More

    ಹಿಟ್ ಆ್ಯಂಡ್ ರನ್ ಕಾನೂನು ಹಿಂಪಡೆಯದಿದ್ದರೆ ಮುಷ್ಕರ; ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಅವಿನಾಶ ಎಸ್.ಪಿ. ಹೇಳಿಕೆ

    ಹಾವೇರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಟ್ ಆ್ಯಂಡ್ ರನ್ ಕಾನೂನಿನಲ್ಲಿ ತಿದ್ದುಪಡಿ ತಂದಿರುವುದರಿಂದ ಬಡ ಚಾಲಕರ ಬದುಕು ಬೀದಿಗೆ ಬರುತ್ತದೆ. ಹಾಗಾಗಿ, ಈ ಕೂಡಲೇ ಕಾನೂನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಷ್ಕರ ಆರಂಭಿಸಲಾಗುವುದು ಎಂದು ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಅವಿನಾಶ ಎಸ್.ಪಿ. ಎಚ್ಚರಿಕೆ ನೀಡಿದರು. ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಕಾನೂನು ಪ್ರಕಾರ, ರಸ್ತೆಯಲ್ಲಿ ಚಲಿಸುವಾಗ ನಮ್ಮ ವಾಹನಗಳಿಗೆ ಯಾರಾದರೂ ಬಂದು ಅಕಸ್ಮಾತಾಗಿ ಡಿಕ್ಕಿ ಹೊಡೆದರೆ ಹಾಗೂ ನಮ್ಮ ಚಾಲಕರು ವಾಹನದಲ್ಲಿ ಏನಾದರೂ ತೊಂದರೆ ಉಂಟಾಗಿ ಎದುರಿನ ವಾಹನಕ್ಕೆ ಡಿಕ್ಕಿ ಹೊಡೆದು ಅದರಲ್ಲಿದ್ದ ಪ್ರಯಾಣಿಕರು ಮೃತಪಟ್ಟರೆ, ಚಾಲಕರನ್ನು 10 ವರ್ಷಗಳ ವರೆಗೆ ಜೈಲು ಶಿಕ್ಷೆಗೆ ಗುರಿಪಡಿಸುವುದು ಹಾಗೂ 7 ಲಕ್ಷ ರೂ.ವರೆಗೆ ದಂಡ ಪಾವತಿಸಬೇಕಾಗುತ್ತದೆ ಎಂದರು.
    ತಿಂಗಳು ಪೂರ್ತಿ ದುಡಿದರೂ ಕುಟುಂಬಕ್ಕೆ ಸಾಲುವಷ್ಟು ಸಂಬಳ ಸಿಗದೇ ಸಂಕಷ್ಟದಲ್ಲಿರುವ ಬಡ ಚಾಲಕರಿಗೆ ಈ ಕಾನೂನು ಮಾರಕವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಚಾಲಕರ ಪಾತ್ರ ಮುಖ್ಯವಾದದ್ದು. ಕೇವಲ ಎಂಟು ದಿನ ಎಲ್ಲ ವಾಹನ ನಿಲ್ಲಿಸಿ ಮುಷ್ಕರ ನಡೆಸಿದರೆ ದೇಶ ಅಲ್ಲೋಲ ಕಲ್ಲೋಲ ಆಗುತ್ತದೆ. ಹಾಗಾಗಿ, ಇದನ್ನು ಗಂಭೀರವಾಗಿ ಪರಿಗಣಿಸಿ, ಕಾನೂನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ರಾಜ್ಯ ಘಟಕ ಕರೆ ನೀಡಿದ ಕೂಡಲೇ ಜಿಲ್ಲೆಯಲ್ಲೂ ಪ್ರಯಾಣಿಕ, ಗೂಡ್ಸ್ ಸೇರಿದಂತೆ ಎಲ್ಲ ವಾಹನಗಳ ಚಾಲಕರು ಕೆಲಸ ಬಂದ್ ಮಾಡಿ ಮುಷ್ಕರ ಆರಂಭಿಸುತ್ತೇವೆ ಎಂದು ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಶೇಖರ ಮಲಗುಂದ, ಪ್ರಕಾಶ ಗುಡಿಸಾಗರ, ಜಿಲ್ಲಾ ಕಾರ್ಯಾಧ್ಯಕ್ಷ ಫಕ್ಕೀರೇಶ ನೀರಲಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಗೌಳಿ, ಹಾವೇರಿ ತಾಲೂಕು ಅಧ್ಯಕ್ಷ ಧರ್ಮಣ್ಣ ಉಪ್ಪಾರ, ಸವಣೂರ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸಿಂಧಗಿ, ಮುಜಾಹಿದ್ ಎಂ., ಇತರರಿದ್ದರು.

    ಆರ್‌ಟಿಒ ಕಚೇರಿಯಲ್ಲಿ ಹಿಟ್ಲರ್ !
    ನಗರದ ಆರ್‌ಟಿಒ ಕಚೇರಿಯಲ್ಲಿ ಬ್ರೇಕ್ ಇನ್‌ಸ್ಪೆಕ್ಟರ್‌ವೊಬ್ಬರು ಹಿಟ್ಲರ್ ಆಡಳಿತ ನಡೆಸುತ್ತಿದ್ದಾರೆ. ಇವರೊಂದಿಗೆ ಇರುವ ಚಾಲಕನ ಮೂಲಕ ಫಿಟ್ನೆಸ್ ಸರ್ಟಿಫಿಕೇಟ್ ಸೇರಿದಂತೆ ಪ್ರತಿಯೊಂದು ಕೆಸಲಕ್ಕೂ ಲಂಚ ವಸೂಲಿ ಮಾಡುತ್ತಾರೆ. ರಿಫ್ಲೆಕ್ಟರ್‌ಗೆ ಹೆಚ್ಚುವರಿ ಹಣ ಸುಲಿಗೆ ಮಾಡುತ್ತಾರೆ. 10, 20 ವರ್ಷಗಳಿಂದ ಇಲ್ಲೇ ಬೇರು ಬಿಟ್ಟಿರುವ ಈ ಅಧಿಕಾರಿ ಆರ್‌ಟಿಒ ಅವರ ಮಾತಿಗೂ ಬೆಲೆ ಕೊಡುವುದಿಲ್ಲ. ಬ್ರೇಕ್ ಇನ್‌ಸ್ಪೆಕ್ಟರ್ ಮತ್ತು ಆ ಚಾಲಕನ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವಿನಾಶ ಎಸ್.ಪಿ. ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts