ ತೀರ್ಮಾನಿಸಿದೆ. ಹಾಗಾಗಿ ಈವರೆಗಿನ ಜೆಡಿಎಸ್ ಅಸಮಾಧಾನ ಶಮನವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts