More

    ಗಾಂಧಿ- ಶಾಸ್ತ್ರಿ ತತ್ವ ಅಳವಡಿಸಿಕೊಳ್ಳಿ; ಇಬ್ಬರ ಜಯಂತಿ ಒಂದೇ ದಿನ ವಿಶೇಷವೇ ಸರಿ; ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ

    ಹಾವೇರಿ: ಮಹಾತ್ಮ ಗಾಂಧಿ ಹಾಗೂ ಲಾಲಬಹದ್ದೂರ್ ಶಾಸ್ತ್ರಿ ಜಯಂತಿ ಒಂದೇ ದಿನ ಇರುವುದು ವಿಶೇಷವಾಗಿದೆ. ಗಾಂಧಿ ಅವರಂತೆ ಶಾಸ್ತ್ರಿ ಕೂಡ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ವಿದ್ಯಾರ್ಥಿಗಳು ಇಬ್ಬರು ಮಹಾನ್ ನಾಯಕರ ಬಗ್ಗೆ ತಿಳಿದುಕೊಳ್ಳಬೇಕು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ರಾಷ್ಟ್ರಭಕ್ತಿ ಹೊಂದಬೇಕು ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಕಿವಿಮಾತು ಹೇಳಿದರು.
    ನಗರದ ಜಿಲ್ಲಾ ಗುರುಭವನದಲ್ಲಿ ಸೋಮವಾರ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಹಾಗೂ ಲಾಲಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮವನ್ನು ಚರಕದಲ್ಲಿ ನೂಲು ತೆಗೆಯುವ ಮೂಲಕ ಉದ್ಘಾಟಿಸಿ, ಉಭಯ ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
    ಮಹಾತ್ಮಗಾಂಧೀಜಿ ಅವರು ಯಾವುದೇ ಶಸ್ತ್ರಾಸ್ತ ಹಿಡಿಯದೇ ಅಹಿಂಸಾ ಮಾರ್ಗದಿಂದ ದೇಶದಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಚೇತನ. ಗಾಂಧೀಜಿ ರಾಷ್ಟ್ರದ ಏಳ್ಗೆಗೆ ಶ್ರಮಿಸಿದವರು. 154 ವರ್ಷಗಳ ಸುಧೀರ್ಘ ಸಮಯದ ನಂತರವೂ ಪ್ರತಿದಿನ ನಾವು ಅವರನ್ನು ನೆನಪಿಸಿಕೊಳ್ಳುವುದಕ್ಕೆ ಅವರ ಜೀವನ ಶೈಲಿ ಕಾರಣವಾಗಿದೆ. ಜಗತ್ತಿನಾದ್ಯಂತ ಅವರ ತತ್ವಾದರ್ಶಗಳು ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
    ಸಾಗರದ ಲೇಖಕ ಡಾ.ಸರ್ಫ್ರಾಜ್ ಚಂದ್ರಗುತ್ತಿ ಮಾತನಾಡಿ, ಗಾಂಧೀಜಿ ಎಲ್ಲ ಗುಡಿ-ಗಡಿ ದಾಟಿ ಎಲ್ಲರಿಗೂ ಸೇರಿದ ಆಸ್ತಿ. ಅವರು ಹರಿಜನ ಕೇರಿಗೆ ಹೋಗಿ ಕಸ ಗುಡಿಸಿ, ಶೌಚಗೃಹ ಸ್ವಚ್ಛಗೊಳಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ಜತೆಗೆ ಸಮ ಸಮಾಜ ನಿರ್ಮಾಣಕ್ಕೂ ಸಹ ಶ್ರಮಿಸಿದರು. ಅವರು ಕೊನೆಯ ಉಸಿರು ಇರುವವರೆಗೂ ಸತ್ಯವನ್ನು ಬಿಡಲಿಲ್ಲ ಎಂದು ಹೇಳಿದರು.
    ಲಾಲಬಹದ್ದೂರ್ ಶಾಸ್ತ್ರಿ ಅವರು ಗಾಂಧಿ ಅನುಯಾಯಿ ಆಗಿದ್ದರು. ದೇಶದ ಅಲ್ಪಾವಧಿ ಪ್ರಧಾನಮಂತ್ರಿಯಾಗಿದ್ದರು. ಪಾಕಿಸ್ತಾನ ಮೇಲೆ ಯುದ್ಧ ಮಾಡಿ ಗೆದ್ದು ಇಡಿ ಜಗತ್ತಿಗೆ ಭಾರತದ ಸಾಮರ್ಥ್ಯ ತೋರಿಸಿದ್ದರು ಎಂದರು.
    ಕಾರ್ಯಕ್ರಮದಲ್ಲಿ ಶಿಕ್ಷಕ ವಾಸುದೇವ ಹತ್ತಿಮತ್ತೂರ ಭಗವದ್ಗೀತೆ ಪಠಿಸಿದರು. ಶಿಕ್ಷಕ ಎ.ಪಿ.ಮೊಹ್ಸಿನ್ ಕುರಾನ್ ಹಾಗೂ ನಗರದ ಸೇಂಟ್ ಆನ್ಸ್ ಶಾಲೆ ಪ್ರಾಂಶುಪಾಲರಾದ ಸಿಸ್ಟರ್ ಲೂಮಿನಾ ಬೈಬಲ್ ಪಠಿಸುವ ಮೂಲಕ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಿದರು. ಅಭಯ ಸುಗಮ ಸಂಗೀತ ಕಲಾತಂಡದ ರೇಖಾ ಕುಲಕರ್ಣಿ ಸಂಗಡಿಗರಿಂದ ಗಾಂಧಿ ಪ್ರಿಯ ಗೀತಗಾಯನ ನಡೆಯಿತು.
    ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಸಾಹಿತಿ ಸತೀಶ ಕುಲಕರ್ಣಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ, ಉಪ ವಿಭಾಗಾಧಿಕಾರಿ ಚೆನ್ನಪ್ಪ, ಡಿಡಿಪಿಯು ಡಾ.ಉಮೇಶಪ್ಪ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಿರೀಶ ಪದಕಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಪ್ರವೀಣ, ತಹಶೀಲ್ದಾರ್ ಶಂಕರ ಜಿ.ಎಸ್., ಗಾಂಧಿ ವೇಷಧಾರಿ ರಾಮಣ್ಣ ಹುಲಗೂರ, ಇತರರು ಉಪಸ್ಥಿತರಿದ್ದರು.
    ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ ವಂದಿಸಿದರು. ಬಾಕ್ಸ್
    ಸದ್ಭಾವನಾ ನಡಿಗೆ
    ಬೆಳಗ್ಗೆ ನಗರದ ಗಾಂಧಿ ವೃತ್ತದಲ್ಲಿರುವ ಗಾಂಧಿ ಪುತ್ಥಳಿಗೆ ರುದ್ರಪ್ಪ ಲಮಾಣಿ ಹಾಗೂ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮಾಲಾರ್ಪಣೆ ಮಾಡಿ ಸದ್ಭಾವನಾ ನಡಿಗೆಗೆ ಹಸಿರು ನಿಶಾನೆ ತೋರಿಸಿದರು. ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಗಾಂಧಿ ವೃತ್ತದಿಂದ ಗುರುಭವನದವರೆಗೆ ಗಾಂಧಿ ಸಂದೇಶಗಳ ಪ್ಲೇಕಾರ್ಡ್ ಮೂಲಕ ಜಾಗೃತಿ ಮೂಡಿಸಿದರು.
    ಖಾದಿ ತೊಟ್ಟ ಅಧಿಕಾರಿಗಳು
    ಅಧಿಕಾರಿಗಳು ಖಾದಿ ಜುಬ್ಬಾ-ಪೈಜಾಮ್, ಟೋಪಿ, ಮಹಿಳಾ ಅಧಿಕಾರಿಗಳು ಖಾದಿ ಸೀರೆಯುಟ್ಟು ಗಮನ ಸೆಳದರೆ, ವಿದ್ಯಾರ್ಥಿಗಳೆಲ್ಲರೂ ಗಾಂಧಿ ಟೋಪಿ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts