More

    ಅಧಿಕಾರಿಗಳಿಗೆ ನೋಟಿಸ್, ಷೋಕಾಸ್ ನೋಟಿಸ್; ಇಂದಿರಾ ಕ್ಯಾಂಟೀನ್ ಕಮಿಷನ್ ಪ್ರಕರಣ; ಕಾರಣ ಕೇಳಿದ ಡಿಯುಡಿಸಿ

    ಹಾವೇರಿ: ಇಂದಿರಾ ಕ್ಯಾಂಟೀನ್ ಬಿಲ್ ಪಾಸ್ ಮಾಡಲು ವಿಳಂಭ ಹಾಗೂ ಶೇ.10ರಷ್ಟು ಕಮಿಷನ್ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ, ರಾಣೆಬೆನ್ನೂರ ನಗರಸಭೆ ಹಾಗೂ ಹಿರೇಕೆರೂರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ನಗರಾಭಿವೃದ್ಧಿ ಕೋಶದ ಅಧಿಕಾರಿ (ಡಿಯುಡಿಸಿ) ಮಮತಾ ನೋಟಿಸ್ ನೀಡಿದ್ದಾರೆ. ಲಂಚ ಪಡೆದ ಆರೋಪ ಹೊಂದಿದ ಹಿರೇಕೆರೂರ ಪಟ್ಟಣ ಪಂಚಾಯಿತಿಯ ಹಿಂದಿನ ಮುಖ್ಯಧಿಕಾರಿಗೆ ಷೋಕಾಸ್ ನೋಟಿಸ್ ನೀಡಿದ್ದಾರೆ.
    ಇಂದಿರಾ ಕ್ಯಾಂಟೀನ್‌ಗಳ ಒಂದು ವರ್ಷದ 30 ಲಕ್ಷಕ್ಕೂ ಅಧಿಕ ಬಿಲ್ ಬಾಕಿ ಉಳಿಸಿಕೊಂಡದ್ದು ಹಾಗೂ ಬಿಲ್ ಪಾಸ್ ಮಾಡಲು ಅಧಿಕಾರಿಗಳು ಶೇ.10ರಷ್ಟು ಕಮಿಷನ್ ಕೇಳಿದ ಆರೋಪದ ಕುರಿತು ಅ.19ರಂದು ‘ವಿಜಯವಾಣಿ’ ಮುಖಪುಟದಲ್ಲಿ ‘ಇಂದಿರಾ ಕ್ಯಾಂಟೀನ್‌ಗೂ ಕಮಿಷನ ಕಾಟ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನೋಟಿಸ್ ನೀಡಿರುವುದಾಗಿ ಡಿಯುಡಿಸಿ ಮಮತಾ ತಿಳಿಸಿದ್ದಾರೆ. ಬಾಗಿಲು ಮುಚ್ಚಿದ್ದ ರಾಣೆಬೆನ್ನೂರ ಇಂದಿರಾ ಕ್ಯಾಂಟೀನ್ ಕೂಡ ಪುನಾರಂಭಗೊಂಡಿದೆ.
    ಎರಡು ದಿನದಲ್ಲಿ ಬಿಲ್ ಪಾವತಿಗೆ ಕ್ರಮ
    ಇಂದಿರಾ ಕ್ಯಾಂಟೀನ್ ಸಮಸ್ಯೆಗಳ ಬಗೆಹರಿಸಲು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಶುಕ್ರವಾರ ಗುತ್ತಿಗೆದಾರರು ಹಾಗೂ ಹಿರೇಕೆರೂರ, ರಾಣೆಬೆನ್ನೂರ ಹಾಗೂ ಹಾವೇರಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಸಿದರು. ಕೂಡಲೇ ಬಿಲ್ ಪಾವತಿಸುಂತೆ ಅಧಿಕಾರಿಗಳಿಗೆ ಸೂಚಿಸಿದರು. ಗುತ್ತಿಗೆದಾರ ವಿಶ್ವನಾಥ ರೆಡ್ಡಿ ದರ್ಶನಾಪುರ ಏಪ್ರಿಲ್‌ನಲ್ಲಿ ಬಿಲ್ ಪಾವತಿಸಿದ್ದರು. ಹೆಚ್ಚಿನ ಬಿಲ್ ಕುರಿತು ಅಧಿಕಾರಿಗಳು ಸ್ಪಷ್ಟೀಕರಣ ಕೇಳಿದ್ದರು. ಅದಕ್ಕೆ ಉತ್ತರಿಸದೇ ಸೆ.20ರಂದು ಮತ್ತೊಮ್ಮೆ ಬಿಲ್ ಕೊಟ್ಟಿರುವುದಾಗಿ ಒಪ್ಪಿಕೊಂಡು ಪತ್ರ ಬರೆದಿದ್ದಾರೆ.
    ಕೋಟ್:
    ಇಂದಿರಾ ಕ್ಯಾಂಟೀನ್‌ಗಳ ಬಿಲ್ ಪರಿಶೀಲನೆ ಮಾಡಲಾಗುತ್ತಿದ್ದು, ಒಂದೆರೆಡು ದಿನಗಳಲ್ಲಿ ಬಿಲ್ ಪಾವತಿಸಲಾಗುವುದು. ಅಧಿಕಾರಿಗಳು ಕಮಿಷನ್ ಕೇಳಿದ ಆರೋಪದ ಕುರಿತು ದಾಖಲೆ ನೀಡಲು ಗುತ್ತಿಗೆದಾರರಿಗೆ ಸೂಚಿಸಿದ್ದು, ಗುತ್ತಿಗೆದಾರರು ಸಮಯಾವಕಾಶ ಕೇಳಿದ್ದಾರೆ. ದಾಖಲೆ ನೀಡಿದರೆ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು.
    ರಘುನಂದನ ಮೂರ್ತಿ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts