More

    ವಾಲ್ಮೀಕಿ ಸಮಾಜ ಒಗ್ಗೂಡಿಸಿದ್ದು ಬಿಜೆಪಿ; ಶೇ.7ರಷ್ಟು ಮೀಸಲಾತಿ ಹೆಚ್ಚಿಸಿದ್ದು ಬೊಮ್ಮಾಯಿ ಸರ್ಕಾರ; ಎಸ್‌ಟಿ ಸಮಾವೇಶದಲ್ಲಿ ಮಾಜಿ ಸಚಿವ ರಾಜುಗೌಡ ಹೇಳಿಕೆ

    ಹಾವೇರಿ: ಬಿ.ಎಸ್.ಯಡಿಯೂರಪ್ಪ ಅವರು ವಾಲ್ಮೀಕಿ ಜಯಂತ್ಯುತ್ಸವ ಘೋಷಿಸಿದ ಬಳಿಕ ನಮ್ಮ ಸಮಾಜ ಒಗ್ಗಟ್ಟಾಯಿತು. ಬಸವರಾಜ ಬೊಮ್ಮಾಯಿ ಅವರು ಶೇ.3ರಿಂದ 7ರಷ್ಟು ಮೀಸಲಾತಿ ಹೆಚ್ಚಿಸಿದ್ದರಿಂದ ನಮ್ಮ ಸಮಾಜಕ್ಕೆ ಅನುಕೂಲವಾಯಿತು. ವಾಲ್ಮೀಕಿ ಸಮಾಜಕ್ಕೆ ಯಾರಾದರೂ ಗೌರವ ಕೊಟ್ಟಿದ್ದರೆ ಅದು ಬಿಜೆಪಿ ಪಕ್ಷ ಮಾತ್ರ ಎಂದು ಮಾಜಿ ಸಚಿವ ರಾಜುಗೌಡ ಹೇಳಿದರು.
    ಬಿಜೆಪಿ ಜಿಲ್ಲಾ ಎಸ್‌ಟಿ ಮೋರ್ಚಾ ವತಿಯಿಂದ ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ‘ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.
    ಮೊದಲು ನಾವೆಲ್ಲರೂ ಒಟ್ಟಾಗಿ ಸೇರಲೂ ಆಗುತ್ತಿರಲಿಲ್ಲ. ಬಿಎಸ್‌ವೈ ಅವರು ವಾಲ್ಮೀಕಿ ಜಯಂತಿ ಘೋಷಿಸಿದ ಬಳಿಕ ಎಲ್ಲರೂ ಒಂದೆಡೆ ಸೇರಿ ಸಮಾಜದ ಅಭಿವೃದ್ಧಿ ಕುರಿತು ಚಿಂತನೆ ನಡೆಸಲು ಸಾಧ್ಯವಾಯಿತು. ರಾಜನಹಳ್ಳಿ ವಾಲ್ಮೀಕಿ ಪೀಠದ ಸ್ವಾಮೀಜಿಯವರು ಮೀಸಲಾತಿಗಾಗಿ 254 ದಿನ ಧರಣಿ ಕುಳಿತರು. ‘ನನಗೆ ಮಂತ್ರಿ ಸ್ಥಾನ ಬೇಡ, ಮೊದಲು ನಮಗೆ ಮೀಸಲಾತಿ ಹೆಚ್ಚಿಸಿ’ ಎಂದು ಒತ್ತಾಯಿಸಿದ್ದೆ. ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲೂ ಸಿದ್ಧನಾಗಿದ್ದೆ. ಕೊನೆಗೆ ಬಸವರಾಜ ಬೊಮ್ಮಾಯಿ ಅವರು ಶೇ.3ರಿಂದ 7ಕ್ಕೆ ಮೀಸಲಾತಿ ಹೆಚ್ಚಿಸಿದರು. ಇದರಿಂದ ನಮ್ಮ ಸಮಾಜದ ಮಕ್ಕಳು ಲಾಭ ಪಡೆಯುತ್ತಿದ್ದಾರೆ ಎಂದರು.
    ಇಷ್ಟೆಲ್ಲ ಮಾಡಿದರೂ ನಮ್ಮ ಸಮಾಜದ 15 ಅಭ್ಯರ್ಥಿಗಳು ಸೋಲು ಕಂಡರು. ಕಾಂಗ್ರೆಸ್‌ನ ಸುಳ್ಳು ಹಾಗೂ ಗ್ಯಾರಂಟಿಯಿಂದಾಗಿ ಮೀಸಲಾತಿ ಕೊಟ್ಟರೂ ಜನ ನಮ್ಮ ಕೈಹಿಡಿಯಲಿಲ್ಲ. ಮೀಸಲಾತಿ ಹೆಚ್ಚಿಸುವುದು ಸಾಧ್ಯವೇ ಇಲ್ಲ ಎಂದು ಸುಳ್ಳು ಹಬ್ಬಿಸಿ ಅವರು ಗೆದ್ದರು. ಆದರೂ ಸಮಾಜಕ್ಕೆ ಮೀಸಲಾತಿ ಹೆಚ್ಚಿಸಿದ ತೃಪ್ತಿ ನಮಗಿದೆ ಎಂದರು.
    ಕಾಂಗ್ರೆಸ್‌ನವರು ರಾಮನನ್ನು ಟೆಂಟ್‌ನಲ್ಲಿ ಕೂರಿಸಿದ್ದರು. ಮೋದಿ ಅವರು ಬಾಲರಾಮನನ್ನು ಭವ್ಯವಾದ ಮಂದಿರದಲ್ಲಿ ಪ್ರತಿಷ್ಠಾಪಿಸಿದರು. ವಾಲ್ಮೀಕಿ ಹೆಸರನ್ನು ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಇಟ್ಟು ಗೌರವ ಸೂಚಿಸಿದರು. ಇದು ನಮ್ಮ ಸಮುದಾಯವರಯ ಹೆಮ್ಮೆ ಪಡಬೇಕಾದ ವಿಷಯ ಎಂದರು.
    ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಓಲೇಕಾರ, ಜಿಲ್ಲಾಧ್ಯಕ್ಷ ಶಿವಾನಂದ ಯಮನಕ್ಕನವರ, ಗವಿಸಿದ್ದಪ್ಪ ದ್ಯಾಮಣ್ಣವರ, ಶಿವಪುತ್ರಪ್ಪ ಕಲಕೋಟಿ, ಮಂಜುಳಾ ಕರಬಸಮ್ಮನವರ, ಮಾಲತೇಶ ನಾಯಕ, ರಾಮಣ್ಣ ಕೋಡಿಹಳ್ಳಿ, ಇತರರು ಇದ್ದರು.

    ಸಚಿವ ಜಾರಕಿಹೊಳಿಗೆ ಟಾಂಗ್
    ಮೀಸಲಾತಿಯಡಿ ಗೆದ್ದಿರುವ ಕೆಲವರು ಮುಖಂಡರ ಮುಂದೆ ಕೈಕಟ್ಟಿ ಕುಳಿತುಕೊಳ್ಳುತ್ತಿದ್ದಾರೆ. ಸೋತರೂ ನಮ್ಮ ಸಮಾಜಕ್ಕೆ ನ್ಯಾಯ ಕೊಡಿಸಿದ ಸಂತೋಷ ನಮಗಿದೆ. ವಿದ್ಯಾವಂತರಾಗಿ, ಉತ್ತಮ ಉದ್ಯೋಗ ಪಡೆಯಲಿ ಎಂದು ಬಿಜೆಪಿ ಸರ್ಕಾರ ಎಸ್‌ಟಿ ಸಮುದಾಯದ ಮೀಸಲಾತಿ ಹೆಚ್ಚಳ ಮಾಡಿದೆ. ಸ್ಮಶಾನದಲ್ಲಿ ಮಲಗಲಿ ಎಂದಲ್ಲ ಎಂದು ರಾಜುಗೌಡ ಹೇಳುವ ಮೂಲಕ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

    ಪಕ್ಷದ್ರೋಹಿಗಳು ಹೊರ ಹೋಗಲಿ
    ಎಂಎಲ್‌ಎ ಚುನಾವಣೆಯಲ್ಲಿ ನಮ್ಮ ಪಕ್ಷದ ಕೆಲ ಮುಖಂಡರು ದುಡ್ಡು ಹೊಡೆದು ಕಾಂಗ್ರೆಸ್‌ಗೆ ಬೆಂಬಲ ಕೊಟ್ಟಿದ್ದಾರೆ. ಎರಡೂ ಕಡೆ ರೊಕ್ಕ ಹೊಡೆದು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಒಳಒಪ್ಪಂದ, ದ್ರೋಹ ಮಾಡುವವರು ಪಕ್ಷದಿಂದ ಹೊರಗೆ ಹೋಗಬೇಕು. ರಾಜ್ಯವನ್ನು ಕಳೆದುಕೊಂಡಿದ್ದೇವೆ. ಈಗ ಮೋದಿ ಅವರನ್ನು ಕಳೆದುಕೊಂಡರೆ ದೇಶಕ್ಕೆ ಪಾಕಿಸ್ತಾನದ ಸ್ಥಿತಿ ಬರುತ್ತದೆ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಎಚ್ಚರಿಸಿದರು. ಒಂದು ತಿಂಗಳು ಮೊದಲೇ ಏಪ್ರಿಲ್‌ನಲ್ಲಿ ಚುನಾವಣೆ ಬರುತ್ತದೆ. ಈ ತಿಂಗಳ ಅಂತ್ಯದಲ್ಲಿ ಚುನಾವಣೆ ಘೋಷಣೆ ಆಗಬಹುದು ಎಂದರು.

    ಕೋಟ್:
    ಆತ್ಮಸಾಕ್ಷಿಗೆ ಮೋಸ ಮಾಡುವ ಕೆಲಸವನ್ನು ಎಂದಿಗೂ ಮಾಡಿಲ್ಲ. ಹೋರಾಟದ ಬದುಕು ನಮ್ಮದು. ಕೈಕಟ್ಟಿಕೊಂಡು ಯಾರ ಮುಂದೆಯೂ ನಿಲ್ಲುವ ಕುಲ ನಮ್ಮದಲ್ಲ. ವಿಜಯೇಂದ್ರ ಅವರು ಎಲ್ಲ ಸಮುದಾಯದವರನ್ನೂ ಒಗ್ಗೂಡಿಸಿಕೊಂಡು ಹೋಗುತ್ತಿದ್ದಾರೆ. ನಿನ್ನೆ ಸೋತಿರಬಹುದು. ನಾಳೆ ಗೆಲುವು ನಮ್ಮದೇ. ಲೋಕಸಭೆ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯ ಬಿಜೆಪಿಗೆ ಬೆಂಬಲವಾಗಿ ನಿಲ್ಲುತ್ತದೆ.
    – ರಾಜುಗೌಡ, ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts