More

    ಮಾಂಗಲ್ಯ ಸರ ಅಡ ಇಟ್ಟು ಜೀವನ ಮಾಡಕತ್ತೇವಿ !; ಅಧಿಕಾರಿಗಳ ಮುಂದೆ ನೌಕರಿ ಕಳೆದುಕೊಂಡ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಅಳಲು

    ಹಾವೇರಿ: ಹತ್ತಾರು ವರ್ಷಗಳಿಂದ ಹಾಸ್ಟೆಲ್‌ನಾಗ ಅಡಗಿ ಮಾಡಕೊಂಡಿದ್ವಿ, ಏಕಾಏಕಿ ಕೆಲಸದಿಂದ ತೆಗೆದು ಹಾಕ್ಯಾರ ರೀ.. ಫೈನಾನ್ಸ್‌ನಲ್ಲಿ ಚಿನ್ನದ ಮಾಂಗಲ್ಯ ಸರ ಅಡ ಇಟ್ಟು ಜೀವನ ಸಾಗಿಸಕತ್ತೇವಿರೀ.. ಸರ್ಕಾರಕ್ಕ ನಮ್ಮ ನೋವು ಕಾಣಕತ್ತಿಲ್ಲ ರೀ..
    ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ನೇತೃತ್ವದಲ್ಲಿ ಪ್ರತಿಭಟನೆ ಆರಂಭಿಸಿರುವ ಜಿಲ್ಲಾ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ಅಧಿಕಾರಿಗಳ ಎದುರು ಹೀಗೆ ಅಳಲು ತೋಡಿಕೊಂಡರು. ಪ್ರತಿಭಟನಾಕಾರರ ಅಹವಾಲು ಆಲಿಸಲು ಸ್ಥಳಕ್ಕಾಗಮಿಸಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಪ್ರವೀಣ ಕೆ.ಎನ್. ಅವರ ಎದುರು ಪ್ರತಿಭಟನಾಕಾರರು ಸಮಸ್ಯೆಗಳ ಸುರಿಮಳೆಗೈದರು.
    ಜಿಲ್ಲೆಯ ಎಲ್ಲ ಹಾಸ್ಟೆಲ್‌ಗಳಲ್ಲಿ 600ಕ್ಕೂ ಅಧಿಕ ಅಡುಗೆಯವರು, ಅಡುಗೆ ಸಹಾಯಕರು, ಕಾವಲುಗಾರರು ಹೊರಗುತ್ತಿಗೆ ಆಧಾರದಲ್ಲಿ ಕೆಸಲ ನಿರ್ವಹಿಸುತ್ತಿದ್ದರು. 2019ರಲ್ಲಿ 120 ಖಾಯಂ ಸಿಬ್ಬಂದಿ ನೇಮಿಸಿದರು. ಆಗ ಏಕಾಏಕಿ 18, 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ 120 ಸಿಬ್ಬಂದಿಯನ್ನು ಕೆಲಸದಿಂದ ಕೈಬಿಟ್ಟರು. ಆಗ ಹೊಸ ಹಾಸ್ಟೆಲ್‌ಗಳಿಗೆ ನಿಮ್ಮನ್ನೇ ನೇಮಿಸುವುದಾಗಿ ಹೇಳಿದ್ದರು. ಆದರೆ, ಶಾಸಕರು, ಜನಪ್ರತಿನಿಧಿಗಳು ತಮಗೆ ಬೇಕಾದವರನ್ನು ಸೇರಿಸಿಕೊಂಡರು. ಈವರೆಗೆ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಕೂಡಲೇ ಎಲ್ಲ ಸಿಬ್ಬಂದಿಯನ್ನು ವಾಪಸ್ ನೇಮಿಸಿಕೊಳ್ಳಬೇಕು. ಇಎಸ್‌ಐ, ಪಿಎಫ್, ಸೇರಿದಂತೆ ಇತರ ಸೌಲಭ್ಯ ಹಾಗೂ ಸಮಯಕ್ಕೆ ಸರಿಯಾಗಿ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಕೊಂಗಿಯವರ, ಸುಭಾಸ ಕ್ಯಾಲಕೊಂಡ, ಶಿವಯೋಗಿ ಗಡಾದವರ, ವೆಂಕಟೇಶ ಭಜಂತ್ರಿ, ಅದ್ದಣ್ಣ ಕುಂಬಾರ, ಗೌರಮ್ಮ ಎಂ., ಭಾರತಿ ಕೆ., ಸೇರಿದಂತೆ ನೂರಾರು ನೌಕರರು ಪಾಲ್ಗೊಂಡಿದ್ದರು. ಬಾಕ್ಸ್
    ಸಮಿತಿ ರಚನೆ, ಪ್ರತಿ ತಿಂಗಳು ಸಭೆ
    ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಮಸ್ಯೆಗಳ ಈಡೇರಿಕೆಗೆ ಸಮಿತಿ ರಚಿಸುತ್ತೇವೆ. ಪ್ರತಿ ತಿಂಗಳು ಮೂರನೇ ಶನಿವಾರ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ , ಎಸ್‌ಸಿ ಎಸ್‌ಟಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಂಘದ ಮುಖಂಡರ ಸಭೆ ನಡೆಸಲಾಗುವುದು. ಆ ಸಭೆ ಮೂಲಕ ನಿಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಲು ಸೂಚಿಸುತ್ತೇನೆ ಎಂದು ಜಿಪಂ ಸಿಇಒ ಅಕ್ಷಯ ಶ್ರೀಧರ ಅವರು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts