More

    ಜಾಗತಿಕ ಮಟ್ಟದ ಪೈಪೋಟಿಗೆ ತೆರೆದುಕೊಳ್ಳಿ; ವಿಜ್ಞಾನ ಸಮಾವೇಶದ ಸದುಪಯೋಗ ಪಡೆದುಕೊಳ್ಳಿ; ಪುಟಾಣಿ ವಿಜ್ಞಾನಿಗಳಿಗೆ ಡಿಡಿಪಿಐ ಸುರೇಶ ಹುಗ್ಗಿ ಸಲಹೆ

    ಹಾವೇರಿ: ಜಾಗತಿಕ ಮಟ್ಟದ ಪೈಪೋಟಿಗೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಅಗತ್ಯವಾದ ಜ್ಞಾನ, ವಿಜ್ಞಾನ, ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸುರೇಶ ಹುಗ್ಗಿ ಮಕ್ಕಳಿಗೆ ಸಲಹೆ ನೀಡಿದರು.
    ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಹಯೋಗದಲ್ಲಿ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಘಟಕವು ನಗರದ ಎಸ್.ಎಂ.ಎಸ್. ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ವಿಜೇತರಾದ ಪುಟಾಣಿ ವಿಜ್ಞಾನಿಗಳಿಗಾಗಿ ಏರ್ಪಡಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.
    ಪಠ್ಯಪುಸ್ತಕ ಓದುವುದರಿಂದ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಸಾಧ್ಯ. ಅಬ್ದುಲ್ ಕಲಾಂ, ಸಿ.ವಿ. ರಾಮನ್ ಅವರಂಥ ಸಾಧಕರ ಕುರಿತು ಪುಸ್ತಕ ಓದಬೇಕು. ಇದರಿಂದ ವ್ಯಕ್ತಿತ್ವ ವಿಕಸನ, ಅವರ ಆದರ್ಶ ಪಾಲನೆಗೆ ಸಹಕಾರಿಯಾಗುತ್ತದೆ. ಕೌಶಲ ಆಧಾರಿತ ಕಲಿಕೆಗೆ ಇಂಬು ಕೊಡುವ ಮಕ್ಕಳ ವಿಜ್ಞಾನ ಸಮಾವೇಶದಂತಹ ಕಾರ್ಯಕ್ರಮಗಳು ಫಲಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.
    ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ, ಬಾಲವಿಜ್ಞಾನ ಸಂಪಾದಕ ಮಂಡಳಿ ಸದಸ್ಯ ಆರ್.ಎಸ್.ಪಾಟೀಲ ಮಾತನಾಡಿ, ಅಡುಗೆ ಮನೆಯೇ ಒಂದು ರಾಸಾಯನಿಕ ಪ್ರಯೋಗಾಲಯವಿದ್ದಂತೆ. ಅಡುಗೆಯ ಚುಟವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅರ್ಥವಾಗುತ್ತದೆ ಎಂದರು.
    ಮಕ್ಕಳ ವಿಜ್ಞಾನ ಸಮಾವೇಶಗಳಲ್ಲಿ ಭಾಗವಹಿಸುವ ಮಕ್ಕಳು ಶಾಲಾ ಚಟುವಟಿಕೆಗಳ ಆಚೆಗೆ ದೊರೆತ ಮಾಹಿತಿ ಕಲೆ ಹಾಕಿ ಸಂಶೋಧನಾ ಪ್ರಬಂಧ ರೂಪಿಸಿ ಮಂಡನೆ ಮಾಡುತ್ತಾರೆ. ವಿಜ್ಞಾನಿಗಳಾಗಲು ಈ ಕಾರ್ಯಕ್ರಮ ತುಂಬಾ ಉಪಯುಕ್ತ. ರಾಷ್ಟ್ರಮಟ್ಟ, ಅಂತರಾಷ್ಟ್ರೀಯ ಮಟ್ಟದವರೆಗೂ ಭಾಗವಹಿಸಿ ಪ್ರತಿಭೆ ಅನಾವರಣಗೊಳಿಸುವ ಅವಕಾಶ ಈ ಕಾರ್ಯಕ್ರಮದಲ್ಲಿದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
    ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಬಿ.ಹಿರೇಮಠ ಮಾತನಾಡಿ, ಧರ್ಮ, ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವು ಜತೆಯಾಗಿ ಸಾಗಬೇಕು ಎಂದು ಹೇಳಿದರು.
    ಡಿ.ವೈ.ಪಿ.ಸಿ. ನಿರಂಜನಮೂರ್ತಿ, ವಿಷಯ ಪರಿವೀಕ್ಷಕ ಎಸ್.ಪಿ.ಮೂಡಲದವರ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಪಿ.ಬಿ.ಮುದ್ದಿ, ಎಫ್.ಎನ್.ಕರೇಗೌಡ್ರ ಉಪಸ್ಥಿತರಿದ್ದರು.
    ಜಿಲ್ಲಾ ಸಂಯೋಜಕ ಕೆ.ಎಸ್.ದಳವಾಯಿ ಸ್ವಾಗತಿಸಿದರು. ಕಾರ್ಯಕ್ರಮದ ಶೈಕ್ಷಣಿಕ ಸಂಯೋಜಕ ಜಿ.ಎಸ್. ಹತ್ತಿಮತ್ತೂರ ನಿರೂಪಿಡಿದರು. ಎ.ಎಚ್.ಕಬ್ಬಿಣಕಂತಿಮಠ ಪ್ರಶಸ್ತಿ ಕಾರ್ಯಕ್ರಮ ನಡೆಸಿಕೊಟ್ಟರು.
    ರಾಜ್ಯಮಟ್ಟಕ್ಕೆ ಆಯ್ಕೆ
    ಗ್ರಾಮೀಣ ಕಿರಿಯರ ವಿಭಾಗದಿಂದ ಚಂದನಾ ಎಚ್.ಪಿ.ಎಸ್., ಹೊಸರಿತ್ತಿಯ ಸುಶೀಲಾ ಹತ್ತಿಮತ್ತೂರ, ಸ.ಪ್ರೌ.ಶಾಲೆ ಮೇವುಂಡಿಯ ಪಾರ್ವತಿ ಮುದ್ದಿ, ಗ್ರಾಮೀಣ ಹಿರಿಯರ ವಿಭಾಗದಿಂದ ಸರ್ಕಾರಿ ಪ್ರೌಢಶಾಲೆ ಮಕರವಳ್ಳಿಯ ವೀರಣ್ಣ ಕಮ್ಮಾರ, ಸರ್ಕಾರಿ ಪ್ರೌಢಶಾಲೆ ಮಂತ್ರೋಡಿಯ ಲಕ್ಷ್ಮೀ ಬಂಕಾಪುರ, ಸರ್ಕಾರಿ ಪ್ರೌಢಶಾಲೆ ಮೇವುಂಡಿಯ ವಿಜಯಲಕ್ಷ್ಮೀ ಬಳಿಗಾರ, ಶಹರ ಕಿರಿಯ ವಿಭಾಗದಿಂದ ಶಿಗ್ಗಾಂವಿ ಪೊಲೀಸ್ ಪಬ್ಲಿಕ್ ಶಾಲೆಯ ಅಜಿತ್ ದೊಡ್ಡಮನಿ, ಹಾವೇರಿ ಕೆ.ಎಲ್.ಇ. ಶಾಲೆಯ ವೈಷ್ಣವಿ ಆಡೂರ, ಶಹರದ ಹಿರಿಯ ವಿಭಾಗದಿಂದ ಶಿಗ್ಗಾಂವಿ ಜೆ.ಎಂ.ಜೆ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಯಿಷಾ ನದಾಫ, ಹಾವೇರಿ ಕೆ.ಎಲ್.ಇ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅದಿತಿ ಗಾಣಗೇರ, ಹಾವೇರಿ ಸೇಂಟ್ ಆನ್ಸ್ ಐ.ಸಿ.ಎಸ್.ಈ. ಶಾಲೆಯ ನಂದನ ಮಲ್ಲಾಡದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts