More

    ಜಿಲ್ಲೆಯ ಹಲವೆಡೆ ವಾಟರ್ ಟ್ಯಾಂಕರ್ ಹಾವಳಿ !; 500 ರೂ.ನಿಂದ 900 ರೂ.ವರೆಗೆ ಸುಲಿಗೆ; ಮಾಫಿಯಾ ನಿಯಂತ್ರಿಸಬೇಕಿದೆ ಜಿಲ್ಲಾಡಳಿತ

    ಕೇಶವಮೂರ್ತಿ ವಿ.ಬಿ. ಹಾವೇರಿ
    ಬರಗಾಲದ ಬೇಗೆಯಲ್ಲಿ ನೊಂದು ಬೆಂದಿರುವ ಜಿಲ್ಲೆಯ ಜನತೆಗೆ ಈಗ ಟ್ಯಾಂಕರ್ ಮಾಫಿಯಾ ಕಾಟ ಶುರುವಾಗಿದೆ. ಸ್ಥಳೀಯ ಆಡಳಿತಗಳು ಸಮರ್ಪಕವಾಗಿ ಕುಡಿಯುವ ನೀರು ಪೂರೈಸದ ಹಿನ್ನೆಲೆಯಲ್ಲಿ ಜನ ಅನಿವಾರ್ಯವಾಗಿ ಟ್ಯಾಂಕರ್ ಮೊರೆ ಹೋಗುವಂತೆ ಕೃತಕ ಅಭಾವ ಸೃಷ್ಟಿಸಲಾಗಿದೆ.
    ಕಳೆದ ವರ್ಷ ಮಳೆಯ ತೀವ್ರ ಕೊರತೆ ಹಿನ್ನೆಲೆಯಲ್ಲಿ ನದಿ, ಕೆರೆ, ಕಟ್ಟೆಗಳ ಒಡಲು ಬರಿದಾಗಿವೆ. ಇದರಿಂದಾಗಿ ಸಮರ್ಪಕವಾಗಿ ನೀರು ಪೂರೈಸಲು ನಗರ ಹಾಗೂ ಗ್ರಾಮೀಣ ಪ್ರದೇಶದ ಸ್ಥಳೀಯ ಆಡಳಿತ ಸಂಸ್ಥೆಗಳು ಹರಸಾಹಸ ಪಡುತ್ತಿವೆ. ಸ್ವಂತ ಬೋರ್‌ವೆಲ್ ಹಾಗೂ ಖಾಸಗಿ ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡುವ ಕುರಿತು ಹೇಳುತ್ತಿದ್ದರೂ ಪರಿಣಾಮಕಾರಿಯಾಗಿ ಪೂರೈಕೆ ಮಾಡಲಾಗುತ್ತಿಲ್ಲ.
    ಪರಿಣಾಮ ಜಿಲ್ಲಾ ಕೇಂದ್ರ ಹಾವೇರಿ ಸೇರಿದಂತೆ ರಾಣೆಬೆನ್ನೂರ, ಶಿಗ್ಗಾಂವಿ, ಸವಣೂರ, ಹಾನಗಲ್ಲ, ಮತ್ತಿತರ ನಗರ ಹಾಗೂ ಗ್ರಾಮಗಳಲ್ಲಿ ಜನರಿಗೆ ಟ್ಯಾಂಕರ್ ನೀರೇ ಗತಿ ಎನ್ನುವಂತಾಗಿದೆ. ಜಿಲ್ಲಾ ಕೇಂದ್ರ ಹಾವೇರಿ, ಸವಣೂರ ಸೇರಿದಂತೆ ವಿವಿಧೆಡೆ 15, 20, 25 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ನಾಲ್ಕೈದು ದಿನಕ್ಕೆ ನೀರು ಖಾಲಿಯಾಗುತ್ತದೆ.
    ಇದನ್ನೇ ಬಂಡವಾಳ ಮಾಡಿಕೊಂಡ ಟ್ಯಾಂಕರ್ ಮಾಲೀಕರು ಮನಬಂದಂತೆ ಬೆಲೆ ನಿಗದಿಪಡಿಸುತ್ತಿದ್ದಾರೆ. ಒಂದು ಟ್ಯಾಂಕರ್ ನೀರಿಗೆ 500 ರೂ.ನಿಂದ 800, 900 ರೂ.ವರೆಗೆ ಸುಲಿಗೆ ಮಾಡುತ್ತಿದ್ದಾರೆ. ನಗರದಿಂದ ಹೊರವಲಯದಲ್ಲಿ ಮನೆ ಇದ್ದರಂತೂ ದುಪ್ಪಟ್ಟು ಬೆಲೆ ಎನ್ನುತ್ತಾರೆ. ಹಾವೇರಿಗಂತೂ ಪಕ್ಕದ ಜಿಲ್ಲೆ ಲಕ್ಷ್ಮೇಶ್ವರ, ಶಿರಹಟ್ಟಿಯಿಂದಲೂ ಟ್ಯಾಂಕರ್‌ಗಳು ಲಗ್ಗೆ ಇಟ್ಟಿವೆ.
    ಟ್ಯಾಂಕರ್ ಮಾಫಿಯಾ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಗಮನಹರಿಸಬೇಕಿದೆ. ಬಡವರು, ಕೂಲಿಕಾರರಿಗೆ ದುಡ್ಡು ಕೊಟ್ಟು ನೀರು ತೆಗೆದುಕೊಳ್ಳಲು ಆಗುವುದಿಲ್ಲ. ಹಾಗಾಗಿ, ಎಲ್ಲ ಟ್ಯಾಂಕರ್ ಮಾಲೀಕರನ್ನು ನಿಯಂತ್ರಿಸಿ, ಕಡಿಮೆ ಬೆಲೆಗೆ ಹಾಗೂ ಉಚಿತವಾಗಿ ನೀರು ಸಿಗುವಂತೆ ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

    ದರ ನಿಗದಿಪಡಿಸಲಿ
    ಜಿಲ್ಲಾಡಳಿತ ಈ ಕೂಡಲೇ ಖಾಸಗಿ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆಯಬೇಕು. ಸರ್ಕಾರದಿಂದಲೇ ನಿರ್ದಿಷ್ಟ ಬೆಲೆ ನಿಗದಿಪಡಿಸಬೇಕು. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳ ಮೂಲಕ ಅಗತ್ಯವಿದ್ದಲ್ಲಿ ನೀರು ಪೂರೈಸುವ ವ್ಯವಸ್ಥೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ತಿಂಗಳಿಗೆ ನಾಲ್ಕು ಸಾವಿರ ಖರ್ಚು !
    ಹಲವೆಡೆ ಬೋರ್‌ವೆಲ್‌ಗಳು ಬತ್ತಿದ ಪರಿಣಾಮ ಹಲವು ಮನೆಯವರು ಟ್ಯಾಂಕರ್ ನಿರನ್ನೇ ನೆಚ್ಚಿಕೊಂಡಿದ್ದಾರೆ. ಮೂರು, ನಾಲ್ಕು ಮನೆಗಳಿರುವ ಒಂದು ಕಟ್ಟಡಕ್ಕೆ ವಾರಕ್ಕೆ ಕನಿಷ್ಠ ಎರಡು ಟ್ಯಾಂಕರ್ ನೀರು ಬೇಕಾಗುತ್ತದೆ. ತಿಂಗಳಿಗೆ ಎಂಟು ಟ್ಯಾಂಕರ್ ಬೇಕು. ಒಂದು ಟ್ಯಾಂಕರ್‌ಗೆ 500 ರೂ. ಹಿಡಿದರೂ ಎಂಟು ಟ್ಯಾಂಕರ್‌ಗೆ ನಾಲ್ಕು ಸಾವಿರ ರೂ. ಬೇಕಾಗುತ್ತದೆ. ನೀರಿಗೇ ಇಷ್ಟೊಂದು ಹಣ ಕೊಟ್ಟರೆ ಜೀವನ ಮಾಡುವುದು ಹೇಗೆ ಎಂಬ ಪ್ರಶ್ನೆ ಜನರಲ್ಲಿ ಮೂಡುತ್ತಿದೆ.

    ಕೋಟ್:
    ನಗರಸಭೆಯಿಂದ ಪ್ರತಿ ತಿಂಗಳು ನೀರಿನ ಕರ ಪಾವತಿಸಲಾಗುತ್ತದೆ. ನೀರು ಪೂರೈಸುವುದು ಅವರ ಕರ್ತವ್ಯ. ಹಾಗಾಗಿ, ನಗರಸಭೆಯಿಂದಲೇ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆಯನ್ನು ಮಾಡಬೇಕು. ಖಾಸಗಿ ಟ್ಯಾಂಕರ್‌ಗಳಿಗೆ ಜಿಲ್ಲಾಡಳಿತವೇ ದರ ನಿಗದಿಪಡಿಸಬೇಕು.
    – ಸತೀಶ ಮಡಿವಾಳರ, ಹಾವೇರಿ ನಿವಾಸಿ

    ಕೋಟ್:
    ನೀರಿನ ಟ್ಯಾಂಕರ್‌ಗಳಿಗೆ ಸರ್ಕಾರದಿಂದಲೇ ದರ ನಿಗದಿಪಡಿಸುವ ಮಾನದಂಡಗಳ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರದಿಂದ ಪ್ರತಿಕ್ರಿಯೆ ಸಿಕ್ಕ ಕೂಡಲೇ ನಿರ್ಧರಿಸಲಾಗುವುದು. ಸ್ಥಳೀಯ ಸಂಸ್ಥೆಗಳಿಂದ ಟ್ಯಾಂಕರ್ ಪೂರೈಸುವ ಕುರಿತು ಚರ್ಚಿಸಿ ತೀರ್ಮಾನಿಸಲಾಗುವುದು.
    – ರಘುನಂದನ ಮೂರ್ತಿ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts