More

  ಬಡ್ಡಿ ಸಮೇತ ವೈದ್ಯಕೀಯ ಚಿಕಿತ್ಸಾ ವೆಚ್ಚ ಪಾವತಿಸಿ; ಇನ್ಸೂರನ್ಸ್ ಕಂಪನಿಗೆ ಗ್ರಾಹಕರ ಆಯೋಗ ಸೂಚನೆ

  ಹಾವೇರಿ: ವಿಮೆ ಮಾಡಿಸಿದ ವ್ಯಕ್ತಿಯ ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ಬಡ್ಡಿ ಸಮೇತ 30 ದಿನದೊಳಗಾಗಿ ಪಾವತಿಸುವಂತೆ ಮುಂಬೈ ಮೂಲದ ಲೈಫ್ ಇನ್ಸೂರೆನ್ಸ್ ಕಂಪನಿಯೊಂದಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.
  ರಾಣೇಬೆನ್ನೂರ ನಿವಾಸಿ ಸತೀಶ ವಸಂತ ಜೋಶಿ ಮುಂಬೈ ಮೂಲದ ಇನ್ಸೂರೆನ್ಸ್ ಕಂಪನಿಯೊಂದರಲ್ಲಿ 5 ಲಕ್ಷ ರೂ. ಮೌಲ್ಯದ ತೀವ್ರ ಅನಾರೋಗ್ಯ ವಿಮಾ ಪಾಲಿಸಿಯನ್ನು ಏಪ್ರಿಲ್ 6, 2016ರಂದು ಮಾಡಿಸಿದ್ದರು. ಆಕಸ್ಮಿಕವಾಗಿ ಹೃದಯ ರೋಗಕ್ಕೆ ತುತ್ತಾಗಿ ಏಪ್ರಿಲ್ 17, 2021ರಂದು ದಾವಣಗೆರೆಯ ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್‌ಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
  ಆಗ ವೈದ್ಯರು ನಿಮಗೆ ಸಿಂಗಲ್ ವೆಸ್ಸೆಲ್ ಡಿಸೀಸ್ ಇದೆ ಎಂದು ಹೇಳಿದ್ದರು. ಪಾಲಿಸಿಯ ಷರತ್ತಿನ ಪ್ರಕಾರ ಚಿಕಿತ್ಸೆಯ ಮೊತ್ತ ಪರಿಹಾರ ಪಡೆಯಲು ಅರ್ಹರಾಗಿದ್ದರಿಂದ ಕಂಪನಿಗೆ ದಾಖಲೆಗಳನ್ನ ಸಲ್ಲಿಸಿ, ಮೊತ್ತ ಪಾವತಿಸಲು ಕೇಳಿಕೊಂಡಿದ್ದರು. ಆದರೂ ಇನ್ಸೂರನ್ಸ್ ಕಂಪನಿ ಪಾಲಿಸಿ ಹಣ ನೀಡುವುದನ್ನು ಮುಂದೂಡುತ್ತಾ ಬಂದ ಕಾರಣ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಸತೀಶ ದೂರು ದಾಖಲಿಸಿದ್ದರು.
  ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಬಿ.ಎಸ್.ಈಶ್ವರಪ್ಪ ಹಾಗೂ ಮಹಿಳಾ ಸದಸ್ಯೆ ಉಮಾದೇವಿ ಹಿರೇಮಠ ನೇತೃತ್ವದ ತಂಡ, ಆಸ್ಪತ್ರೆಗೆ ಪಾವತಿಸಿದ 2,55,161 ರೂ.ಯನ್ನು ಶೇ.6ರ ಬಡ್ಡಿಯೊಂದಿಗೆ 30 ದಿನದೊಳಗಾಗಿ ಹಾಗೂ ದಾವಾ ವೆಚ್ಚ ಮೂರು ಸಾವಿರ ರೂ. ಪಾವತಿಸಲು ಆದೇಶಿಸಿದೆ. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.9ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts