More

    ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ; ಲೋಕಸಭಾ ಚುನಾವಣೆ ನೋಡಲ್ ಅಧಿಕಾರಿಗಳಿಗೆ ತರಬೇತಿ ಶಿಬಿರದಲ್ಲಿ ಎಡಿಸಿ ಪೂಜಾರ ವೀರಮಲ್ಲಪ್ಪ ಸೂಚನೆ

    ಹಾವೇರಿ: ಜಿಲ್ಲೆಯಲ್ಲಿ ಸುಗಮ, ಪಾರದರ್ಶಕ, ಲೋಪರಹಿತ ಚುನಾವಣೆಗೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳ ಪಾತ್ರ ಬಹಳ ಪ್ರಮುಖವಾಗಿದೆ. ತಮ್ಮ ಕರ್ತವ್ಯ ಅರ್ಥಮಾಡಿಕೊಂಡು ಬದ್ಧತೆ ಹಾಗೂ ಚುನಾವಣಾ ಕಾರ್ಯದಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು ಎಂದು ಮುಂಬರುವ ಲೋಕಸಭಾ ಚುನಾವಣಾ ಪ್ರಕ್ರಿಯೆಗೆ ನಿಯೋಜನೆಗೊಂಡಿರುವ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಸೂಚನೆ ನೀಡಿದರು.
    ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆಯ ಜಿಲ್ಲೆಯ ವಿವಿಧ ಸಮಿತಿಗಳ ಉಸ್ತುವಾರಿ ಅಧಿಕಾರಿಗಳ ಮೊದಲ ಹಂತದ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.
    ಮಾನವ ಸಂಪನ್ಮೂಲ, ಚುನಾವಣಾ ತರಬೇತಿ, ಚುನಾವಣಾ ಸಾಮಗ್ರಿಗಳ ನಿರ್ವಹಣೆ, ಸಾರಿಗೆ, ಸೈಬರ್ ಸೆಕ್ಯೂರಿಟಿ ಮತ್ತು ಐಟಿ, ಸ್ವೀಪ್, ಕಾನೂನು ಮತ್ತು ಸುವ್ಯವಸ್ಥೆ, ಇವಿಎಂ, ಮಾದರಿ ನೀತಿ ಸಂಹಿತೆ ನಿಗಾ ಸಮಿತಿ, ಚುನಾವಣಾ ವೆಚ್ಚ ನಿರ್ವಹಣೆ, ಬ್ಯಾಲೇಟ್ ಮತ್ತು ಅಂಚೆ ಮತಪತ್ರ ವ್ಯವಸ್ಥೆ, ಮಾಧ್ಯಮ ಸಮನ್ವಯ, ಸಂಪರ್ಕ ಯೋಜನೆ, ಮತದಾರರ ಪಟ್ಟಿ, ದೂರು ನಿರ್ವಹಣೆ ಹಾಗೂ ಮತದಾರರ ಸಹಾಯವಾಣಿ ನಿರ್ವಹಣೆ, ಚುನಾವಣೆ ದೂರುಗಳ ನಿರ್ವಹಣೆ ಸಮಿತಿ ಒಳಗೊಂಡಂತೆ 14ಕ್ಕೂ ಅಧಿಕ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ಸಮಿತಿಗೆ ಚುನಾವಣಾ ಕಾರ್ಯದಲ್ಲಿ ಅನುಭವವುಳ್ಳ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಪ್ರತಿಯೊಬ್ಬರೂ ಆಯಾ ಸಮಿತಿಯ ಕರ್ತವ್ಯ, ಚುನಾವಣೆ ಗಂಭೀರತೆ ಅರಿತುಕೊಂಡು, ತಮ್ಮ ಸಮಿತಿ ಸದಸ್ಯರೊಂದಿಗೆ ಸಮನ್ವಯೊಂದಿಗೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ಸೂಚಿಸಿದರು.
    ಉಪನ್ಯಾಸಕ ಅರವಿಂದ ಐರಣಿ ವಿವಿಧ ಸಮಿತಿಗಳ ಕಾರ್ಯವ್ಯಾಪ್ತಿ, ಚುನಾವಣಾ ಆಯೋಗದ ನಿಯಮಾವಳಿಗಳ ಕುರಿತು ಉಪನ್ಯಾಸ ನೀಡಿದರು.
    ಉಪವಿಭಾಗಾಧಿಕಾರಿ ಮಹ್ಮದ್ ಖಿಜರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ನಾಗರಾಜ, ಡಿಡಿಪಿಐ ಸುರೇಶ ಹುಗ್ಗಿ, ಡಯಟ್ ಪ್ರಾಚಾರ್ಯ ಗಿರೀಶ ಪದಕಿ, ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ ಕೌಸರ್, ಎನ್.ಐ.ಸಿ. ಅಧಿಕಾರಿ ಬಿ.ಬಿ.ಹೆಗಡೆ, ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ, ಜಿಲ್ಲಾ ಅಂಕಿ-ಸಂಖ್ಯಾಧಿಕಾರಿ ಆರ್.ಎಂ.ಭುಜಂಗ, ಪಶು ಸಂಗೋಪನೆ ಇಲಾಖೆ ಅಧಿಕಾರಿ ಡಾ.ಸತ್ಯಪ್ಪ ಸಂತಿ, ಜಿ.ಪಂ.ಮುಖ್ಯಲೆಕ್ಕಾಧಿಕಾರಿ ವಸಂತಕುಮಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಜಿಲ್ಲಾ ನೋಂದಣಾಧಿಕಾರಿ ಮಹೇಶ ಪಂಡಿತ, ಕೃಷಿ ಅಧಿಕಾರಿ ಬಸವರಾಜ ಕೊಪ್ಪದ, ವಾಲ್ಮೀಕಿ ನಿಗಮದ ಅಧಿಕಾರಿ ತೇಜರಾಜ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರವೀಣ, ಮತ್ತಿತರರು ಉಪಸ್ಥಿತರಿದ್ದರು.
    1,020 ನೌಕರರಿಗೆ ರಿಯಾಯ್ತಿ :
    ಜಿಲ್ಲೆಯಲ್ಲಿ 10,965 ಸರ್ಕಾರಿ ನೌಕರರಿದ್ದಾರೆ, ಈ ಪೈಕಿ ಬೇರೆ ಬೇರೆ ಕಾರಣಗಳಿಂದ ಈಗಾಗಲೇ 1,020 ನೌಕರರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಲಾಗಿದೆ. ಮತಗಟ್ಟೆ ಅಧಿಕಾರಿ, ಸಹಾಯಕ ಅಧಿಕಾರಿಗಳ ಕಾರ್ಯಕ್ಕೆ ಏಳು ಸಾವಿರ ಅಧಿಕಾರಿ, ಸಿಬ್ಬಂದಿ ಅಗತ್ಯವಿದೆ. ಇದರೊಂದಿಗೆ ಎಸ್‌ಎಸ್‌ಟಿ, ವಿ.ಎಸ್‌ಟಿ ಹಾಗೂ ವಿವಿಧ ಚುನಾವಣಾ ಕಾರ್ಯಕ್ಕೆ ಉಳಿದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಎಲ್ಲರಿಗೂ ಸೂಕ್ತ ತರಬೇತಿ ನೀಡಲಾಗುವುದು ಎಂದು ಎಡಿಸಿ ವೀರಮಲ್ಲಪ್ಪ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts