More

    15 ದಿನ ಕಳೆದರೂ ನೀರು ಬರುತ್ತಿಲ್ಲ; ಹುಳ ಹತ್ತಿದ ಹಳೆಯ ನೀರನ್ನೇ ಕುಡಿಯಬೇಕಾದ ದುಸ್ಥಿತಿ

    ಕೇಶವಮೂರ್ತಿ ವಿ.ಬಿ. ಹಾವೇರಿ

    ನಗರ ಸೇರಿ, ಜಿಲ್ಲೆಯಲ್ಲಿ ಹಾಹಾಕಾರ ವಿಜಯವಾಣಿ ಸುದ್ದಿಜಾಲ ಹಾವೇರಿ ಜಿಲ್ಲೆಯಲ್ಲಿ ನೂರಾರು ಕೆರೆಗಳು, ತುಂಗಭದ್ರ, ವರದಾ, ಮತ್ತಿತರ ನದಿ ಮೂಲಗಳು ಇದ್ದರೂ ಕೂಡ ಜನರಿಗೆ ಸರಿಯಾಗಿ ಕುಡಿಯುವ ನೀರು ಪೂರೈಸುವಲ್ಲಿ ಸ್ಥಳೀಯ ಆಡಳಿತಗಳು, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ವಿಫಲವಾಗಿವೆ. ಜಿಲ್ಲಾ ಕೇಂದ್ರ ಹಾವೇರಿ ಸೇರಿದಂತೆ ಜಿಲ್ಲೆಯ ಹಲವೆಡೆ 15 ದಿನ ಕಳೆದರೂ ನಲ್ಲಿಯಲ್ಲಿ ನೀರು ಬರುತ್ತಿಲ್ಲ. ಇದರಿಂದಾಗಿ ಹುಳ ಹತ್ತಿದ ಹಳೆಯ ನೀರನ್ನೇ ಕುಡಿಯಬೇಕಾದ ದುಸ್ಥಿತಿ ಜನತೆಗೆ ಬಂದೊದಗಿದೆ.
    ಈ ಬಾರಿ ಮಳೆಗಾಲದಲ್ಲಿ ಅಗತ್ಯಕ್ಕಿಂತ ಹೆಚ್ಚು ಮಳೆಯಾಗಿದೆ. ಕೆರೆ- ಕಟ್ಟೆಗಳು, ನದಿಗಳು ತುಂಬಿ ಹರಿಯುತ್ತಿವೆ. ನೀರಿನ ಮೂಲ ಸಾಕಷ್ಟಿದೆ. ಹೀಗಿದ್ದರೂ, ಸಮರ್ಪಕವಾಗಿ ನೀರು ಪೂರೈಸಲು ಸಂಬಂಧಪಟ್ಟವರಿಗೆ ಸಾಧ್ಯವಾಗುತ್ತಿಲ್ಲ. ಬೇಸಿಗೆಯ ಧಗೆ ಹೆಚ್ಚಾಗುತ್ತಿದ್ದಂತೆ ನೀರಿನ ಬವಣೆ, ಹಾಹಾಕಾರ ಎಲ್ಲೆಲ್ಲೂ ಹೆಚ್ಚಾಗುತ್ತಿದೆ. ಮೊದ ಮೊದಲು ವಾರಕ್ಕೊಮ್ಮೆ ಬಿಡುತ್ತಿದ್ದರು. ಈಗ ಎರಡು ವಾರ ದಾಟಿದರೂ ಬಿಡುತ್ತಿಲ್ಲ. ಹಾಗಾಗಿ, 15, 20 ದಿನಗಳ ಹಿಂದೆ ಕುಡಿಯಲು ಸಂಗ್ರಹಿಸಿ ಇಟ್ಟಿದ್ದ ನೀರಿನಲ್ಲಿ ಹುಳ ಉತ್ಪತ್ತಿಯಾಗಿವೆ. ಇದೇ ನೀರನ್ನು ಕುಡಿಯಬೇಕಾದ ಅನಿವಾರ್ಯತೆಯನ್ನು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಂದೊಡ್ಡಿದ್ದಾರೆ.
    ರೋಗ ಭೀತಿ : ನೀರಿನ ಸಮಸ್ಯೆ ಹೆಚ್ಚಾದ್ದರಿಂದ ಜಿಲ್ಲೆಯ ಜನರಲ್ಲಿ ರೋಗ ಭೀತಿ ಶುರುವಾಗಿದೆ. ಕುಡಿಯಲು ಸಾಮಾನ್ಯ ನೀರೇ ಸಿಗುತ್ತಿಲ್ಲ. ಇನ್ನು ಶುದ್ಧೀಕರಿಸಿದ ಕುಡಿಯುವ ನೀರು ಸಿಗುವುದು ಅನುಮಾನವಾಗಿದೆ. ಬಹಳ ದಿನಗಳಿಂದ ಸಂಗ್ರಹಿಸಿಟ್ಟ ನೀರು, ಬೋರ್‌ವೆಲ್ ನೀರು ಕುಡಿಯುವುದರಿಂದ ಜನರಲ್ಲಿ ಕೆಮ್ಮು, ನೆಗಡಿ, ಗಂಟಲು ನೋವು, ಕಫ, ಮತ್ತಿತರ ಸಮಸ್ಯೆ ಕಂಡು ಬರುತ್ತಿದೆ. ಮಕ್ಕಳು ರೋಗಕ್ಕೆ ಶೀಘ್ರವಾಗಿ ತುತ್ತಾಗುತ್ತಿದ್ದಾರೆ.
    ಇನ್ನಾದರೂ ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸಂಬಂಧಪಟ್ಟ ಸ್ಥಳೀಯ ಆಡಳಿತಗಳಿಗೆ, ಇತರ ಇಲಾಖೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕಿದೆ. ಜನರಿಗೆ ಕನಿಷ್ಠ ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
    ಹಾವೇರಿ ನಗರಸಭೆ ವಿಫಲ
    ಜಿಲ್ಲಾಕೇಂದ್ರ ಹಾವೇರಿ ನಗರದಲ್ಲಿ 15, 20 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಗುತ್ತಲ ಸಮೀಪದ ಕಂಚಾರಗಟ್ಟಿಯಿಂದ ತುಂಗಭದ್ರಾ ನದಿಯ ನೀರು ಪೂರೈಸುವ ಪೈಪ್ ಹಳೆಯದಾಗಿದ್ದು, ಆಗಾಗ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತದೆ. ಇದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ನದಿಯಲ್ಲಿ ನೀರು ಇದ್ದರೂ ಕೂಡ ಸಮರ್ಪಕವಾಗಿ ನೀರು ಪೂರೈಸುವಲ್ಲಿ ನಗರಸಭೆ ವಿಫಲವಾಗಿದೆ. ಕೆಯುಐಡಿಎಫ್‌ಸಿಯಿಂದ ನಡೆಸುತ್ತಿರುವ 24/7 ನೀರು ಪೂರೈಕೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕಿದೆ.
    ಗ್ರಾಮೀಣ ಭಾಗದಲ್ಲಿ ಸಮಸ್ಯೆ
    ಹಾವೇರಿ ಜಿಲ್ಲಾ ಕೇಂದ್ರದ್ದೇ ಈ ಗತಿಯಾದರೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳತೀರದ್ದಾಗಿದೆ. ಕೆಲವೆಡೆ ಬೋರ್‌ವೆಲ್ ನೀರು ಬಿಡಲಾಗುತ್ತಿದೆಯಾದರೂ ಕುಡಿಯಲು ಯೋಗ್ಯವಾಗಿಲ್ಲ. ಹಲವು ಶುದ್ಧ ಕುಡಿಯುವ ನೀರಿನ ಘಟಕಗಳೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹಾಗಾಗಿ, ಜನ ಸಮಸ್ಯೆಯಲ್ಲಿ ನಲುಗುತ್ತಿದ್ದಾರೆ. ಹಾವೇರಿ ತಾಲೂಕಿನ ನಾಗನೂರ ಬಳಿ ವರದಾ ನದಿಯಲ್ಲಿ ನೀರು ಕಡಿಮೆಯಾಗಿದೆ. ಆದರೂ ಜನ ಅಲ್ಲಲ್ಲಿ ನಿಂತಿರುವ ನೀರನ್ನೇ ಕೊಡದಲ್ಲಿ ತುಂಬಿಸಿಕೊಂಡು ಕುಡಿಯಲು ಬಳಸುತ್ತಿದ್ದಾರೆ.
    ಕೋಟ್:
    ಹಾವೇರಿ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. 15, 20 ದಿನಕ್ಕೊಮ್ಮೆ ಕುಡಿಯುವ ನೀರು ಬಿಡಲಾಗುತ್ತಿದೆ. ಅದೂ ಖಚಿತವಿಲ್ಲ. ಈ ಕುರಿತು ವಿಭಾಗೀಯ ಆಯುಕ್ತರು, ಮುಖ್ಯಮಂತ್ರಿ, ಸೇರಿದಂತೆ ಎಲ್ಲರ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ.
    ಶಿವನಗೌಡ ತಿಪ್ಪನಗೌಡ್ರ, ನಿವೃತ್ತ ಉಪನ್ಯಾಸಕ, ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts