More

    ವೈಯಕ್ತಿಕ ನೋವಿನ ನಡುವೆ ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ ಕ್ರಿಕೆಟಿಗರು!

    ಬೆಂಗಳೂರು: ವೈಯಕ್ತಿಕ ಕಷ್ಟ-ನೋವುಗಳ ನಡುವೆಯೂ ವೃತ್ತಿಜೀವನದ ಸವಾಲನ್ನು ದಿಟ್ಟವಾಗಿ ಎದುರಿಸಿ ನಿಲ್ಲುವುದರಲ್ಲೇ ಪ್ರತಿಯೊಬ್ಬರ ಯಶಸ್ಸು ಅಡಗಿರುತ್ತದೆ. ಇದೇ ರೀತಿ ಐಪಿಎಲ್‌ನಲ್ಲೂ ಕೆಲ ಕ್ರಿಕೆಟಿಗರು ಇದೀಗ ವೈಯಕ್ತಿಕ ಜೀವನದ ನೋವುಗಳ ನಡುವೆಯೂ ತಮ್ಮ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ. ಅವರೇ ಕೆಕೆಆರ್ ತಂಡದ ನಿತೀಶ್ ರಾಣಾ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಂದೀಪ್ ಸಿಂಗ್, ರಾಜಸ್ಥಾನ ರಾಯಲ್ಸ್ ತಂಡದ ಬೆನ್ ಸ್ಟೋಕ್ಸ್ ಮತ್ತು ಆರ್‌ಸಿಬಿ ತಂಡದ ಮೊಹಮದ್ ಸಿರಾಜ್.

    ವೈಯಕ್ತಿಕ ಜೀವನದಲ್ಲಿ ಸಾವು-ನೋವುಗಳು ಎದುರಾಗುತ್ತಿದ್ದರೂ, ಈ ಆಟಗಾರರು ಅದರ ನೋವನ್ನು ಮೈದಾನದಲ್ಲಿ ತೋರಿಸಿದೆ ಅಥವಾ ಅದರಿಂದ ತಮ್ಮ ಆಟದ ಮೇಲೆ ಪರಿಣಾಮ ಬೀರದಂತೆ ಐಪಿಎಲ್ ತಂಡಗಳಿಗೆ ಬಲ ತುಂಬಿದ್ದಾರೆ. ಈ ಮೂಲಕ ವೃತ್ತಿಜೀವನದ ಕರ್ತವ್ಯಕ್ಕೆ ಪ್ರಧಾನ ಆದ್ಯತೆ ನೀಡಿದ್ದಾರೆ.

    ಕೆಕೆಆರ್ ತಂಡ ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡುವುದಕ್ಕೆ ಮುನ್ನ ನಿತೀಶ್ ರಾಣಾ ಅವರಿಗೆ ಮಾವನ ಸಾವಿನ ಸುದ್ದಿ ಎದುರಾಗಿತ್ತು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಮೃತಪಟ್ಟಿದ್ದರು. ಇದರ ನಡುವೆಯೂ ಕೆಕೆಆರ್ ಪರ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ್ದ ನಿತೀಶ್ ರಾಣಾ, ಅರ್ಧಶತಕ ಪೂರೈಸಿದ ಬೆನ್ನಲ್ಲೇ ಮಾವ ಸುರಿಂದರ್ ಅವರ ಹೆಸರಿದ್ದ ಕೆಕೆಆರ್ ಜೆರ್ಸಿ ಪ್ರದರ್ಶಿಸಿ ಗೌರವ ಸಲ್ಲಿಸಿದ್ದರು.

    ಇನ್ನು ಅದೇ ದಿನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸನ್‌ರೈಸರ್ಸ್‌ ವಿರುದ್ಧ ಕಣಕ್ಕಿಳಿಯುವುದಕ್ಕೆ ಹಿಂದಿನ ದಿನ ಮಂದೀಪ್ ಸಿಂಗ್ ಅವರ ತಂದೆ ಮೃತಪಟ್ಟಿದ್ದರು. ಇದರ ನಡುವೆಯೂ ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸಿದ್ದ ಮಂದೀಪ್ ಸಿಂಗ್, ಮಯಾಂಕ್ ಅಗರ್ವಾಲ್ ಗೈರಿನಲ್ಲಿ ತಂಡದ ಆರಂಭಿಕನ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು. ಜತೆಗೆ ಉತ್ತಮ ಫೀಲ್ಡಿಂಗ್ ನಿರ್ವಹಣೆಯಿಂದಲೂ ಗಮನಸೆಳೆದಿದ್ದರು.

    ವೈಯಕ್ತಿಕ ನೋವಿನ ನಡುವೆಯೂ ಐಪಿಎಲ್‌ನಲ್ಲಿ ದಿಟ್ಟ ಆಟವಾಡಿದ ಇವರಿಬ್ಬರ ಬಗ್ಗೆ ದಿಗ್ಗಜ ಸಚಿನ್ ತೆಂಡುಲ್ಕರ್ ಅವರೂ ಟ್ವಿಟರ್‌ನಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ‘ನಾವು ಪ್ರೀತಿಸುವವರು ಮೃತಪಟ್ಟಾಗ ನೋವಾಗುತ್ತದೆ. ಅವರಿಗೆ ಅಂತಿಮ ನಮನವನ್ನೂ ಸಲ್ಲಿಸಲು ಸಾಧ್ಯವಾಗದೆ ಇದ್ದಾಗ ಇನ್ನಷ್ಟು ನೋವಾಗುತ್ತದೆ. ನಿತೀಶ್ ಮತ್ತು ಮಂದೀಪ್ ಕುಟುಂಬದ ದುರಂತದ ನಡುವೆಯೂ ಆಡಿರುವುದಕ್ಕೆ ಹ್ಯಾಟ್ಸ್ ಆಫ್​. ಉತ್ತಮವಾಗಿ ಆಡಿದಿರಿ’ ಎಂದು ಟ್ವೀಟಿಸಿದ್ದಾರೆ. ಸಚಿನ್ ತೆಂಡುಲ್ಕರ್ ಅವರೂ 1999ರ ವಿಶ್ವಕಪ್ ವೇಳೆ ತಂದೆ ಮೃತಪಟ್ಟ ಬೆನ್ನಲ್ಲೇ ಅವರ ಅಂತಿಮ ವಿಧಿವಿಧಾನಗಳನ್ನು ಪೂರ್ಣಗೊಳಿಸಿ ಇಂಗ್ಲೆಂಡ್‌ಗೆ ಮರಳಿದ್ದರು. ಅಲ್ಲದೆ ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕವನ್ನೂ ಸಿಡಿಸಿದ್ದರು.

    ಭಾನುವಾರ ಮುಂಬೈ ವಿರುದ್ಧ ಭರ್ಜರಿ ಶತಕ ಸಿಡಿಸಿದ ರಾಜಸ್ಥಾನ ರಾಯಲ್ಸ್ ತಂಡದ ಬೆನ್ ಸ್ಟೋಕ್ಸ್ ಕೂಡ ತಂದೆಯ ಅನಾರೋಗ್ಯದಿಂದಾಗಿ ತಡವಾಗಿ ಐಪಿಎಲ್‌ಗೆ ಆಗಮಿಸಿದ್ದರು. ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರ ತಂದೆ ತವರೂರು ನ್ಯೂಜಿಲೆಂಡ್‌ನಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದು, ಅವರ ಜತೆ ಹೆಚ್ಚಿನ ಸಮಯ ಕಳೆಯುವ ಸಲುವಾಗಿ ಸ್ಟೋಕ್ಸ್ ಜತೆಗಿದ್ದರು. ಆದರೆ ಈ ನಡುವೆ ಐಪಿಎಲ್‌ನಲ್ಲಿ ಆಡುವ ಕರ್ತವ್ಯದ ಕರೆ ಬಂದಾಗ ರಾಯಲ್ಸ್ ತಂಡವನ್ನು ಕೂಡಿಕೊಂಡಿರುವ ಅವರು ವೈಯಕ್ತಿಕ ನೋವನ್ನು ಮರೆತು ಐಪಿಎಲ್‌ನಲ್ಲಿ ತಂಡದ ಗೆಲುವಿಗೆ ಆಸರೆಯಾಗಿದ್ದಾರೆ.

    ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅಮೋಘ ಬೌಲಿಂಗ್ ನಿರ್ವಹಣೆಯ ಮೂಲಕ ಗಮನ ಸೆಳೆದ ಆರ್‌ಸಿಬಿ ವೇಗಿ ಮೊಹಮದ್ ಸಿರಾಜ್ ಕೂಡ ವೈಯಕ್ತಿಕ ನೋವಿನ ನಡುವೆ ಆ ಅತ್ಯುತ್ತಮ ಬೌಲಿಂಗ್ ನಿರ್ವಹಣೆ ತೋರಿದ್ದರು. ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಮುನ್ನಾದಿನವಷ್ಟೇ ಅವರಿಗೆ ಹೈದರಾಬಾದ್‌ನಲ್ಲಿ ತಂದೆ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಬಂದಿತ್ತು. ಪಂದ್ಯದಲ್ಲಿ ಅಮೋಘ ನಿರ್ವಹಣೆ ತೋರಿ ಮತ್ತೆ ಮನೆಗೆ ಕರೆ ಮಾಡಿದಾಗ ತಂದೆ ಚೇತರಿಸಿಕೊಂಡು ಮನೆಗೆ ಮರಳಿದ ಶುಭ ಸುದ್ದಿಯೂ ಅವರಿಗೆ ಲಭಿಸಿತ್ತು. ಅದರಿಂದ ನನಗೆ ಪಂದ್ಯದಲ್ಲಿ ತೋರಿದ ಉತ್ತಮ ನಿರ್ವಹಣೆಗಿಂತಲೂ ಖುಷಿಯಾಗಿತ್ತು ಎಂದು ಮೊಹಮದ್ ಸಿರಾಜ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts