More

    ಎಲ್ಲೆಡೆ ಮೊಳಗಿತು ಓಂ ನಮಃ ಶಿವಾಯ.. ಮಂತ್ರ; ಜಿಲ್ಲೆಯಲ್ಲಿ ಮಹಾ ಶಿವರಾತ್ರಿ ಜಾಗರಣೆ ಸಡಗರ; ಈಶ್ವರನಿಗೆ ಬಿಲ್ವಪತ್ರೆ ಅರ್ಪಿಸಿ ಪುನೀತರಾದ ಭಕ್ತರು

    ಹಾವೇರಿ: ಬರಗಾಲ, ಕುಡಿಯುವ ನೀರಿನ ಅಭಾವದ ನಡುವೆಯೂ ಹಿಂದುಗಳ ಪವಿತ್ರ ಹಬ್ಬ ಮಹಾಶಿವರಾತ್ರಿ ಹಬ್ಬವನ್ನು ಜಿಲ್ಲೆಯಾದ್ಯಂತ ಶುಕ್ರವಾರ ಸಡಗರದಿಂದ ಆಚರಿಸಲಾಯಿತು. ದೇವಸ್ಥಾನ, ಮನೆ- ಮನಗಳಲ್ಲಿ ಓಂ ನಮಃ ಶಿವಾಯ.. ಎಂಬ ಪಂಚಾಕ್ಷರಿ ಮಂತ್ರ ಎಲ್ಲೆಡೆ ಮೊಳಗಿತು.
    ನಗರದ ಪುರಸಿದ್ದೇಶ್ವರ ದೇವಸ್ಥಾನ, ಈಶ್ವರ ದೇವಸ್ಥಾನ, ಹುಕ್ಕೇರಿಮಠ, ಈಶ್ವರೀಯ ವಿಶ್ವವಿದ್ಯಾಲಯ, ವೀರಭದ್ರೇಶ್ವರ ದೇವಸ್ಥಾನ, ಬಸವೇಶ್ವರ ನಗರದ ಸಿ ಬ್ಲಾಕ್‌ನಲ್ಲಿರುವ ಗಜಾನನ ಹಾಗೂ ಆಂಜನೇಯ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾದ ಶಿವಮೂರ್ತಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
    ನಗರದ ಇತರ ದೇಗುಲಗಳಲ್ಲೂ ವಿಶೇಷ ಪೂಜೆ ನೆರವೇರಿಸಲಾಯಿತು. ಬನ್ನಿಗಿಡ, ಪತ್ರಿಗಿಡಗಳಿಗೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಧನ್ಯತಾಭಾವ ಮೆರೆದರು. ದೇವಸ್ಥಾನಗಳಲ್ಲಿ ಬಿಲ್ವಾರ್ಚನೆ, ಲಕ್ಷಬಿಲ್ವಾರ್ಚನೆ, ಎಲೆಪೂಜೆ, ಕಂಕಣಪೂಜೆ, ಅಭಿಷೇಕ, ಕ್ಷೀರಾಭಿಷೇಕ ಸೇವೆ ಮಾಡಲಾಗಿತ್ತು. ಕೆಲವೆಡೆ ಧಾರ್ಮಿಕ ಸಮಾರಂಭ, ರಾತ್ರಿ ಪೂರ್ತಿ ಜಾಗರಣೆ, ಭಜನೆ ಹಮ್ಮಿಕೊಳ್ಳಲಾಗಿತ್ತು. ಮನೆಗಳಲ್ಲಿ ಕುಟುಂಬಸಮೇತರಾಗಿ ವಿಶೇಷವಾಗಿ ಲಿಂಗಪೂಜೆ ನೆರವೇರಿಸಿ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಸಮರ್ಪಿಸಿದರು.
    ಏರಿದ ತಾಪ, ಸೂರ್ಯನಿಗೆ ಪೂಜೆ
    ಶಿವರಾತ್ರಿಗೂ ಬಿಸಿಲಿಗೂ ನಂಟು ಇದ್ದೇ ಇದೆ. ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಶಿವರಾತ್ರಿಯ ದಿನದಂದು ಸೂರ್ಯ ಮತ್ತಷ್ಟು ಸುಡುತ್ತಿದ್ದ. ಭಕ್ತರು ಶಿವನ ಜತೆಗೆ ಸೂರ್ಯದೇವನಿಗೂ ಆರತಿ ಎತ್ತಿ ಪೂಜೆಗೈದರು.
    ಉಪವಾಸ, ಶಿವನ ಜಪ
    ಶಿವರಾತ್ರಿ ಅಂಗವಾಗಿ ಭಕ್ತರು ಉಪವಾಸ ವ್ರತ ಕೈಗೊಂಡಿದ್ದರು. ಹಾಲು, ಹಣ್ಣು ಸೇವಿಸಿ ಉಪವಾಸವಿದ್ದರು. ಕೈಯಲ್ಲಿ ಶಿವಲಿಂಗ ಹಾಗೂ ಜಪಮಾಲೆ ಹಿಡಿದು ಜಪಿಸಿದರು.
    ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ..
    ಸ್ಥಳೀಯ ಬಸವೇಶ್ವರ ನಗರದ ಸಿ ಬ್ಲಾಕ್‌ನಲ್ಲಿರುವ ಶ್ರೀ ಗಜಾನನ ಹಾಗೂ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಮಹಾಶಿವರಾತ್ರಿ ನಿಮಿತ್ತ ದ್ವಾದಶ ಜ್ಯೋತಿರ್ಲಿಂಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಹೂವು, ಬಿಲ್ವಪತ್ರಿಯಿಂದ ದ್ವಾದಶ ಜೋತಿರ್ಲಿಂಗಗಳನ್ನು ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ದ್ವಾದಶ ಜೋತಿರ್ಲಿಂಗಗಳ ದರ್ಶನ ಪಡೆದು ಪುನೀತರಾದರು. ಮಧ್ಯಾಹ್ನ 12ಗಂಟೆಗೆ ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ದ್ವಾದಶ ಜೋತಿರ್ಲಿಂಗಗಳಿಗೆ ಮಹಾ ಮಂಗಳಾರತಿ ಹಾಗೂ ಆಶೀರ್ವಚನ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts