More

    ಡೊನೇಶನ್ ಹಾವಳಿ ತಡೆಗಟ್ಟಲು ಆಗ್ರಹ; ನಿಯಮ ಉಲ್ಲಂಘಿಸಿದ ಖಾಸಗಿ ಶಾಲೆಗಳ ಮಾನ್ಯತೆ ರದ್ದುಗೊಳಿಸಲು ಎಸ್‌ಎಫ್‌ಐ ಒತ್ತಾಯ

    ಹಾವೇರಿ: ಈ ಕೂಡಲೇ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಸಭೆ ಕರೆಯಬೇಕು. ಡೊನೇಷನ್ ಹಾವಳಿ ತಡೆಗಟ್ಟಲು ಹಾಗೂ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿದ ಖಾಸಗಿ ಶಾಲೆಗಳ ಮಾನ್ಯತೆ ರದ್ದುಮಾಡಲು ಆಗ್ರಹಿಸಿ ಹಾಗೂ ಅಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡುವಂತೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಜಿಲ್ಲಾ ಸಮಿತಿ ಆಗ್ರಹಿಸಿದೆ.
    ಈ ಕುರಿತು ಜಿಲ್ಲಾ ಘಟಕದ ಪದಾಧಿಕಾರಿಗಳು ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
    2024-25ನೇ ಸಾಲಿನಲ್ಲಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಾಗಲೇ ಪ್ರವೇಶಾತಿ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿದ್ದು, ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣ ಪ್ರಾಧಿಕಾರ ಸಭೆ ಸೇರಿ, ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ಕುರಿತು ಪಾಲಕರಿಗೆ ಮಾಹಿತಿ ನೀಡಬೇಕಾಗಿತ್ತು. ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯು ಸಭೆ ಸೇರಿ ಖಾಸಗಿ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡದಿರುವ ಕಾರಣ 1983ರ ಶಿಕ್ಷಣ ಕಾಯ್ದೆ ಮತ್ತು 2009ರ ಆರ್.ಟಿ.ಇ. ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸುವ ಮೂಲಕ ಹಗಲು ದರೋಡೆ ಮಾಡಿರುತ್ತಾರೆ.
    ಶಿಕ್ಷಣ ಹಕ್ಕು ಕಾಯ್ದೆ-1983 ಮತ್ತು 2009ರ ಆರ್.ಟಿ.ಇ ಕಾಯ್ದೆ ಜಾರಿಯಾದರೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಬಹುತೇಕ ಖಾಸಗಿ ಶಾಲೆಗಳಲ್ಲಿ ಲಕ್ಷಾಂತರ ರೂಪಾಯಿಗಳವರೆಗೂ ಹಣ ವಸೂಲಿ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆ. ಅಕ್ರಮವಾಗಿ ಟ್ಯೂಶನ್, ಟ್ಯೂಟೋರಿಯಲ್ಸ್, ಅನಧಿಕೃತವಾಗಿ ಸಿಬಿಎಸ್‌ಸಿ ಹೆಸರಲ್ಲಿ, ಕೆಲವು ಪ್ರತಿಷ್ಠಿತ ಪಿ.ಯು.ಸಿ ಕಾಲೇಜುಗಳು ಜೆಇಇ, ಎನ್‌ಇಇಟಿ, ಸಿಇಟಿ ಹೆಸರಿನಲ್ಲಿ ಶಾಲಾ-ಕಾಲೇಜುಗಳು ನಡೆಯುತ್ತಿವೆ.
    ಸರ್ಕಾರದ ನಿಯಮಗಳ ಪ್ರಕಾರ ಸರ್ಕಾರ ನಿಗದಿಪಡಿಸಿದಂತೆ ಅಭಿವೃದ್ಧಿ ಶುಲ್ಕ (ಡೆವಲಪ್‌ಮೆಂಟ್ ಶುಲ್ಕ) ಸಂಗ್ರಹಿಸಲು ಅವಕಾಶವಿದೆ. ಆದರೆ, ಒತ್ತಾಯ ಮಾಡುವಂತಿಲ್ಲ. ಹೆಚ್ಚುವರಿ ಹಣ ಸಂಗ್ರಹಿಸುವುದು ಕಾನೂನಿನ ಪ್ರಕಾರ ಅಪರಾಧ. ಪ್ರವೇಶ ಪರೀಕ್ಷೆ ನಡೆಸುವ ಶಾಲೆಗಳಿಗೆ 25 ಸಾವಿರ ರೂ. ದಂಡ ಹಾಕಬೇಕೆಂದು ಹೇಳಿದೆ. ವಿದ್ಯಾರ್ಥಿಗಳ ಸಂಖ್ಯೆ, ಕಲಿಕಾ ಮಾಧ್ಯಮ, ಶುಲ್ಕದ ವಿವರ, ಕ್ರೀಡಾಂಗಣ, ಶೌಚಗೃಹ, ಶಿಕ್ಷಕರ ಸಂಖ್ಯೆ, ಮುಂತಾದ ಮಾಹಿತಿಯನ್ನು ಶಾಲಾ ಆವರಣದಲ್ಲಿ ಪ್ರಕಟಿಸಬೇಕೆಂದು ಶಿಕ್ಷಣ ಇಲಾಖೆ ಆದೇಶಿಸಿದೆ. ಆದರೆ, ಇದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಜಾರಿ ಮಾಡಿಲ್ಲ. ಸರ್ಕಾರದ ಸುತ್ತೋಲೆಯಲ್ಲಿ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇದನ್ನು ಪರೀಶಿಲಿಸಬೇಕೆಂದು ಹೇಳಿದ್ದರೂ ಇಲಾಖೆಯ ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಣಿದು ಸರಿಯಾಗಿ ಪರೀಶೀಲನೆ ಮಾಡಿರುವುದಿಲ್ಲ.
    ಇಂತಹ ಶಾಲೆಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅನಧಿಕೃತ ಟ್ಯೂಶನ್ ಸೆಂಟರ್‌ಗಳನ್ನು ಮುಚ್ಚಬೇಕೆಂದು ಎಸ್‌ಎಫ್‌ಐ ಆಗ್ರಹಿಸಿದೆ.
    ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್., ಪ್ರಮುಖರಾದ ಪ್ರದೀಪ ಕುರಿಯವರ, ಚಂದ್ರು ಲಮಾಣಿ, ನವೀನ ಎಚ್.ಟಿ., ಕಿರಣ ಬಂದಿ, ರೇವಣಸಿದ್ದೇಶ ವಿ., ಕೃಷ್ಣ ಸಿ., ಬಸವರಾಜ ನಾಯಕ, ಶಿವುಕುಮಾರ ಸಿ., ಶಿವಾಜಿ ಆರ್.ಎಲ್., ವಿರೇಶ ಎಸ್. ರಾಘವೇಂದ್ರ ವೈ.ಜಿ. ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts