More

    ಹೆಚ್ಚುವರಿ ಬಸ್ ಟ್ರಿಪ್ ಕಾರ್ಯಾಚರಣೆ; ಫುಟ್‌ಬೋರ್ಡ್ ಮೇಲೆ ನಿಲ್ಲದಂತೆ ಸಾರಿಗೆ ಡಿಸಿ ನಿರ್ದೇಶನ; ವಿಜಯವಾಣಿ ವರದಿ ಪರಿಣಾಮ

    ಹಾವೇರಿ: ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರು ಫುಟ್ ಬೋರ್ಡ್ ಮೇಲೆ ನಿಂತು ಹರಸಾಹಸ ಮಾಡುವುದನ್ನು ತಪ್ಪಿಸಲು ಜಿಲ್ಲೆಯ ವಿವಿಧೆಡೆ ಹೆಚ್ಚುವರಿ ಬಸ್ ಟ್ರಿಪ್ ಕಾರ್ಯಾಚರಣೆ ಆರಂಭಿಸಲಾಗಿದೆ. ಫುಟ್ ಬೋರ್ಡ್ ಮೇಲೆ ನಿಲ್ಲದಂತೆ ಎಚ್ಚರ ವಹಿಸುವಂತೆ ಸಾರಿಗೆ ಇಲಾಖೆ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಮರಿದೇವರಮಠ ಸಿಬ್ಬಂದಿಗೆ ಸೂಚಿಸಿದ್ದಾರೆ.
    ಫುಟ್‌ಬೋರ್ಡ್ ಮೇಲೆ ನಿಂತು ಪ್ರಯಾಣ ತಡೆಗಟ್ಟುವ ಉದ್ದೇಶದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಹಾವೇರಿ-ದೇವಗಿರಿ ಇಂಜಿನಿಯರಿಂಗ್ ಕಾಲೇಜ್, ಆರ್‌ಟಿಒ-ಗಾಂದಿಪುರ, ಹಾವೇರಿ, ಅಗಡಿ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಬಿಡಲಾಗಿದೆ. ಹಾವೇರಿಯಿಂದ ಇಂಜಿನಿಯರಿಂಗ್ ಕಾಲೇಜ್‌ಗೆ 31 ಟ್ರಿಪ್‌ನಿಂದ 51 ಟ್ರಿಪ್‌ಗೆ ಏರಿಸಲಾಗಿದೆ. ಆರ್‌ಟಿಒನಿಂದ ಗಾಂಧಿಪುರಕ್ಕೆ 13 ಸರತಿಗೆ ಏರಿಸಲಾಗಿದೆ.
    ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಾವೇರಿ, ರಾಣೆಬೆನ್ನೂರ ಬಸ್ ನಿಲ್ದಾಣಗಳಲ್ಲಿ 8 ಗೃಹ ರಕ್ಷಕರನ್ನು ನೇಮಿಸಲಾಗಿದೆ. ಪೊಲೀಸ್ ಸಿಬ್ಬಂದಿಯೊಂದಿಗೆ ಗೃಹರಕ್ಷಕರು ಬಸ್ ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಸುರಕ್ಷತೆ ಒದಗಿಸಲಿದ್ದಾರೆ ಎಂದು ತಿಳಿಸಿದ್ದಾರೆ.
    ಸಾರಿಗೆ ಬಸ್ ಅವ್ಯವಸ್ಥೆ ಕುರಿತು ‘ವಿಜಯವಾಣಿ’ ಡಿ.23ರಿಂದ ಸರಣಿ ವರದಿ ಪ್ರಕಟಿಸಿತ್ತು. ಡಕೋಟಾ ಎಕ್ಸ್‌ಪ್ರೆಸ್ ರಸ್ತೆಯಲ್ಲೇ ಸ್ಟಾಫ್, ಪ್ರಯಾಣಿಕರ ಜೀವಕ್ಕಿಲ್ಲ ಗ್ಯಾರಂಟಿ ಹಾಗೂ ಹೆಚ್ಚಿನ ಬಸ್ ಓಡಿಸಿ ಸಮಸ್ಯೆಗೆ ಸ್ಪಂದಿಸಿ (ಲೌಡ್ ಸ್ಪೀಕರ್) ಎಂಬ ಶೀರ್ಷಿಕೆಯಡಿ ಪ್ರಯಾಣಿಕರು ನಿತ್ಯ ಅನುಭವಿಸುವ ಸಂಕಟಗಳ ಕುರಿತು ಎಳೆ ಎಳೆಯಾಗಿ ಬಿಚ್ಚಿ ಇಡಲಾಗಿತ್ತು. ವರದಿಯಿಂದ ಎಚ್ಚೆತ್ತೆ ಇಲಾಖೆ ವಿವಿಧ ಕ್ರಮಗಳನ್ನು ಕೈಗೊಂಡು ಆ ಕುರಿತು ಪತ್ರಿಕೆಗೆ ಪತ್ರದ ಮೂಲಕ ತಿಳಿಸಿದೆ.
    ಡಿಪೋ ಮ್ಯಾನೇಜರ್‌ಗೆ ಹೊಣೆ
    ಎಲ್ಲ ಘಟಕಗಳ ವ್ಯವಸ್ಥಾಪಕರು ಪ್ರತಿದಿನ ಬೆಳಗ್ಗೆ ಮೊದಲ ಅವಧಿಯಲ್ಲಿ ಚಾಲಕರು, ನಿರ್ವಾಹಕರಿಗೆ ಅಗತ್ಯ ಸೂಚನೆ ನೀಡಬೇಕು. ಪ್ರಯಾಣಿಕರು ಫುಟ್‌ಬೋರ್ಡ್ ಮೇಲೆ ನಿಂತು ಸಂಚರಿಸದಂತೆ ಹಾಗೂ ಅವರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ, ತಿಳಿವಳಿಕೆ ನೀಡುವಂತೆ ಡಿಸಿ ಶಶಿಧರ ಆದೇಶಿಸಿದ್ದಾರೆ.
    ಫೆಬ್ರವರಿಯಲ್ಲಿ 50 ಹೊಸ ಬಸ್
    ಗುಜರಿ ಸೇರಬೇಕಾದ 120ಕ್ಕೂ ಹೆಚ್ಚು ಬಸ್‌ಗಳ ಕುರಿತು ಪ್ರತಿಕ್ರಿಯಿಸಿರುವ ಡಿಸಿ ಶಶಿಧರ ಅವರು, ಫೆಬ್ರವರಿಯಲ್ಲಿ 50ಕ್ಕೂ ಅಧಿಕ ಹೊಸ ಬಸ್ ಬರಲಿದ್ದು, ಹೆಚ್ಚುವರಿ ಸಿಬ್ಬಂದಿಯ ನೇಮಕವೂ ಆಗಲಿದೆ. ಆ ನಂತರ 30ಕ್ಕೂ ಅಧಿಕ ಬಸ್‌ಗಳನ್ನು ಗುಜರಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts