More

    ರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಡಿಸಿ ಸೂಚನೆ; ‘ಕನ್ನಡಾಂಬೆಗೆ ನುಡಿ ನಮನ’ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ

    ಹಾವೇರಿ: ಜಿಲ್ಲಾಡಳಿತದ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ರಾಜ್ಯ ನಾಮಕರಣದ 50ನೇ ಸಂಭ್ರಮಾಚರಣೆಯನ್ನು ನ.1ರಂದು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ ನೀಡಿದರು.
    ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಧಕರಿಗೆ ಸನ್ಮಾನ, ಸ್ಥಬ್ದಚಿತ್ರಗಳ ಮೆರವಣಿಗೆ, ವೇದಿಕೆ ನಿರ್ಮಾಣ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕನ್ನಡಪರ ಗೀತಗಾಯನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಿದರು.
    ನವಂಬರ್ 1, 1973ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿದ್ದು, ಇದೀಗ 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮ 50 ಕಾರ್ಯಕ್ರಮವನ್ನು ವರ್ಷಾಂತ್ಯದವರೆಗೆ ಆಯೋಜಿಸಲು ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ನ.1ರಂದು ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ಕನ್ನಡಾಂಬೆಗೆ ನುಡಿ ನಮನ’ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ನುರಿತ ಕಲಾತಂಡಗಳಿಂದ ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಕುವೆಂಪು ಅವರ ‘ಎಲ್ಲಾದರು ಇರು ಎಂತಾದರು ಇರು..’, ದ.ರಾ.ಬೇಂದ್ರ ಅವರ ‘ಒಂದೇ ಒಂದೇ ಕರ್ನಾಟಕ ಒಂದೇ..’, ಸಿದ್ದಯ್ಯ ಪುರಾಣಿಕ ಅವರ ‘ಹೊತ್ತಿತ್ತೋ ಹೊತ್ತಿತು ಕನ್ನಡ ದೀಪ..’ ಹಾಗೂ ಚನ್ನವೀರ ಕಣವಿ ಅವರ ‘ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ..’ ಗೀತಗಾಯನ ಆಯೋಜಿಸಲು ಸೂಚಿಸಿದರು.
    ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘನೆಗಳ ಮುಖಂಡರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts