More

    85 ವರ್ಷ ಮೇಲ್ಪಟ್ಟರು, ಅಂಗವಿಕಲರಿಗೆ ಮನೆಯಿಂದಲೇ ಮತದಾನದ ವ್ಯವಸ್ಥೆ

    ಹಾವೇರಿ: ಲೋಕಸಭಾ ಸಾರ್ವತ್ರಿಕ ಚುನಾಚಣೆ ಹಿನ್ನೆಲೆಯಲ್ಲಿ ಜಿಲ್ಲೆಯ 6 ವಿಧಾನಸಭೆ ಕ್ಷೇತ್ರಗಳಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ಶೇ. 40ರಷ್ಟು ವಿಕಲತೆ ಹೊಂದಿದ ಅಂಗವಿಕಲರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಮಾಹಿತಿ ನೀಡಿ 12ಡಿ ನಮೂನೆ ವಿತರಣೆ ಮಾಡುವಂತೆ ಜಿಪಂ ಉಪ ಕಾರ್ಯದರ್ಶಿ ಹಾಗೂ ನೋಡಲ್ ಅಧಿಕಾರಿ ಸೋಮಶೇಖರ ಮುಳ್ಳಳ್ಳಿ, ಬಿ.ಎಲ್.ಗಳಿಗೆ ಸೂಚಿಸಿದರು.
    ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರವಾರು ಬೂತ್ ಲೇವಲ್ ಅಧಿಕಾರಿಗಳಿಗಾಗಿ ಏರ್ಪಡಿಸಿದ್ದ ಮೊಬೈಲ್ ಆಪ್ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
    ಮೊಬೈಲ್ ಆಪ್ ಮೂಲಕ ಮಾಹಿತಿ ಇಂಧೀಕರಿಸಲು ತರಬೇತಿ ನೀಡಲಾಗಿದೆ. ವಿವಿಧ ಕಾರಣಗಳಿಂದ ಮತಗಟ್ಟೆಯಲ್ಲಿ ದೈಹಿಕವಾಗಿ ಮತಚಲಾಯಿಸಲು ಸಾಧ್ಯವಾಗದಿರುವಂತಹ ಮತದಾರರಿಗೆ ಮತಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಇಂತಹ ಮತದಾರರಿಗೆ ಗೈರು ಹಾಜರಿ ಮತದಾರರು ಎಂದು ಪರಿಗಣಿಸಲಾಗುವುದು ಎಂದರು.
    ಮತದಾರರ ವಿವರ…
    ಹಾನಗಲ್ಲ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 3912 ಮತದಾರರು ಹಾಗೂ 3,823 ಅಂಗವಿಕಲ ಮತದಾರರು ಸೇರಿ 7735 ಮತದಾರರಿದ್ದಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 2,828 ಹಾಗೂ ಹಾಗೂ 4985 ಅಂಗವಿಕಲ ಸೇರಿ 7813 ಮತದಾರರಿದ್ದಾರೆ.
    ಹಾವೇರಿ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 2598 ಹಾಗೂ 3425 ಅಂಗವಿಕಲ ಸೇರಿ 6023 ಮತದಾರರಿದ್ದಾರೆ. ಬ್ಯಾಡಗಿಯಲ್ಲಿ 85 ವರ್ಷ ಮೇಲ್ಪಟ್ಟ 1750 ಹಾಗೂ 5129 ಅಂಗವಿಕಲ ಸೇರಿ 6,879 ಮತದಾರರಿದ್ದಾರೆ. ಹಿರೇಕೆರೂರಿನಲ್ಲಿ 85 ವರ್ಷ ಮೇಲ್ಪಟ್ಟ 1,650 ಹಾಗೂ 3440 ಅಂಗವಿಕಲ ಸೇರಿ 5090 ಮತದಾರರು ಹಾಗೂ ರಾಣೆಬೆನ್ನೂರಿನಲ್ಲಿ 85 ವರ್ಷ ಮೇಲ್ಪಟ್ಟ 1,200 ಹಾಗೂ 2964 ಅಂಗವಿಕಲ ಸೇರಿ 4164 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 85 ವರ್ಷ ಮೇಲ್ಪಟ್ಟ 13,938 ಮತದಾರರು ಹಾಗೂ 23,766 ಅಂಗವಿಕಲರು ಸೇರಿ ಒಟ್ಟು 37,704 ಮತದಾರರಿದ್ದಾರೆ.
    ಚುನಾವಣಾ ಆಯೋಗವು ಅಗತ್ಯ ತಿದ್ದುಪಡಿ ಮಾಡಿ ಹಿರಿಯ ನಾಗರಿಕರ ವಯಸ್ಸು 80ರ ಬದಲಾಗಿ 85 ವರ್ಷ ಮೇಲ್ಪಟ್ಟು ಹಿರಿಯ ನಾಗರಿಕರಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ಬಾಧಿತರು ಸರ್ಕಾರಿ ವೈದ್ಯಾಧಿಕಾರಿಯಿಂದ ದೃಡೀಕರಣದೊಂದಿಗೆ ನಮೂನೆ-12 ಡಿ ಅಡಿಯಲ್ಲಿ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
    ಮತದಾರರ ಪಟ್ಟಿಯ ಸಂಬಂಧಿತ ಭಾಗದಲ್ಲಿರುವ ಮತದಾರರ ಕ್ರಮ ಸಂಖ್ಯೆಯನ್ನು ಈ ಮತಪತ್ರದ ಪಕ್ಕಾ ಪ್ರತಿಯಲ್ಲಿ ನಮೂದಿಸಬೇಕು. ಅದೇ ವೇಳೆಗೆ ರಿಟನಿರ್ಂಗ್ ಅಧಿಕಾರಿಯು ಮತದಾರರ ಪಟ್ಟಿಯ ಗುರುತು ಮಾಡಿದ ಪ್ರತಿಯಲ್ಲಿ ಮತದಾರರಿಗೆ ಅಂಚೆ ಮತಪತ್ರವನ್ನು ನೀಡಲಾಗಿದೆ ಮತ್ತು ಮತಗಟ್ಟೆಯಲ್ಲಿ ಮತ ಚಲಾಯಿಸಲು ಅನುಮತಿಸುವುದಿಲ್ಲ ಎಂಬುದನ್ನು ಸೂಚಿಸಲು ಮತದಾರರ ಹೆಸರಿನ ಮುಂದೆ ಪಿಬಿ ಎಂದು ಗುರುತಿಸಬೇಕು ಎಂದು ಹೇಳಿದರು.
    ಗುರುತಿಸಿದ ಮತದಾರರ ಪಟ್ಟಿಯನ್ನು ಮತದಾನ ದಿನದಂದು ಪ್ರಿಸೈಡಿಂಗ್ ಅಧಿಕಾರಿಗೆ ನೀಡಬೇಕು. ಅಂಚೆ ಮತಪತ್ರ ಮತ್ತು ಲಕೋಟೆ ಬಣ್ಣವು ಬಿಳಿ ಬಣ್ಣದಿಂದ ಇರುತ್ತದೆ. ಒಮ್ಮೆ ಅಂಚೆಪತ್ರ ನೀಡಿದರೆ, ಮತಗಟ್ಟೆಯಲ್ಲಿ ಮತದಾನ ಮಾಡುವ ಆಯ್ಕೆಯು ಅವರಿಗೆ ಇರುವುದಿಲ್ಲ ಎಂದು ತಿಳಿಸಿದರು.
    ಉಪ ವಿಭಾಗಾಧಿಕಾರಿ ಚನ್ನಪ್ಪ, 6 ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಅಣ್ಣಪ್ಪ ಹೆಗಡೆ, ಜಿ.ಪಂ. ಅಧೀಕ್ಷಕ ಐ.ಎಂ. ಮುಲ್ಲಾ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts