More

    ಸಾಹಿತ್ಯ ಸಮ್ಮೇಳನಕ್ಕೆ ವರ್ಷದ ಹರ್ಷ; 4.63 ಕೋಟಿ ರೂ. ಬಿಡುಗಡೆ ; ಐತಿಹಾಸಿಕ ಕಾರ್ಯಕ್ರಮದ ಸವಿನೆನಪಿನ ಸಮಾರಂಭ ಜ.7ರಂದು

    ಕೇಶವಮೂರ್ತಿ ವಿ.ಬಿ. ಹಾವೇರಿ
    ಯಾಲಕ್ಕಿ ನಗರಿ ಹಾವೇರಿಯಲ್ಲಿ 2023ರ ಜನವರಿ 6, 7, 8ರಂದು ನಡೆದ ಐತಿಹಾಸಿಕ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಇಂದು ವರುಷ ತುಂಬಿದೆ. ಮೊಟ್ಟ ಮೊದಲ ಬಾರಿಗೆ 25 ಕೋಟಿ ರೂ. ವೆಚ್ಚದಲ್ಲಿ, 100 ಎಕರೆ ಸ್ಥಳದಲ್ಲಿ ಒಂದೇ ಕಡೆಯಲ್ಲಿ ಮೂರು ವೇದಿಕೆ ನಿರ್ಮಿಸಿದ್ದ ಸಮ್ಮೇಳನಕ್ಕೆ 5 ಲಕ್ಷಕ್ಕೂ ಅಧಿಕ ಕನ್ನಡಾಭಿಮಾನಿಗಳು ಆಗಮಿಸುವ ಮೂಲಕ ಅಭೂತಪೂರ್ವ ಯಶಸ್ಸು ತಂದುಕೊಟ್ಟಿತ್ತು.
    ಈ ಸಮ್ಮೇಳನದಿಂದ ಹಾವೇರಿ ಮತ್ತಷ್ಟು ಪ್ರಸಿದ್ಧಿ ಪಡೆದುಕೊಂಡಿತು ಎಂದರೆ ತಪ್ಪಾಗಲಾರದು. ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸೇರಿದಂತೆ ಸ್ಥಳೀಯರ ನೆರವಿನಿಂದ ಸಮ್ಮೇಳನ ವಿಜೃಂಭಣೆಯಿಂದ ಜರುಗಿದ್ದು ಈಗ ಇತಿಹಾಸ. ಇಂತಹ ಸಮ್ಮೇಳನ ನೂರಾರು ನೆನಪುಗಳನ್ನು ಕಟ್ಟಿಕೊಟ್ಟಿದೆ.
    ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶೇಷ ಮುತುವರ್ಜಿ ವಹಿಸಿ ಸಮ್ಮೇಳನಕ್ಕೆ ಮೊದಲ ಬಾರಿಗೆ 20 ಕೋಟಿ ರೂ. ಅನುದಾನ ಒದಗಿಸಿದ್ದರು. ಇದನ್ನು ಹೊರತುಪಡಿಸಿ ಹೆಚ್ಚುವರಿ 4.63 ಕೋಟಿ ರೂ. ಖರ್ಚಾಗಿತ್ತು. ಬಾಕಿ ಹಣ ಬಿಡುಗಡೆಗೆ ಮೀನಮೇಷ ಎಣಿಸಿದ್ದ ಸಿದ್ದರಾಮಯ್ಯ ಸರ್ಕಾರ ಕೊನೆಗೂ ಹಣ ಬಿಡುಗಡೆಗೊಳಿಸಿದೆ. ಡಿಸಿ ಅವರ ಖಾತೆಗೆ ಹಣ ಜಮೆಯಾಗಿದ್ದು, ವಾರದೊಳಗೆ ಬಾಕಿ ಇರುವವರ ಖಾತೆ ಸೇರುವ ನಿರೀಕ್ಷೆಯಿದೆ.
    ಸಮ್ಮೇಳನದಲ್ಲಿ ಮೂರು ದಿನ ಭೂರಿ ಭೋಜನ ತಯಾರಿಸಿದ್ದ ಹುಬ್ಬಳ್ಳಿಯ ಭೈರೂ ಕ್ಯಾಟರಿಂಗ್‌ನ ಕೋಟ್ಯಂತರ ರೂ. ಬರಬೇಕಿದೆ. ಸಮ್ಮೇಳನ ಮುಖ್ಯ ವೇದಿಕೆ, ಮುಖ್ಯದ್ವಾರ, ಕನ್ನಡ ರಥ, ಸಮ್ಮೇಳನಾಧ್ಯಕ್ಷರ ಸಾರೋಟು ತಯಾರಿಸಿದ್ದ ಕಲಾವಿದರ 40 ಲಕ್ಷ ರೂ. ಬಾಕಿ ಇದೆ. ಕಸಾಪದಿಂದ ಪ್ರಕಟಿಸಿರುವ 1,000 ಸ್ಮರಣ ಸಂಚಿಕೆಯ 6 ಲಕ್ಷ ರೂ., ಸಾಹಿತ್ಯ ಪರಿಷತ್‌ನ ಕೇಂದ್ರ ಕಚೇರಿಯ ಖರ್ಚು ವೆಚ್ಚ 60 ಲಕ್ಷ ರೂ., ಸಮ್ಮೇಳನದಲ್ಲಿ ಬಿಡುಗಡೆಗೊಂಡಿದ್ದ 86 ಪುಸ್ತಕಗಳ 90 ಲಕ್ಷ ರೂ. ಸೇರಿದಂತೆ ಇತರ ಬಿಲ್‌ಗಳು ಬಾಕಿ ಉಳಿದುಕೊಂಡಿವೆ. ಈ ವಾರದೊಳಗೆ ಎನ್‌ಸಿಎ ಏಜೆನ್ಸಿ ಮೂಲಕ ಹಣ ಪಾವತಿಸುವುದಾಗಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ‘ವಿಜಯವಾಣಿ’ಗೆ ಖಚಿತಪಡಿಸಿದ್ದಾರೆ.
    ಸಮ್ಮೇಳನ ನಡೆದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಸಾಪ ಹಾಗೂ ಇತರ ಸಂಸ್ಥೆಗಳ ಸಹಯೋಗದಲ್ಲಿ ಹಾವೇರಿಯ ಲೋಡಾಯ ಸಭಾಂಗಣದಲ್ಲಿ ಜ.7ರಂದು ಬೆಳಗ್ಗೆ 10.30ಕ್ಕೆ ಸಮ್ಮೇಳನ ಸವಿನೆನಪಿನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

    ಮಂಡ್ಯ ಸಮ್ಮೇಳನ ದಿನಾಂಕ ಶೀಘ್ರ ಅಂತಿಮ
    ಬರ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ನಡೆಯಬೇಕಿರುವ 87ನೇ ಸಾಹಿತ್ಯ ಸಮ್ಮೇಳನ ದಿನಾಂಕ ಪ್ರಕಟ ವಿಳಂಬವಾಗಿದೆ. ಸಿಎಂ ಹಾಗೂ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ದಿನಾಂಕ ಘೋಷಿಸಲಾಗುವುದು. ಕರ್ನಾಟಕ ಹೆಸರು ನಾಮಕರಣ ಆಗಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಶೇಷವಾಗಿ ಆಯೋಜಿಸಲು ಚಿಂತನೆ ನಡೆದಿದೆ ಎನ್ನುತ್ತಾರೆ ಡಾ.ಮಹೇಶ ಜೋಶಿ.

    86 ಪುಟಗಳ ನುಡಿತೇರು
    ಕನ್ನಡದ ನಂಬರ್‌ಒನ್ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ಪ್ರಕಟಿಸಿದ್ದ 86 ಪುಟಗಳ (ಬ್ರಾಡ್‌ಶೀಟ್) ‘ನುಡಿತೇರು’ ವಿಶೇಷ ಪುರವಣಿ ಕನ್ನಡದ ಮನಸುಗಳಿಗೆ ಮುದ ನೀಡಿತ್ತು. ಜಿಲ್ಲೆಯ ಸಮಗ್ರ ಮಾಹಿತಿಯ ಗುಚ್ಚ ಸೇರಿದಂತೆ ಕನ್ನಡದ ಕಂಪು ಸೂಸಿದ್ದನ್ನು ಅಭಿಮಾನಿಗಳು ಈಗಲೂ ಸ್ಮರಿಸುತ್ತಾರೆ.

    ಕೋಟ್:
    ಹಾವೇರಿಯಲ್ಲಿ ನಡೆದ 86ನೇ ಸಮ್ಮೇಳನ ಇತಿಹಾಸ ಸೃಷ್ಟಿಸಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರ ಪರಿಶ್ರಮದಿಂದ ಇದು ಸಾಧ್ಯವಾಯಿತು. ಸಮ್ಮೇಳನದಲ್ಲಿ ಮಂಡಿಸಿದ್ದ ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕವನ್ನು ಬಸವರಾಜ ಬೊಮ್ಮಾಯಿ ಸರ್ಕಾರ ಅಂಗೀಕರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದನ್ನು ಜಾರಿಗೊಳಿಸಬೇಕಿದೆ.
    ಡಾ.ಮಹೇಶ ಜೋಶಿ, ಅಧ್ಯಕ್ಷ, ಕಸಾಪ

    ಕೋಟ್:
    ಹೆಚ್ಚುವರಿ 4.63 ಕೋಟಿ ರೂ. ಈಗಾಗಲೇ ಸರ್ಕಾರದಿಂದ ಬಿಡುಗಡೆಯಾಗಿ ಡಿಸಿ ಖಾತೆಗೆ ಜಮೆಯಾಗಿದೆ. ಈ ವಾರದಲ್ಲಿ ಎನ್‌ಸಿಎ ಏಜೆನ್ಸಿಗೆ ಜಮೆ ಮಾಡಲಾಗುವುದು. ನಂತರ ಅವರು ಬಾಕಿ ಇರುವವರ ಖಾತೆಗೆ ವರ್ಗಾಯಿಸಲಿದ್ದಾರೆ.
    ರಘುನಂದನ ಮೂರ್ತಿ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts