More

    ಗಣೇಶ-ಈದ್ ಮಿಲಾದ್ ಹಬ್ಬ ಶಾಂತಿಯುತವಾಗಿ ಆಚರಿಸಿ: ಎಸ್ಪಿ ಸುಜಿತಾ ಮನವಿ

    ಹಾಸನ: ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬವನ್ನು ಹಿಂದು ಮತ್ತು ಮುಸ್ಲಿಂ ಬಾಂಧವರು ಶಾಂತಿಯುತವಾಗಿ ಆಚರಿಸುವಂತೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಎಂ.ಎಸ್. ಸುಜಿತಾ ಮನವಿ ಮಾಡಿದರು.

    ನಗರದ ಎಸ್ಪಿ ಕಚೇರಿ ಆವರಣದಲ್ಲಿ ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬ ಪ್ರಯುಕ್ತ ಮಂಗಳವಾರ ಕರೆಯಲಾಗಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಧಾರ್ಮಿಕ ಮುಖಂಡರ ಒಳಗೊಂಡ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಈ ತಿಂಗಳಲ್ಲಿ ಮೊದಲು ಗೌರಿ -ಗಣೇಶ ಹಬ್ಬವು ಸೆ.18ರಂದು ನಡೆದರೆ, ಈದ್ ಮಿಲಾದ್ ಹಬ್ಬವು ಸೆ.28ರಂದು ನಡೆಯಲಿದೆ. ಈ ವೇಳೆ ಕೆಲ ನಿಯಮ, ಸೂಚನೆಗಳನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದರು.

    ಅಹಿತಕರ ಘಟನೆಗಳು ನಡೆಯದಿರಲಿ

    ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬವನ್ನು ಹಿಂದು ಮತ್ತು ಮುಸ್ಲಿಂ ಬಾಂಧವರು ಶಾಂತಿಯುತವಾಗಿ ಆಚರಿಸಬೇಕು. ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ದಿನದಿಂದ ವಿಸರ್ಜನೆಯಾಗುವವರೆಗೆ ಗಣೇಶ ಮೂರ್ತಿಗಳ ಜವಾಬ್ದಾರಿ ಸಮಿತಿಯವರಾಗಿರುತ್ತದೆ. ಗಣೇಶ ಮೂರ್ತಿಗಳ ವಿಸರ್ಜನೆ ಮತ್ತು ಈದ್ ಮಿಲಾದ್ ಹಬ್ಬದ ಮೆರವಣಿಗೆ ಸಮಯದಲ್ಲಿ ಸಮಿತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಲೆಂಟಿಯರ್ಸ್‌ಗಳನ್ನು ನೇಮಕ ಮಾಡಿಕೊಂಡು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಮೆರವಣಿಗೆ ಮಾರ್ಗಗಳಲ್ಲಿ ಸಂಚಾರಕ್ಕೆ ಅಡಚಣೆಯಾಗದಂತೆ ಪೊಲೀಸರೊಂದಿಗೆ ಸಹಕರಿಸಬೇಕು. ಮೆರವಣಿಗೆ ಸಮಯ ನಿಗದಿ ಮಾಡಿದ ಸಮಯದಲ್ಲಿ ಪೂರ್ಣಗೊಳಿಸಬೇಕು. ಧ್ವನಿವರ್ಧಕ ಅಳವಡಿಕೆಯಿಂದ ನಿಗದಿಪಡಿಸಿರುವ ಶಬ್ದಕ್ಕಿಂತ ಹೆಚ್ಚಿನ ಧ್ವನಿ ಹೊರಡಿಸಬಾರದು ಎಂದು ಸೂಚನೆ ನೀಡಿದರು.

    ಪ್ರತಿ ಗಣಪತಿ ಪೆಂಡಾಲ್ ಬಳಿ ಸಿ.ಸಿ. ಕ್ಯಾಮೆರಾವನ್ನು ಅಳವಡಿಸಿಕೊಳ್ಳಬೇಕು. ಧ್ವನಿವರ್ಧಕ ಅಳವಡಿಸಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಗಣಪತಿ ವಿಸರ್ಜನೆ ಮೆರವಣಿಗೆಯ ಮಾರ್ಗವನ್ನು ಮತ್ತು ಸಮಯವನ್ನು ಮುಂಚಿತವಾಗಿ ನೀಡುವಂತೆ ಆಯೋಜಕರಿಗೆ ತಿಳಿಸಬೇಕು. ಮೆರವಣಿಗೆ ಹೋಗುವ ಮಾರ್ಗಗಳಲ್ಲಿ, ರಸ್ತೆಗೆ ಅಡ್ಡಲಾಗಿ ಎಲೆಕ್ಟ್ರಿಕಲ್ ತಂತಿಗಳು ಇದ್ದಲ್ಲಿ ಚೆಸ್ಕಾಂ ಸಿಬ್ಬಂದಿಗೆ ಹೇಳಿ ತೆರವುಗೊಳಿಸಬೇಕು ಹಾಗೂ ನಿಗದಿತ ಸಮಯದಲ್ಲಿ ಗಣಪತಿ ವಿಸರ್ಜನೆ ಮಾಡಲು ಪೊಲೀಸರಿಗೆ ಸಹಕರಿಸುವಂತೆ ಮನವಿ ಮಾಡಿದರು.

    ಈದ್ ಮಿಲಾದ್ ಹಬ್ಬದ ದಿನ ಮುಸ್ಲಿಂ ಬಾಂಧವರ ಮೆರವಣಿಗೆ ಮತ್ತು ಗಣೇಶ ಮೂರ್ತಿಯ ಮೆರವಣಿ ವೇಳೆ ಮುಖಾ- ಮುಖಿಯಾಗುವ ಸಂದರ್ಭ ಬಂದಲ್ಲಿ ಪೊಲೀಸರು ಸೂಚಿಸಿದಂತೆ ಮಾರ್ಗ ಬದಲಾವಣೆ ಮಾಡಿಕೊಂಡು ಮೆರವಣಿಗೆ ಕಾರ್ಯಕ್ರಮ ಮುಂದುವರಿಸಬೇಕು. ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ನೀರಿಗೆ ಇಳಿಯುವಾಗ ಸುರಕ್ಷಾ ಕವಚ ಉಪಯೋಗಿಸಬೇಕು. ಈಜು ಬರುವವರು ಮಾತ್ರ ನೀರಿಗೆ ಇಳಿಯಬೇಕು. ಮಕ್ಕಳು ನೀರಿಗೆ ಇಳಿಯದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಎಂ.ಕೆ. ತಮ್ಮಯ್ಯ ಹಾಗೂ ಹಿಂದು- ಮುಸ್ಲಿಂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts