More

    ಜಲಾಗಾರಕ್ಕೆ ಶಾಸಕ ರುದ್ರಪ್ಪ ಲಮಾಣಿ ಭೇಟಿ; ನೀರಿನ ಶುದ್ಧೀಕರಣ ಘಟಕ ಪರಿಶೀಲನೆ; ಅಧಿಕಾರಿಗಳಿಂದ ಮಾಹಿತಿ ಪಡೆದ ಉಪಸಭಾಧ್ಯಕ್ಷರು

    ಹಾವೇರಿ: ನಗರದ ಮುನ್ಸಿಪಲ್ ಹೈಸ್ಕೂಲ್ ಬಳಿ ಇರುವ ನೀರು ಶುದ್ಧೀಕರಣ ಘಟಕ (ಡಬ್ಲೂೃಟಿಪಿ)ಕ್ಕೆ ವಿಧಾನಸಭಾ ಉಪ ಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದು, ವೈಜ್ಞಾನಿಕವಾಗಿ ನೀರು ಶುದ್ಧೀಕರಿಸಿ ಸಾರ್ವಜನಿಕರಿಗೆ ಪೂರೈಸುವಂತೆ ಸೂಚಿಸಿದರು. ತುಂಗಭದ್ರಾ ನದಿಯಲ್ಲಿ ನೀರು ಇಲ್ಲದ ಕಾರಣ ಜಿಲ್ಲಾ ಉಸ್ತುವಾರಿ ಸಚಿವರು, ನಾವು ಹಾಗೂ ಜಿಲ್ಲಾಧಿಕಾರಿಯವರು ಪ್ರಯತ್ನಿಸಿ ಹೆಗ್ಗೇರಿ ಕೆರೆಯಿಂದ ಹಾವೇರಿ ನಗರಕ್ಕೆ ನೀರು ಪೂರೈಸಲು ಕ್ರಮ ಕೈಗೊಂಡಿದ್ದೇವೆ. ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ವೇಳೆ ನೀರಿನ ಪೈಪ್ ಒಡೆದ ಪರಿಣಾಮ ಬಸವೇಶ್ವರ ನಗರದಲ್ಲಿ ಒಂದು ಮನೆಗೆ ಮಣ್ಣು ಮಿಶ್ರಿತ ನೀರು ಬಂದಿತ್ತು. ಅದನ್ನು ನಗರಸಭೆಯಿಂದ ಈಗಾಗಲೇ ಸರಿಪಡಿಸಲಾಗಿದೆ. ಹೆಗ್ಗೇರಿ ಕೆರೆಗೆ ಕೊಳಚೆ ನೀರು ಬರುವುದನ್ನು ಈಗಾಗಲೇ ತಡೆಗಟ್ಟಲಾಗಿದೆ. ಬೇರೆಡೆ ಹರಿಸಲಾಗುತ್ತಿದೆ ಎಂದು ‘ವಿಜಯವಾಣಿ’ಗೆ ತಿಳಿಸಿದರು. ನೀರಿನ ಸಮಸ್ಯೆ ಕುರಿತು ‘ಹಾವೇರಿಗೆ ಕಲುಷಿತ ನೀರು ಪೂರೈಕೆ’ ಎಂಬ ಶೀರ್ಷಿಕೆಯಡಿ ಏ.2ರಂದು ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬಳಿಕ ಶಾಸಕರು ಖುದ್ದಾಗಿ ಜಲಾಗಾರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    4.5 ಕೋಟಿ ರೂ. ಯೋಜನೆ

    ಪೊಲೀಸ್ ಕ್ವಾರ್ಟರ್ಸ್ ನಿಂದ ಹೊರಬರುವ ಕೊಳಚೆ ನೀರು ಕೆರೆಗೆ ಹೋಗುತ್ತಿಲ್ಲ. ಬೇರೆಡೆ ಬಿಡಲಾಗುತ್ತಿದೆ. ಅದಕ್ಕಾಗಿ ಯುಜಿಡಿ ಕಾಮಗಾರಿ ಮಾಡಲು ಈಗಾಗಲೇ 4.5 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದ್ದು, ಚುನಾವಣೆ ಮುಗಿದ ಕೂಡಲೇ ಟೆಂಡರ್ ಕರೆಯಲಾಗುವುದು ಎಂದು ಶಾಸಕ ಲಮಾಣಿ ಹೇಳಿದರು.

    ಚರಂಡಿ ನೀರು ಮಿಶ್ರಣವಾಗಿಲ್ಲ
    ಹೆಗ್ಗೇರಿ ಕೆರೆಯ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ತುಂಗಭದ್ರಾ ನದಿಯಷ್ಟೇ ಈ ನೀರೂ ಬಳಕೆಗೆ ಯೋಗ್ಯವಾಗಿರುವುದಾಗಿ ತಿಳಿದು ಬಂದಿತ್ತು. ಆ ಬಳಿಕವೇ ನಲ್ಲಿಯ ಮೂಲಕ ಪೂರೈಸಲಾಗಿದೆ. ಯಾರೂ ನೀರನ್ನು ಕುಡಿಯಬಾರದೆಂದು ಮೊದಲೇ ಸೂಚಿಸಲಾಗಿತ್ತು. ಎಜಿಪಿ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ವೇಳೆ ನಗರಸಭೆಯ ಕುಡಿಯುವ ನೀರಿನ ಪೈಪ್‌ಲೈನ್ ಒಡೆದ ಪರಿಣಾಮ ಬಸವೇಶ್ವರ ನಗರ 12ನೇ ಕ್ರಾಸ್‌ನ ಒಂದು ಮನೆಗೆ ಮಾತ್ರ ಮಣ್ಣುಮಿಶ್ರಿತ ನೀರು ಸರಬರಾಜಾಗಿತ್ತು. ಅದರಲ್ಲಿ ಚರಂಡಿ ನೀರು ಮಿಶ್ರಣವಾಗಿರಲಿಲ್ಲ. ವಿಷಯ ತಿಳಿದ ಕೂಡಲೇ ದುರಸ್ಥಿಗೊಳಿಸಲಾಗಿದೆ. ಒಂದೆರೆಡು ದಿನದಲ್ಲಿ ನದಿಗೆ ನೀರು ಬರಲಿದ್ದು, ನಂತರ ನದಿ ನೀರು ಪೂರೈಸಲಾಗುವುದು. ಮುಂದಿನ ನಿರ್ದೇಶನ ನೀಡುವವರೆಗೂ ಜನರು ನೀರನ್ನು ಕುಡಿಯುವುದು ಬೇಡ. ಬಳಕೆಗೆ ಮಾತ್ರ ಉಪಯೋಗಿಸಬೇಕೆಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಹಾಗೂ ಹಾವೇರಿ ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts