More

    ಹಾವೇರಿಗೆ ನೀರು ಪೂರೈಕೆಗೆ 141 ಕೋಟಿ ರೂ.; ಅಮೃತ ಯೋಜನೆಯಡಿ ವಿಶೇಷ ಯೋಜನೆ; ಶಾಸಕ ರುದ್ರಪ್ಪ ಲಮಾಣಿ

    ಹಾವೇರಿ: ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ವಿಶೇಷವಾಗಿ ಅಮೃತ ಯೋಜನೆಯಡಿ 141 ಕೋಟಿ ರೂ. ಹಾಗೂ ಪೊಲೀಸ್ ವಸತಿ ಗೃಹಗಳ ಡ್ರೈನೇಜ್ ನೀರು ಶುದ್ಧೀಕರಿಸುವ ಯೋಜನೆಗೆ 10 ಕೋಟಿ ರೂ. ಮಂಜೂರು ದೊರೆತಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
    ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಹಾವೇರಿ ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಹಾವೇರಿ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
    ಹೆಗ್ಗೇರಿ ಕೆರೆಗೆ ನೀರು ತುಂಬಿಸುವ ಮೂಲಕ ಬರುವ ದಿನಗಳಲ್ಲಿ ಕುಡಿಯುವ ನೀರಿನ ಕಾಮಗಾರಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಹಾವೇರಿ ನಗರಕ್ಕೆ ನಿರಂತರ ನೀರು ಕೊಡಲಾಗುವುದು. ನಗರ ರಸ್ತೆ ನಿರ್ಮಾಣಕ್ಕೆ 19 ಕೋಟಿ ರೂ. ಮಂಜೂರು ಮಾಡಲಾಗಿದೆ. ಸುಂದರ ಹಾಗೂ ಸಮೃದ್ಧ ಹಾವೇರಿ ನಿರ್ಮಾಣ ಮಾಡಲು ಸರ್ವ ರೀತಿಯ ಪ್ರಯತ್ನ ನಡೆಸಿದ್ದು, ಎಲ್ಲರೂ ಒಂದಾಗಿ ಸಾಕಾರಗೊಳಿಸೋಣ ಎಂದರು.
    ನಮ್ಮ ಸರ್ಕಾರ ಜನತೆಗೆ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಿದೆ. ಈ ಯೋಜನೆಗಳಿಗಾಗಿ ಮುಖ್ಯಮಂತ್ರಿಗಳು 59 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದ್ದಾರೆ. ಐದು ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳಿಗೆ ಐದು ಸಾವಿರ ರೂ.ವರೆಗೆ ಆರ್ಥಿಕ ನೆರವು ದೊರೆಯುತ್ತಿದೆ. ಜನರು ಈ ಯೋಜನೆಗಳ ಲಾಭವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
    ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದ್ದು ದೇಶದಲ್ಲೇ ಮೊದಲು ಸಿ.ಎಂ.ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ಬಡವ-ಬಲ್ಲಿದ ಎನ್ನದೇ ಎಲ್ಲ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಎಲ್ಲರಿಗೂ ಸಮಾನ ಅವಕಾಶಗನ್ನು ನೀಡಲಾಗುತ್ತಿದೆ ಎಂದರು.
    ಗೃಹಭಾಗ್ಯ ಯೋಜನೆ ಕುರಿತು ಸಿಡಿಪಿಒ ಶೈಲಾ ಕುರಹಟ್ಟಿ, ಗೃಹ ಜ್ಯೋತಿ ಯೋಜನೆ ಕುರಿತು ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಿ.ಬಿ.ಹೊಸಮನಿ, ಯುವನಿಧಿ ಯೋಜನೆ ಕುರಿತು ಜಿಲ್ಲಾ ಉದ್ಯೋಗಾಧಿಕಾರಿ ಚನ್ನಕುಮಾರ ಹಾಗೂ ಶಕ್ತಿ ಯೋಜನೆ ಕುರಿತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಹಾವೇರಿ ವಿಭಾಗೀಯ ಕಚೇರಿ ವ್ಯವಸ್ಥಾಪಕ ಕೆ.ಟಿ.ನದಾಫ್ ವಿವರಿಸಿದರು. ಯೋಜನೆಗಳ ಫಲಾನುಭವಿಗಳು ತಮ್ಮ ಅನಸಿಕೆ ಹಂಚಿಕೊಂಡರು.
    ತಹಸೀಲ್ದಾರ್ ನಾಗರಾಜ ಎನ್.ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ರೇಣುಕಾ ಪುತ್ರನ್, ಪೂಜಾ ಹಿರೇಮಠ, ಎನ್.ಚೋಪದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಎಂ.ಎಂ.ಮೈದೂರ, ಎಸ್.ಎಫ್.ಎನ್.ಗಾಜೀಗೌಡ್ರ, ಪಿ.ಬಿ.ಕುರುವತ್ತಿಗೌಡ್ರ, ಮತ್ತಿತರರು ಉಪಸ್ಥಿತರಿದ್ದರು.
    ಎಂಆರ್‌ಐ ಸ್ಕಾೃನ್ ಸೌಲಭ್ಯ ಶೀಘ್ರ
    ಜನತೆಗೆ ಅವಶ್ಯಕವಾದ ಎಂ.ಐ.ಆರ್. ಸ್ಕ್ಯಾನ್ ಯಂತ್ರವನ್ನು ಶೀಘ್ರದಲ್ಲೇ ಜಿಲ್ಲಾಸ್ಪತ್ರೆಗೆ ಮಂಜೂರು ಮಾಡಲಾಗುವುದು. ಹಾವೇರಿ ವೈದ್ಯಕೀಯ ಕಾಲೇಜು ಉದ್ಘಾಟನೆಯನ್ನೂ ಶೀಘ್ರದಲ್ಲೇ ಮಾಡಲಾಗುವುದು. ವಸತಿ ಯೋಜನೆಯಡಿ 1,111 ಮನೆಗಳು ಮಂಜೂರಾಗಿದ್ದು, ಲಕಮಾಪೂರ ಹಾಗೂ ಮುಲ್ಲಾನ ಕೆರೆ ದಂಡೆ ಮೇಲೆ ಅಕ್ರಮವಾಗಿ ಮನೆ ನಿರ್ಮಿಸಿಕೊಂಡ ಹಾಗೂ ದೊಡ್ಡಿಯಲ್ಲಿ ವಾಸವಿರುವ ಜನರಿಗೂ ಸಹ ಈ ಮನೆಗಳನ್ನು ನೀಡಲಾಗುವುದು. ಫಲಾನುಭವಿಗಳು ಒಂದು ಲಕ್ಷ ರೂ. ನೀಡಬೇಕು, ಉಳಿದ ಹಣವನ್ನು ಸರ್ಕಾರ ಭರಿಸಲಿದೆ ಎಂದು ರುದ್ರಪ್ಪ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts