More

    ಅತಿವೃಷ್ಟಿ ಹಾನಿ ತಡೆಗಾಗಿ ವಾಟ್ಸ್ ಆ್ಯಪ್ ಗ್ರೂಪ್ ರಚಿಸಿ; ಕಾಲಕಾಲಕ್ಕೆ ಪಂಚಾಯಿತಿವಾರು ಮಾಹಿತಿ ರವಾನಿಸಿ; ಡಿಸಿ ಸೂಚನೆ

    ಹಾವೇರಿ: ಅತಿವೃಷ್ಟಿ ಹಾಗೂ ಪ್ರವಾಹದ ಹಾನಿಯನ್ನು ತಗ್ಗಿಸುವ ನಿಟ್ಟಿನಲ್ಲಿ ಹವಾಮಾನ ಆಧಾರಿತ ಮುನ್ಸೂಚನೆಗಳನ್ನು ಗ್ರಾಮಸ್ಥರಿಗೆ ತಲುಪಸಿ, ಹಾನಿಯನ್ನು ತಡೆಯುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿವಾರು ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿ ಹಾಗೂ ಸಿಬ್ಬಂದಿ ಒಳಗೊಂಡ ವಾಟ್ಸ್ ಆ್ಯಪ್ ಗ್ರೂಪ್ ರಚಿಸಿ, ಕಾಲಕಾಲಕ್ಕೆ ಮಾಹಿತಿ ರವಾನಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚಿಸಿದರು.
    ಬುಧವಾರ ಸಂಜೆ ಮುಖ್ಯಮಂತ್ರಿಯವರೊಂದಿಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡ ಬಳಿಕ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಡಿಸಿ ಅಧಿಕಾರಿಗಳ ಸಭೆ ನಡೆಸಿದರು. ಅತಿವೃಷ್ಟಿಯಿಂದ ಸೋರಿಕೆಯಾಗುವ ಸರ್ಕಾರಿ ಕಚೇರಿಗಳು, ಸಾರ್ವಜನಿಕ ತಂಗುದಾಣ, ಅಂಗನವಾಡಿ, ಶಾಲೆ ಹಾಗೂ ಕಾಲೇಜು ಕಟ್ಟಡಗಳನ್ನು ಪರಿಶೀಲಿಸಬೇಕು. ತಾತ್ಕಾಲಿಕವಾಗಿ ಸೋರಿಕೆ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
    ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಕಚೇರಿಗಳು, ಶಾಲಾ-ಕಾಲೇಜು, ಆಸ್ಪತ್ರೆ ಕಟ್ಟಡಗಳ ಮೇಲ್ಛಾವಣಿಯ ಮೇಲೆ ಕಸ ತೆರವುಗೊಳಿಸಬೇಕು. ಪೈಪ್‌ಲೈನ್‌ಗಳನ್ನು ಸ್ವಚ್ಛಗೊಳಿಸಿ ಮಳೆ ನೀರು ಕಟ್ಟಡದ ಮೇಲ್ಛಾವಣಿ ಮೇಲೆ ನಿಲ್ಲದಂತೆ ಕೈಗೊಂಡ ಕ್ರಮದ ಬಗ್ಗೆ ತಕ್ಷಣ ವರದಿ ಸಲ್ಲಿಸುವಂತೆ ಸೂಚಿಸಿದರು.
    ಜಿಲ್ಲೆಯಲ್ಲಿ ಕೆಳಸೇತುವೆ ಸಂಚಾರದಲ್ಲಿ ಮಳೆ ನೀರು ನಿಲ್ಲುವ ಜಾಗಗಳನ್ನು ಗುರುತಿಸಬೇಕು ಹಾಗೂ ಪ್ರವಾಹ, ಹಳ್ಳ ಹಾಗೂ ತಗ್ಗು ಪ್ರದೇಶದಲ್ಲಿ ಸಂಪರ್ಕ ರಸ್ತೆಗೆ ನೀರು ನಿಂತಾಗ ಪರ್ಯಾಯ ರಸ್ತೆ ಮಾರ್ಗಗಳ ಗುರುತಿಸುವ ಜತೆಗೆ ಅಂಡರ್‌ಪಾಸ್ ನೀರನ್ನು ತಕ್ಷಣ ಕ್ಲಿಯರ್ ಮಾಡಲು ಕ್ರಮವಹಿಸುವಂತೆ ಸೂಚನೆ ನೀಡಿದರು.
    ಸತತವಾಗಿ ಕಳೆದ ಮೂರ್ನಾಲ್ಕು ವರ್ಷದಿಂದ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದು, ಬ್ಯಾರೇಜ್‌ಗಳು ತುಂಬಿ ರಸ್ತೆಗೆ ನೀರು ಹರಿಯುವ ಜಾಗೆಗಳನ್ನು ಗುರುತಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ನದಿ ಪಾತ್ರದ ತಗ್ಗು ಪ್ರದೇಶಗಳ ಜನರಿಗೆ ಅಪಾಯದ ಮುನ್ಸೂಚನೆ ನೀಡಿ ಸುರಕ್ಷತೆಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.
    ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರರು ಉಪಸ್ಥಿತರಿದ್ದರು. ಬಾಕ್ಸ್
    ಸೋರುವ ಕೊಠಡಿಯಲ್ಲಿ ತರಗತಿ ಬೇಡ
    ಮಳೆಯಿಂದ ಸೋರುತ್ತಿರುವ ಅಂಗನವಾಡಿ, ಶಾಲಾ-ಕಾಲೇಜು ಕೊಠಡಿಗಳಲ್ಲಿ ಹಾಗೂ ಶಿಥಿಲಗೊಂಡ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸಬಾರದು. ಸುಸ್ಥಿತಿಯಲ್ಲಿರುವ ಕೊಠಡಿಗಳಲ್ಲಿ ಮಾತ್ರ ತರಗತಿಗಳನ್ನು ನಡೆಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ ಆರೋಗ್ಯ ಅಧಿಕಾರಿಗಳಿಂದ ಈ ಕುರಿತಂತೆ ವರದಿಗಳನ್ನು ತರಿಸಿಕೊಂಡು ಆಯಾ ಜಿಲ್ಲಾ ಮಟ್ಟದ ಅಧಿಕಾರಿಗಳು ಕೊಠಡಿಗಳ ಸುಸ್ಥಿತಿ ಕುರಿತಂತೆ ವರದಿ ಸಲ್ಲಿಸುವಂತೆ ಡಿಸಿ ಸೂಚಿಸಿದರು.
    ತಕ್ಷಣ ಪರಿಹಾರ ಕೊಡಿ
    ಮನೆಹಾನಿ ಕುರಿತಾಗಿ ಸಾರ್ವಜನಿಕ ಅರ್ಜಿಗಳನ್ನು ಸ್ವೀಕರಿಸಿ ತಕ್ಷಣ ಸಮಿತಿಯಿಂದ ಪರಿಶೀಲನೆ ನಡೆಸಿ, ವಿಲೇವಾರಿ ಮಾಡಬೇಕು. ಜೀವಹಾನಿ, ಜಾನುವಾರು ಹಾನಿ ಪ್ರಕರಣಗಳಲ್ಲಿ ತ್ವರಿತವಾಗಿ ಪರಿಹಾರಕ್ಕೆ ಕ್ರಮ ವಹಿಸಬೇಕು. ಬೆಳೆಹಾನಿ ಪ್ರದೇಶಕ್ಕೆ ತಕ್ಷಣ ಭೇಟಿ ನೀಡಿ ವರದಿಮಾಡಬೇಕು ಎಂದು ಡಿಸಿ ರಘುನಂದನ ಮೂರ್ತಿ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts