More

    ಖಾಸಗಿ ಶಿಶುಪಾಲನಾ ಕೇಂದ್ರಕ್ಕೆ ವಿರೋಧ; ಸಂಬಳ ಹೆಚ್ಚಳಕ್ಕೆ ಆಗ್ರಹ; ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರ ಪ್ರತಿಭಟನೆ

    ಹಾವೇರಿ: ರಾಜ್ಯ ಸರ್ಕಾರ ವಿವಿಧ ಇಲಾಖೆಗಳ ಮೂಲಕ ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿರುವ ಪ್ರದೇಶಗಳಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಿಶುಪಾಲನಾ ಕೇಂದ್ರಗಳನ್ನು ಶಾಲಾ ಪೂರ್ವ ತರಗತಿಗಳನ್ನು ಪ್ರಾರಂಭಿಸಲು ಮುಂದಾಗಿರುವುದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ತಯಾರಕರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
    ನಗರದ ಕಾಗಿನೆಲೆ ರಸ್ತೆಯ ಮುರುಘಾ ಮಠದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಪಂಚಾಯಿತಿ ಆವರಣದ ಸಂಸದರ ಕಚೇರಿ ಎದುರು ಕೆಲಕಾಲ ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
    ಎಐಟಿಯುಸಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ ಲಾಲನೆ ಪಾಲನೆ, ಪೌಷ್ಠಿಕ ಆಹಾರ, ಶಾಲಾ ಪೂರ್ವ ಶಿಕ್ಷಣ(ಎಲ್‌ಕೆಜಿ-ಯುಕೆಜಿ) ಇತ್ಯಾದಿ ಸೇವೆಗಳನ್ನು ನೀಡಲಾಗುತ್ತಿದೆ. ಆದರೆ, ಇದೀಗ ಸರ್ಕಾರ ಖಾಸಗಿ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡುತ್ತಿರುವುದು ಅಂಗನವಾಡಿ ಕೇಂದ್ರಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕಾರ್ಮಿಕರ ಮಕ್ಕಳಿಗೆ ಶಿಶುಪಾಲನಾ ಕೇಂದ್ರ, ಕಟ್ಟಡ ಮತ್ತು ಕಾರ್ಮಿಕರ ಮಂಡಳಿಯ ಆಶ್ರಯದಲ್ಲಿ ಶಿಶುಪಾಲನಾ ಕೇಂದ್ರ ಆರಂಭಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ 4- 5 ವರ್ಷದ ಮಕ್ಕಳಿಗೆ ಎಲ್‌ಕೆಜಿ-ಯುಕೆಜಿ ಆರಂಭಿಸಲು ಆದೇಶ ನೀಡಿದ್ದು, ಅಂಗನವಾಡಿ ಕೇಂದ್ರಗಳ ಕೆಲಸಗಳಿಗೆ ಪರ‌್ಯಾಯವಾಗಿ ಇವುಗಳ ರಚನೆ ಮಾಡಲಾಗಿದೆ. ಇದರಿಂದ ಹಂತ ಹಂತವಾಗಿ ಅಂಗನವಾಡಿಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗಿ, ಮಕ್ಕಳ ಕೊರತೆಯಿಂದ ಅಂಗನವಾಡಿಗಳು ಮುಚ್ಚುವ ಆತಂಕವಿದೆ ಎಂದರು.
    ಐ.ಸಿ.ಡಿಎಸ್.ಯೋಜನೆಯಡಿ ಶೇ.90ರಷ್ಟು ಕೇಂದ್ರ ಮತ್ತು ಶೇ.10ರಷ್ಟು ರಾಜ್ಯ ಸರ್ಕಾರದಂತೆ ಪಾಲಿನಂತೆ ಅನುದಾನದ ಮೊತ್ತ ನಿಗಧಿಯಾಗಿತ್ತು. ಆದರೆ, ಅದನ್ನು ಈಗ ಕೇಂದ್ರ ಶೇ.60 ಹಾಗೂ ರಾಜ್ಯ ಶೇ.40 ಎಂದು ಪರಿಷ್ಕರಿಸಿದೆ. ಇದರಿಂದ ಸದರಿ ಯೋಜನೆಯಡಿ ದುಡಿಯುವ ನೌಕರರಿಗೆ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಕೆಲಸದ ವೇಳೆ ಮೃತಪಟ್ಟ ಬಿಸಿಯೂಟ ತಯಾರಕರ ಕುಟುಂಬಕ್ಕೆ ಪರಿಹಾರ ನೀಡಬೇಕು. ಮಾಸಿಕ ಕನಿಷ್ಠ ವೇತನ 26 ಸಾವಿರ ರೂ. ಜಾರಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂಬರುವ ಬಜೆಟ್‌ನಲ್ಲಿ ಈಡೇರಿಸಬೇಕೆಂದು ಆಗ್ರಹಿಸಿದರು.

    ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿನಾಯಕ ಕುರುಬರ, ಜಿ.ಡಿ.ಪೂಜಾರ, ಸುನಂದಮ್ಮ ರೇವಣಕರ, ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

    ನುಡಿದಂತೆ ನಡೆಯದ ಕೈ ಸರ್ಕಾರ
    6ನೇ ಗ್ಯಾರಂಟಿಯನ್ನು ಚುನಾವಣೆ ಪೂರ್ವದಲ್ಲಿ ಖಾನಾಪೂರದಲ್ಲಿ ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಘೋಷಿಸಿ ಮರೆತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ., ಸಹಾಯಕಿಯರಿಗೆ 10 ಸಾವಿರ ರೂ. ನಿಗದಿ ಮಾಡಬೇಕು. ನಿವೃತ್ತಿ ಇಡಿಗಂಟು, ಇ.ಎಸ್.ಐ ಸೌಲಭ್ಯ ನೀಡಬೇಕು. ಬೆಳಗಾವಿ ತಾಲೂಕ ಬಸುರತ್ತೆ ಗ್ರಾಮದ ಅಂಗನವಾಡಿ ಸಹಾಯಕಿ ಮೇಲೆ ಹಲ್ಲೆ ಮಾಡಿ ಮೂಗನ್ನೆ ಕತ್ತರಿಸಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ರಕ್ಷಣೆ ಒದಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts